ಬೆಂಗಳೂರು, ಮೇ.18 www.bengaluruwire.com : ಸಾಂಸ್ಕೃತಿಕ ಲೋಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಪೊರೇಟ್ ಲೋಕ ಯತ್ನಿಸುತ್ತಿದೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ ಎನ್ ಮೋಹನ್ ಅಭಿಪ್ರಾಯಪಟ್ಟರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
ನಾಲ್ಕು ಗೋಡೆಗಳ ಮಧ್ಯೆ ಇದ್ದ ರಂಗಭೂಮಿಯನ್ನು ಅಲ್ಲಿಂದ ಬಿಡುಗಡೆ ಮಾಡಿ ಜನರ ಬಳಿಗೆ ಕೊಂಡೊಯ್ಯಲು ದೊಡ್ಡ ಚಳವಳಿ ನಡೆಯಿತು. ಜನರ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ನಡೆಯಿತು. ಆದರೆ ಈಗ ಕಾರ್ಪೊರೇಟ್ ಜಗತ್ತು ಜನರ ಬಳಿಯಿಂದ ಕಿತ್ತು ಮತ್ತೆ ಅದನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಲು ಯತ್ನಿಸುತ್ತಿದೆ ಎಂದರು.

ರಂಗಭೂಮಿ ಜನರ ಒಡನಾಡಿ. ಅದು ಪ್ರಶ್ನಿಸಲು ಪ್ರೇರೇಪಿಸುತ್ತದೆ. ಸಮಾಜ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಆದ ಕಾರಣಕ್ಕಾಗಿಯೇ ರಂಗಭೂಮಿಯ ಮನಸ್ಥಿತಿಯನ್ನು ಬದಲಿಸುವ ತುರ್ತು ಪ್ರಭುತ್ವಕ್ಕೆ ಇದೆ. ಸಾಹಿತ್ಯ ಹಾಗೂ ರಂಗಭೂಮಿಯ ಮೇಲೆ ಭಯದ ಪರದೆಯನ್ನು ಸೃಷ್ಟಿಸಿ ಅವು ಸ್ವಯಂ ಸೆನ್ಸಾರ್ ಶಿಪ್ ಹೇರಿಕೊಳ್ಳುವಂತೆ ಪ್ರಭುತ್ವ ಒತ್ತಾಯಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರ ವಿರುದ್ಧ ರಂಗ ಲೋಕ ಎಚ್ಚೆತ್ತುಕೊಳ್ಳಬೇಕು ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ವಿ ನಾಗರಾಜಮೂರ್ತಿ ಅವರು ಮಾತನಾಡಿ ನಾಟಕ ಅಕಾಡೆಮಿ ಬೆಂಗಳೂರಿನ ಹೊರಗಿನ ತಂಡಗಳನ್ನು ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮೂಲಕ ನಗರ ಹಾಗೂ ಗ್ರಾಮೀಣ ತಂಡಗಳ ನಡುವೆ ಸಂವಾದ ಸಾಧ್ಯವಾಗಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಂಗವಾಗಿ ಸಂತೋಷ ನಾಯಕ ಪಟ್ಲ ಅವರು ನಿರ್ದೇಶಿಸಿದ ‘ದಿ ಫೈಯರ್’ ನಾಟಕವನ್ನು ಪ್ರದರ್ಶಿಸಲಾಯಿತು. ಉಡುಪಿಯ ಭೂಮಿಗೀತ ಸಾಂಸ್ಕೃತಿಕ ವೇದಿಕೆ ನಾಟಕವನ್ನು ಪ್ರದರ್ಶಿಸಿತು. ನಾಟಕ ಅಕಾಡೆಮಿ ಸದಸ್ಯರಾದ ಜಗದೀಶ್ ಜಾಲ ಹಾಗೂ ಲವಕುಮಾರ್ ಉಪಸ್ಥಿತರಿದ್ದರು.
‘ದಿ ಫೈಯರ್’ ನಾಟಕದ ಬಗ್ಗೆ :
ಲ್ಯಾಟಿನ್ ಅಮೇರಿಕಾದ ಪ್ರಸಿದ್ಧ ಬರಹಗಾರ ಎಡೊರ್ಡೋ ಗೆಲಿಯಾನೋ ಅವರ ‘ಮೆಮೊರಿಸ್ ಆಫ್ ಫಯರ್’ ಒಂದು ಅಪೂರ್ವ ಕೃತಿ. ತನ್ನ ನೆಲದ ಜನರ ಆದಿಮ ನಂಬಿಕೆ ನಡಾವಳಿಗಳ ಕಸುವು, ಅವುಗಳನ್ನು ದಮನಿಸಿ ಮೆರೆದ ವಸಾಹತುಶಾಹಿ ಆಕ್ರಮಣದ ಕ್ರೌರ್ಯ ಮತ್ತೂ ಜನರ ನಿರಂತರ ಪ್ರತಿರೋಧಗಳ ಶತಮಾನಗಳ ವಿದ್ಯಮಾನಗಳನ್ನು ಅಚ್ಚಳಿಯದ ಕಥನ ಚಿತ್ರಗಳನ್ನಾಗಿ ಗೆಲಿಯಾನೋ ಕಟ್ಟಿರುವನು.
ಪ್ರಸ್ತುತ ‘ದಿ ಫೈಯರ್’ ನಾಟಕವು ಆ ಕಥಾ ಚಿತ್ರಗಳಲ್ಲಿ ಆಯ್ದ ಕೆಲವನ್ನು, ಆಧುನಿಕ ರಂಗಭೂಮಿಯ ಸೃಜನಶೀಲ ವ್ಯಾಕರಣಕ್ಕೆ ಒಗ್ಗಿಸಿ ದೃಷ್ಯ ರೂಪಕಗಳಾಗಿ ಕಟ್ಟುವ ಸವಾಲಿನ ರಂಗ ಪ್ರಯೋಗವಾಗಿದೆ. ಅನ್ಯಾಯಗಳ ವಿರುದ್ಧ ಸದಾ ಸೆಟ್ಟಿದೇಳುವ ಮಾನವ ಬಂಡಾಯ ಭಾವಕ್ಕೆ ಒಂದು ನಮನವಾಗಿದೆ.