ಬೆಂಗಳೂರು, ಮೇ.16 www.bengaluruwire.com : ಬಿಬಿಎಂಪಿಯ ಇಂದಿರಾ ಕ್ಯಾಂಟಿನ್ ನಲ್ಲಿ ಕೋಟ್ಯಾಂತರ ರೂ. ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ವಲಯದ ಉಪ ಆರೋಗ್ಯಾಧಿಕಾರಿ ಡಾ.ಕಲ್ಪನಾ ಪಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪಾಲಿಕೆಯ ದಕ್ಷಿಣ ವಲಯದಲ್ಲಿ ಆಹಾರ ಸರಬರಾಜು ಮಾಡಿದ ಚಿಫ್‌ಟಾಕ್ ಫುಡ್ ಆಂಡ್ ಹಾಸ್ಪಿಟಾಲಿಟಿ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ ಬಿಲ್ ಪಾವತಿಯಲ್ಲಿ 7 ಕೋಟಿ ರೂಪಾಯಿಗಳಿಗೂ ಹೆಚ್ಚು ಅವ್ಯವಹಾರ ನಡೆದಿದೆ ಎಂದು ವರದಿಯಾಗಿದೆ.
ಆರೋಗ್ಯಾಧಿಕಾರಿಯಾಗಿದ್ದ ಡಾ. ಕಲ್ಪನಾ ಪಿ ಅವರು, ಪರಿಶೀಲನೆ ನಡೆಸದೆ ಅಂದಾಜು 9.72 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ಆದರೆ, ವಾಸ್ತವವಾಗಿ ಪಾವತಿಸಬೇಕಾದ ಮೊತ್ತ 2.27 ಕೋಟಿ ರೂಪಾಯಿ ಮಾತ್ರ. ಈ ಮೂಲಕ ಸುಮಾರು 7 ಕೋಟಿ ರೂಪಾಯಿಗಳಷ್ಟು ಹಣವನ್ನು ಹೆಚ್ಚುವರಿಯಾಗಿ ಪಾವತಿಸಿರುವುದು ಕಂಡುಬಂದಿದೆ.
ಇದು ಸರ್ಕಾರಿ ನೌಕರರ ನಿಯಮಾವಳಿಗಳ ಉಲ್ಲಂಘನೆಯಾಗಿದ್ದು, ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಡಾ.ಕಲ್ಪನಾ ಪಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪಾಲಿಕೆ ಅಮಾನತು ಆದೇಶದಲ್ಲಿ ತಿಳಿಸಿದೆ.

ತನಿಖೆ ಪೂರ್ಣಗೊಳ್ಳುವವರೆಗೆ ಡಾ. ಕಲ್ಪನಾ ಪಿ ಅವರ ವೇತನವನ್ನು ಯಲಹಂಕ ವಲಯದ ಉಪ ಆರೋಗ್ಯಾಧಿಕಾರಿ ಕಚೇರಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣದ ಕುರಿತು ಪಾಲಿಕೆ ಆಡಳಿತ ತೀವ್ರ ತನಿಖೆ ನಡೆಸುತ್ತಿದೆ.
ಇನ್ನೊಬ್ಬ ಅಧಿಕಾರಿಗೆ ಹೆಚ್ಚುವರಿ ಜವಾಬ್ದಾರಿ :
ಇದರ ಜೊತೆಗೆ, ಡಾ. ಸುರೇಶ್ ಜಿ.ಕೆ. ಅವರಿಗೆ ದಕ್ಷಿಣ ವಲಯದ ಹೆಚ್ಚುವರಿ ಆರೋಗ್ಯಾಧಿಕಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. ಸದ್ಯಕ್ಕೆ ಅವರು ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಉಪ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.






















