ಬೆಂಗಳೂರು, ಮೇ.15 www.bengaluruwire.com : ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 63ನೇ ವರ್ಷದ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಮೈಸೂರು ಮೃಗಾಲಯದಲ್ಲಿ ಆಫ್ರಿಕನ್ ಸಿಂಹವನ್ನು ಇಂದು ದತ್ತು ಪಡೆದಿದೆ. ಮಂಜುನಾಥ್ ಗೌಡ ಅವರ ನೇತೃತ್ವದ ಪ್ರದೇಶ ಯುವ ಕಾಂಗ್ರೆಸ್ ಒಂದು ವರ್ಷಕ್ಕೆ ಈ ಸಿಂಹವನ್ನು ದತ್ತು ಪಡೆದಿದ್ದಾರೆ.
ವರ್ಷಕ್ಕೆ 2 ಲಕ್ಷ ರೂಪಾಯಿ ಮೊತ್ತವನ್ನು ಮೈಸೂರು ಮೃಗಾಲಯ ಪ್ರಾಧಿಕಾರ ವಿಧಿಸುತ್ತಿದ್ದು, ಪ್ರತಿ ವರ್ಷವೂ ದತ್ತು ನವೀಕರಣ ಮಾಡಿಕೊಳ್ಳಲು ಮೈಸೂರು ಯುವ ಕಾಂಗ್ರೆಸ್ ನಿರ್ಧರಿಸಿದೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನು ಹಾರ-ತುರಾಯಿ ಹಾಕಿಸಿಕೊಂಡು ತಮ್ಮ ಕಾರ್ಯಕರ್ತರು, ಅಭಿಮಾನಿಗಳ ಮಧ್ಯೆ ಇರುವ ಬದಲು, ವಿಶೇಷವಾಗಿ ಕಬಿನಿ ಹಿನ್ನೀರು ಹಾಗೂ ವನ್ಯಜೀವಿ ಪ್ರದೇಶದಲ್ಲಿ ಇಂದು ಕಾಲ ಕಳೆದರು. ಕಬಿನಿ ಜಲಾಶಯದ ಹಿನ್ನೀರು ವನ್ಯಜೀವಿಗಳಿಂದ ಸಮೃದ್ಧವಾಗಿದ್ದು ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ಮಟ್ಟವು ಕಡಿಮೆಯಾದಾಗ ಸಮೃದ್ಧ ಹುಲ್ಲುಗಾವಲುಗಳನ್ನು ರೂಪಿಸುತ್ತದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಜೀಪಿನಲ್ಲಿ ಸುತ್ತಾಡುತ್ತಾ ವನ್ಯ ಸಂಪತ್ತನ್ನು ಕಂಡು ಸಂತಸಪಟ್ಟರು.
ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, “ಈ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ಆಚರಿಸಿದೆ. ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯಸಂಪತ್ತನ್ನು ಕಣ್ತುಂಬಿಕೊಂಡು, ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತು” ಎಂದು ಹೇಳಿದ್ದಾರೆ. ಕಬಿನಿಯಲ್ಲಿನ ಡಿಕೆ ಅವರು ಕಾಲ ಕಳೆದ ಕ್ಷಣಗಳ ವಿಡಿಯೋ ಈ https://www.facebook.com/share/v/1J73QoZjnJ ಫೇಸ್ ಬುಕ್ ಲಿಂಕ್ ನಲ್ಲಿ ಲಿಂಕ್ ಗೆ ಕ್ಲಿಕ್ ಮಾಡಿ ವೀಕ್ಷಿಸಬಹುದು.






















