ಬೆಂಗಳೂರು, ಮೇ.14 www.bengaluruwire.com : ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಹೊಸದಾಗಿ ವಿದ್ಯುತ್ ಮತ್ತು ನೀರು ಸರಬರಾಜು / ಒಳಚರಂಡಿ ಸಂಪರ್ಕಗಳನ್ನು ಪಡೆಯಲು ಕಟ್ಟಡಗಳ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಬೆಸ್ಕಾಂಗೆ ವಿದ್ಯುತ್ ಸಂಪರ್ಕಕ್ಕಾಗಿ ಸುಮಾರು 66,400 ಅರ್ಜಿಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ, ಘನ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ: 14605/2024 ರಲ್ಲಿ ನೀಡಿದ ಆದೇಶದಂತೆ, ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದ ಕಟ್ಟಡಗಳಿಗೆ ಮಾತ್ರ ವಿದ್ಯುತ್, ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ನೀಡಲು ಸೂಚಿಸಲಾಗಿದೆ.
ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುವ ಸಲುವಾಗಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವ ಅರ್ಜಿದಾರರನ್ನು ಬಿಬಿಎಂಪಿ ಎಸ್ಎಂಎಸ್ ಮತ್ತು ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಲಿದೆ. ಈ ಸಂದರ್ಭದಲ್ಲಿ, ಕಟ್ಟಡದ ‘ಎ’ ಖಾತಾ ಅಥವಾ ‘ಬಿ’ ಖಾತಾ ವಿವರಗಳು, ಕಟ್ಟಡ ನಿರ್ಮಾಣಕ್ಕೆ ಪಡೆದ ನಕ್ಷೆ ಮಂಜೂರಾತಿ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ ಅಥವಾ ಸಲ್ಲಿಸಲಿರುವ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಕೋರಲಾಗುತ್ತದೆ.
ಹೊಸ ಕಟ್ಟಡಗಳ ಮಾಲೀಕರಿಗೆ ಅನುಕೂಲವಾಗುವಂತೆ, ಬಿಬಿಎಂಪಿ ತನ್ನ ಆನ್‌ಲೈನ್ ಪೋರ್ಟಲ್‌ನಲ್ಲಿ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಆಸಕ್ತ ನಾಗರಿಕರು ಈ ಕೆಳಗಿನ ಲಿಂಕ್ ಮೂಲಕ ನೋಂದಾಯಿತ ವಾಸ್ತುಶಿಲ್ಪಿ / ಇಂಜಿನಿಯರ್‌ಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದಾಗಿದೆ: https://bpas.bbmpgov.in/BPAMSClient4/Default.aspx

ಈ ಹಿನ್ನೆಲೆಯಲ್ಲಿ, ಬಾಕಿ ಇರುವ ಅರ್ಜಿದಾರರು ಮತ್ತು ಹೊಸದಾಗಿ ಸಂಪರ್ಕ ಪಡೆಯಲು ಬಯಸುವವರು ಬಿಬಿಎಂಪಿ ಕೋರುವ ಮಾಹಿತಿಯನ್ನು ಒದಗಿಸಿ, ಆನ್‌ಲೈನ್ ಮೂಲಕ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.
