ಬೆಂಗಳೂರು, ಮೇ.13 www.bengaluruwire.com – ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ ಇಲ್ಲಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) 2025-26ನೇ ಸಾಲಿನ (Assessment Year 2026-27) ಆದಾಯ ತೆರಿಗೆ ವಿವರಗಳನ್ನು ಸಲ್ಲಿಸಲು ಅಗತ್ಯವಿರುವ ಎಲ್ಲಾ ಏಳು ಮಾದರಿಯ ನಮೂನೆಗಳ ಅಧಿಸೂಚನೆಯನ್ನು ಮೇ 11ರಂದು ಪ್ರಕಟಿಸಿದೆ.
ಈ ಮೂಲಕ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲು ಅನುಕೂಲವಾಗಲಿದೆ.
ಈ ಹಿಂದೆ, ಕೆಲವು ನಿರ್ದಿಷ್ಟ ನಮೂನೆಗಳ ಅಧಿಸೂಚನೆ ಮಾತ್ರ ಪ್ರಕಟವಾಗುತ್ತಿದ್ದ ಕಾರಣ, ಎಲ್ಲಾ ರೀತಿಯ ಆದಾಯ ಹೊಂದಿರುವ ತೆರಿಗೆದಾರರು ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ, ಈ ಬಾರಿ ಒಂದೇ ಬಾರಿಗೆ ಎಲ್ಲಾ ಏಳು ನಮೂನೆಗಳಾದ ಐಟಿಆರ್-1 ರಿಂದ ಐಟಿಆರ್-7ರ ವರೆಗಿನ ಅಧಿಸೂಚನೆ ಹೊರಬಿದ್ದಿರುವುದು ತೆರಿಗೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
ಸಿಬಿಡಿಟಿ ಈ ಕ್ರಮವು ತೆರಿಗೆದಾರರಿಗೆ ಸಾಕಷ್ಟು ಸಮಯಾವಕಾಶವನ್ನು ನೀಡಲಿದ್ದು, ಯಾವುದೇ ಗೊಂದಲವಿಲ್ಲದೆ ತಮ್ಮ ರಿಟರ್ನ್ಸ್‌ಗಳನ್ನು ಸಿದ್ಧಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

ತೆರಿಗೆದಾರರು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ಆದಾಯಕ್ಕೆ ಅನ್ವಯವಾಗುವ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬಹುದು.

ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್: www.incometax.gov.in
ತೆರಿಗೆದಾರರು ಆದಾಯ ತೆರಿಗೆ ಸಲ್ಲಿಕೆಯ ಕೊನೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು, ಆದಷ್ಟು ಬೇಗ ತಮ್ಮ ರಿಟರ್ನ್ಸ್‌ಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಕೊನೆಯ ಕ್ಷಣದ ಒತ್ತಡ ತಪ್ಪಿಸಲು ಮತ್ತು ಯಾವುದೇ ದಂಡವನ್ನು ತಪ್ಪಿಸಲು ಇದು ಸಹಾಯಕವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.