ಬೆಂಗಳೂರು, ಮೇ.13 www.bengaluruwire.com : ನಾಡಪ್ರಭು ಕೆಂಪೇಗೌಡ ಬಡಾವಣೆ (NPKL)ಯಲ್ಲಿನ ಮೂಲಭೂತ ಸೌಕರ್ಯ ಕುರಿತಂತೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) ನಿರ್ದೇಶನದ ಮೇರೆಗೆ ಮಂಗಳವಾರ ಇಲ್ಲಿ ಕರೆಯಲಾಗಿದ್ದ ಕೆಂಪೇಗೌಡ ನಿವೇಶನ ಹಂಚಿಕೆದಾರರ ಸಭೆ ಬಿಡಿಎ ಮತ್ತು ಸೈಟ್ ಮಾಲೀಕರ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿ ಅರ್ಧದಲ್ಲೇ ಮೊಟಕುಗೊಂಡಿತು.
ಎನ್ ಪಿಕೆಎಲ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ ಹಲವು ವರ್ಷಗಳೇ ಕಳೆದರೂ ನಿವೇಶನ ಮಾಲೀಕರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸದ ಬಗ್ಗೆ ಸಾರ್ವಜನಿಕ ವಲಯ, ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ವಿಷಯ ರೇರಾ, ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿ ಬಿಡಿಎ ಆಯುಕ್ತರನ್ನು ಅಲ್ಲಿನ ಸಭೆ, ವಿಚಾರಣೆಗೆ ಕರೆದರೂ ಗೈರು ಹಾಜರಾಗಿದ್ದೇ ಹೆಚ್ಚು.
ಆ ಬಳಿಕ ರೇರಾ ನಿರ್ದೇಶನದ ಮೇರೆಗೆ ಮಂಗಳವಾರ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ನೆನೆಗುದಿಗೆ ಬಿದ್ದಿರುವ ಎನ್‌ಪಿಕೆಎಲ್‌ನ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್) ನಿವೇಶನದಾರರ ಸಭೆಯಲ್ಲಿ ಬಿಡಿಎ ಆಯುಕ್ತರ ಸರ್ವಾಧಿಕಾರಿ ಧೋರಣೆ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ನ್ಯಾಯೋಚಿತ ಕುಂದುಕೊರತೆಗಳನ್ನು ಆಲಿಸದೆ, ಏಕಪಕ್ಷೀಯವಾಗಿ ವರ್ತಿಸಿದ ಆಯುಕ್ತರ ನಡೆಯನ್ನು ವಿರೋಧಿಸಿ ಎನ್‌ಪಿಕೆಎಲ್ ಓಪನ್ ಫೋರಂ ಸಮಿತಿಯು ಸಭೆಯನ್ನು ಬಹಿಷ್ಕರಿಸಿತು.
ಬಡಾವಣೆಗೆ ಹಂತ-ಹಂತವಾಗಿ ಭೂಸ್ವಾಧೀನ ಕಾಮಗಾರಿ ವಿಳಂಬಕ್ಕೆ ಕಾರಣ :

ಈ ನಡುವೆ ಇಂದಿನ ಸಭೆಯಲ್ಲಿ ಭೂಸ್ವಾಧೀನವಾಗಿದ್ದ ಭೂಮಿಯ ಪೈಕಿ ಬಡಾವಣೆಯ ಶೇ. 90ರಷ್ಟು ಕಾಮಗಾರಿಯನ್ನು ಅನುಷ್ಠಾನವಾಗಿದೆ. ಉಳಿದ ಶೇ. 10 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ಬಿಡಿಎ ಆಯುಕ್ತರಾದ ಎನ್. ಜಯರಾಮ್ ನಿವೇಶನದಾರರ ಸಭೆಗೆ ತಿಳಿಸಿದರು.

ಬಡಾವಣೆಗೆ ಹಂತ-ಹಂತವಾಗಿ ಭೂಸ್ವಾಧೀನವಾಗುತ್ತಿರುವುದರಿಂದ ಮೂಲಭೂತ ಸೌಕರ್ಯ ಕಾಮಗಾರಿಗಳ ವಿಳಂಬಕ್ಕೆ ಕಾರಣವಾಗುತ್ತಿದೆ. ಇದರಿಂದ ಆದಷ್ಟು ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿಲ್ಲ. ಇದಕ್ಕೆ ಕಾಲಾವಕಾಶಬೇಕೆಂದು ಸಭೆಗೆ ಆಯುಕ್ತರು ವಿವರಿಸಿದರೆಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಆದರೆ ಈ ಸಭೆಯು ಆರಂಭವಾದ ಕೇವಲ ಇಪ್ಪತ್ತು ನಿಮಿಷಗಳ ಪ್ರಹಸನವಾಗಿ ಮಾರ್ಪಟ್ಟಿತು. ಬಹುತೇಕ ಸಮಯವನ್ನು ಸಭೆಯ ನಿಯಮಗಳನ್ನು ವಿವರಿಸುವುದರಲ್ಲೇ ಕಳೆದ ಬಿಡಿಎ ಆಯುಕ್ತ ಜಯರಾಮ್, ನಿವೇಶನದಾರರಿಗೆ ತಮ್ಮ ಅಹವಾಲು ತೋಡಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡ ನಿವೇಶನದಾರರೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ರಸ್ತೆ ಡಾಂಬರೀಕರಣ ಗುಣಮಟ್ಟ ಪ್ರಶ್ನಿಸಿದ್ದೇ ತಪ್ಪಾಯ್ತಾ?:
ಸಭೆಯಲ್ಲಿ ಮಾತನಾಡಲು ಮುಂದಾದ ಓಪನ್ ಫೋರಂನ ಪ್ರತಿನಿಧಿಯೊಬ್ಬರನ್ನು ತಡೆದ ಆಯುಕ್ತರು, ಡಾಂಬರೀಕರಣದ ಗುಣಮಟ್ಟದ ಬಗ್ಗೆ ಪ್ರಶ್ನಿಸಲು ಅವರು ಸಿವಿಲ್ ಎಂಜಿನಿಯರ್ ಆಗಿದ್ದಾರೆಯೇ ಎಂದು ಕೇಳಿದ್ದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಯಿತು ಎಂದು ಅವರು ವಿವರಿಸಿದ್ದಾರೆ.
ಸಾವಿರಾರು ನಿವೇಶನದಾರರ ಹಿತಾಸಕ್ತಿಗಳನ್ನು ಕಡೆಗಣಿಸಿದ ಆಯುಕ್ತರು, ಮೂಲ ನಿವೇಶನದಾರರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದರು. ಇದು, ಮೃತಪಟ್ಟವರು, ವಯಸ್ಸಾದವರು ಅಥವಾ ಹಾಸಿಗೆ ಹಿಡಿದಿರುವ ಮೂಲ ನಿವೇಶನದಾರರ ಕಾನೂನುಬದ್ಧ ಉತ್ತರಾಧಿಕಾರಿಗಳು ಮತ್ತು ಕುಟುಂಬ ಸದಸ್ಯರ ಧ್ವನಿಯನ್ನು ಅಡಗಿಸುವ ಸರ್ವಾಧಿಕಾರಿ ಕ್ರಮವಾಗಿತ್ತು ಎಂದು ಎನ್ ಪಿಕೆಎಲ್ ಓಪನ್ ಫೋರಮ್ ಅಧ್ಯಕ್ಷ ಚನ್ನಬಸವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಕೆ :
ಕಳೆದ ಒಂಬತ್ತು ವರ್ಷಗಳಿಂದ ಬಿಡಿಎ ನಿರ್ಲಕ್ಷ್ಯದಿಂದ ಉಂಟಾದ ತೀವ್ರ ಸಂಕಷ್ಟಗಳನ್ನು ಈ ಅವಲಂಬಿತರು ವಿವರಿಸಲು ಹಾಜರಿದ್ದರು. ಈ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿದ ಎನ್‌ಪಿಕೆಎಲ್ ಓಪನ್ ಫೋರಂ ಸಮಿತಿಯು ಸಭೆಯಿಂದ ಹೊರನಡೆದು ಪ್ರತಿಭಟಿಸಿತು. ನಿವೇಶನದಾರರ ಅವಲಂಬಿತರಿಗೆ ಪ್ರಾತಿನಿಧ್ಯದ ಹಕ್ಕನ್ನು ನಿರಾಕರಿಸುವುದು ರೇರಾ ನಿರ್ದೇಶನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಎನ್‌ಪಿಕೆಎಲ್ ಓಪನ್ ಫೋರಂ ಈ ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದೆ.
ಬಾಧಿತರ ಧ್ವನಿಯನ್ನು ಅಡಗಿಸಲು ಬಿಡಿಎ ಪ್ರಯತ್ನ :
ಆಯುಕ್ತರ ಈ ನಡೆ, ಎನ್‌ಪಿಕೆಎಲ್ ನಿವೇಶನದಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಡಿಎಯ ಪ್ರಾಮಾಣಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೂಲ ಮಾಲೀಕರಿಗೆ ಮಾತ್ರ ಅವಕಾಶ ನೀಡಿ, ಬಹುಸಂಖ್ಯಾತ ಬಾಧಿತರ ಧ್ವನಿಯನ್ನು ಅಡಗಿಸಲು ಬಿಡಿಎ ಪ್ರಯತ್ನಿಸುತ್ತಿದೆ ಎಂದು ಓಪನ್ ಫೋರಂ ಆರೋಪಿಸಿದೆ.
ಅಸಹಾಯಕರಾದ ನಿವೇಶನದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಅವರುಗಳು ಕೂಡಲೇ ಮಧ್ಯಪ್ರವೇಶಿಸುವಂತೆ ಎನ್‌ಪಿಕೆಎಲ್ ಓಪನ್ ಫೋರಂ ಮನವಿ ಮಾಡಿದೆ. ರೇರಾ ಆದೇಶದ ಹಿನ್ನೆಲೆಯಲ್ಲಿ ಕೇವಲ ತೋರಿಕೆಗೆ ಸಭೆ ಕರೆದ ಬಿಡಿಎ ಆಯುಕ್ತರ ನಡವಳಿಕೆಯು ಸರ್ವಾಧಿಕಾರಿ ಧೋರಣೆಯಲ್ಲದೆ ಬೇರೇನಲ್ಲ ಎಂದು ಫೋರಂ ಟೀಕಿಸಿದೆ.
ಸಭೆ ನಡೆಸಿದ ಬಗ್ಗೆ ಮಾಧ್ಯಮಗಳಿಗೆ ಫೊಟೋ ನೀಡದ ಬಿಡಿಎ :
ಇದೇ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗುತ್ತಿರುವ ಬಿಡಿಎ ಆಯುಕ್ತ ಎನ್.ಜಯರಾಮ್ ಕಾರ್ಯವೈಖರಿ ಬಗ್ಗೆ ಈ ಹಿಂದೆಯೂ ನಿವೇಶನದಾರರು, ಬಾಧಿತರು ಹಾಗೂ ಅಧಿಕಾರಿಗಳ ಹಂತದಲ್ಲಿ ಸಾಕಷ್ಟು ಮಂದಿ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಬಿಡಿಎ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಂದಿನ ಸಭೆ ನಡೆದ ಬಗ್ಗೆ ಪತ್ರಕರ್ತರಿಗೆ ಸೂಕ್ತ ಫೊಟೋವನ್ನು ನೀಡುವುದನ್ನು ಬಿಟ್ಟು ಎನ್ ಪಿಕೆಎಲ್ ಬಡಾವಣೆಯ ಫೊಟೋ ನೀಡಿ ಕೈತೊಳೆದುಕೊಂಡಿದೆ. ಬಿಡಿಎನ ಈ ನಡೆ ಹಲವು ಸಂಶಯಗಳಿಗೆ ಕಾರಣವಾಗಿದೆ.
ಈ ಸಭೆಯಲ್ಲಿ ಅಭಿಯಂತರ ಸದಸ್ಯ ಶಾಂತಾರಾಜಣ್ಣ, ಉಪ ಆಯುಕ್ತರು (ಭೂಸ್ವಾಧೀನ), ಅಭಿಯಂತರ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ವಕೀಲರು ಹಾಗೂ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.