ಬೆಂಗಳೂರು, ಮೇ.12 www.bengaluruwire.com : ಸಂಚಾರಿ ಕಾವೇರಿ ಯೋಜನೆಯ ಮೂಲಕ ಬಿಐಎಸ್ (Bureau of Indian Standards -BIS ) ನಿಂದ ಪ್ರಮಾಣೀಕರಿಸಲ್ಪಟ್ಟ ಶುದ್ಧ ಕುಡಿಯುವ ನೀರನ್ನು ಪೂರೈಸಲು ಬೆಂಗಳೂರು ಜಲಮಂಡಳಿ ಬದ್ಧವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ರಾಮ್ ಪ್ರಸಾದ್ ಮನೋಹರ್ ಅವರು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ತಂತ್ರಜ್ಞಾನದ ಸಹಾಯದಿಂದ ಬಿಐಎಸ್ ಗುಣಮಟ್ಟದ ನೀರನ್ನು ಟ್ಯಾಂಕರ್‌ಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ದೇಶದ ಏಕೈಕ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ ಎಂದಿದ್ದಾರೆ.
ಖಾಸಗಿ ಟ್ಯಾಂಕರ್‌ಗಳು ಸರಬರಾಜು ಮಾಡುವ ನೀರಿನ ಗುಣಮಟ್ಟದ ಬಗ್ಗೆ ಖಚಿತತೆ ಇರುವುದಿಲ್ಲ. ಹಲವು ಬಾರಿ ಅವು ಕುಡಿಯಲು ಯೋಗ್ಯವಲ್ಲದ ಕೊಳವೆ ಬಾವಿಗಳ ನೀರನ್ನು ಪೂರೈಸುತ್ತವೆ. ಅಲ್ಲದೆ, ಇದು ಅಂತರ್ಜಲದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ತಡೆಯುವ ಉದ್ದೇಶದಿಂದ ಮತ್ತು ಟ್ಯಾಂಕರ್‌ಗಳನ್ನೇ ಅವಲಂಬಿಸಿರುವ ಜನರಿಗೆ ಬಿಐಎಸ್ ಪ್ರಮಾಣಿತ ಶುದ್ಧ ನೀರನ್ನು ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯೇ ಸಂಚಾರಿ ಕಾವೇರಿ. ನಮ್ಮ ನೀರಿನ ಗುಣಮಟ್ಟವನ್ನು ಯಾವುದೇ ಸಮಯದಲ್ಲಿಯೂ ಪರಿಶೀಲಿಸಬಹುದಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಜಲಮಂಡಳಿಯು ತನ್ನ ಒಡೆತನದ 60 ಮತ್ತು ನೋಂದಾಯಿತ 100 ಕ್ಕೂ ಹೆಚ್ಚು ಟ್ಯಾಂಕರ್‌ಗಳಿಗೆ ಬ್ರಾಂಡಿಂಗ್ ಮಾಡಿದೆ. ಈ ಖಾಸಗಿ ಟ್ಯಾಂಕರ್‌ಗಳು ಜಲಮಂಡಳಿಯ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ನೀರನ್ನು ಸರಬರಾಜು ಮಾಡಬಾರದೆಂಬ ನಿಯಮವನ್ನು ವಿಧಿಸಲಾಗಿದೆ.

ಟ್ರಿಪ್ ಆಧಾರದ ಮೇಲೆ ಖಾಸಗಿ ಟ್ಯಾಂಕರ್‌ಗಳಿಗೆ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಶುದ್ಧ ನೀರು ಸರಬರಾಜಿಗೆ ಬಳಸುವ ಟ್ಯಾಂಕರ್‌ಗಳಿಗೆ ಅಗತ್ಯವಾದ ಇಪಿಐ ಲೇಪನವನ್ನು ಮಾಡಿಸಲಾಗಿದೆ. ಈ ಯೋಜನೆಗಾಗಿ ಹೊಸ ಟ್ಯಾಂಕರ್‌ಗಳನ್ನು ಖರೀದಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂಚಾರಿ ಕಾವೇರಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಎರಡು ದಿನಗಳಲ್ಲಿ ಸುಮಾರು 1000 ಕ್ಕೂ ಹೆಚ್ಚು ಜನರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ, ಟ್ಯಾಂಕರ್ ಬುಕ್ ಮಾಡಿದ ಗ್ರಾಹಕರಿಗೆ ನೀರು ಸರಬರಾಜು ಮಾಡಲಾಗಿದೆ.
ಟ್ಯಾಂಕರ್‌ಗಳಲ್ಲಿ ಆರ್ ಎಫ್ ಐಡಿ (RFID) ಮತ್ತು ಜಿಪಿಎಸ್ (GPS) ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಅವು ಜಲಮಂಡಳಿಯ ನಿಗದಿತ ಕಾವೇರಿ ಕನೆಕ್ಟ್ ಕೇಂದ್ರಗಳಲ್ಲಿ ನೀರು ತುಂಬಿಸಿಕೊಂಡು ನೇರವಾಗಿ ಗ್ರಾಹಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಬಹುದು. ಸರಬರಾಜಾಗುವ ನೀರಿನ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಪರೀಕ್ಷೆಗೆ ಜಲಮಂಡಳಿ ಸಿದ್ಧವಿದೆ ಎಂದು ಡಾ. ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ.