ನವದೆಹಲಿ, ಮೇ.12 www.bengaluruwire.com : ಪ್ರಧಾನಿ ನರೇಂದ್ರ ಮೋದಿ ಬುದ್ಧ ಪೂರ್ಣಿಮೆಯ ದಿನವಾದ ಇಂದು ಪಾಕಿಸ್ತಾನಕ್ಕೆ ಪ್ರಖರ ಮಾತುಗಳಲ್ಲಿ ಉಗ್ರವಾದ ನಿಗ್ರಹ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ದೇಶಕ್ಕೆ ಬಿಟ್ಟುಕೊಡುವ ವಿಚಾರದಲ್ಲಷ್ಟೇ ಮಾತುಕತೆ ಎಂದು ಕಠಿಣ ಶಬ್ದಗಳಲ್ಲಿ ಸಂದೇಶ ರವಾನಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಳಿಕ ನಡೆಸಿದ ಆಪರೇಷನ್ ಸಿಂಧೂರದ ಕರಾರುವಕ್ ಕಾರ್ಯಾಚರಣೆ, ಪಾಕ್ ಹಾಗೂ ಪಿಒಕೆ ನಲ್ಲಿನ ಭಯೋತ್ಪಾದನಾ ಶಿಬಿರಗಳು, ಭಯೋತ್ಪಾದಕರ ಮೇಲೆ ನಮ್ಮ ದೇಶದ ಮೂರು ಸೇನಾಪಡೆಗಳು ಅತ್ಯಾಧುನಿಕ ಯುಗದ ಯುದ್ಧವನ್ನು ಸಾರಿ ಪಾಕಿಸ್ತಾನಕ್ಕೆ ದಿಟ್ಟವಾಗಿ ಉತ್ತರ ನೀಡಿದೆ ಎಂದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕ್ ಹೆಸರೆತ್ತಿ ಖಡಕ್ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನದ ಜೊತೆ ಉಗ್ರವಾದ ಮತ್ತು ಶಾಂತಿ ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ. ಇದು ಕದನ ವಿರಾಮ. ಆದರೆ ಅಂತ್ಯವಿಲ್ಲ. ಪಾಕ್ ಕನಸಿನಲ್ಲೂ ಎಣಿಸದ ರೀತಿಯಲ್ಲಿ ಪಾಠ ಕಲಿಸಿದ್ದೇವೆ. ಉಗ್ರರ ವಿಶ್ವವಿದ್ಯಾಲಯಗಳನ್ನು ಧ್ವಂಸ ಮಾಡಿದ್ದೇವೆ.
ಭಾರತವು, ಭಯೋತ್ಪಾದಕ ಒಂದಿನಿತೂ ಸಹಿಸದ ಯುಗದಲ್ಲಿದೆ. ನಮ್ಮ ಏಕತೆ ನಮ್ಮ ದೊಡ್ಡ ಶಕ್ತಿ. ಪಾಕಿಸ್ತಾನ ತನ್ನಲ್ಲಿನ ಭಯೋತ್ಪಾದಕವನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಇಲ್ಲವಾದಲ್ಲಿ ಅದಕ್ಕೆ ತಕ್ಕ ಪಾಠವನ್ನು ಕಲಿಸುತ್ತೇವೆ. ಭಯೊತ್ಪಾದಕರು ಹಾಗೂ ಉಗ್ರವಾದ ಪೋಷಕರನ್ನು ಸದೆ ಬಡಿಯುತ್ತೇವೆ ಎಂದಿದ್ದಾರೆ.

ಟೆರರ್ ಮತ್ತು ಟಾಕ್ ಜೊತೆ ಜೊತೆಯಾಗಿ ಆಗಲ್ಲ. ಉಗ್ರವಾದ ಮತ್ತು ವ್ಯಾಪಾರ ಮಾತುಕತೆ ಒಟ್ಟಿಗೆ ಆಗಲ್ಲ. ಉಗ್ರವಾದ ಹಾಗೂ ಸಿಂಧೂ ಜಲ ಒಪ್ಪಂದ ಅಮಾನತು ಮಾತುಕತೆ ಒಟ್ಟಿಗೆ ಆಗಲ್ಲ. ಪಾಕಿಸ್ತಾನದ ಜೊತೆ ಮಾತುಕತೆ ಆಗಬೇಕಂದರೆ ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ, ಅದು ಬಿಟ್ಟರೆ ಪಾಕ್ ಆಕ್ರಮಿತ ಕಾಶ್ಮೀರ ವಾಪಸ್ ಪಡೆಯುವ ವಿಚಾರದಲ್ಲಿ ಮಾತ್ರ ಮಾತುಕತೆ. ಇಂದು ಬುದ್ಧ ಪೂರ್ಣಿಮೆ. ಬುದ್ದ ಶಾಂತಿ ಸಾರಿದರು. ಮಾನವತೆ ಶಾಂತಿ- ಸಮೃದ್ಧತೆಗೆ ಪೂರಕವಾಗಿದೆ ಎಂದರು.

ಭಾರತ ಶಕ್ತಿಶಾಲಿ ಆಗುವ ಅವಶ್ಯಕತೆಯಿದೆ. ಭಾರತೀಯನಾಗಿ ನಾನು ಇಡೀ ಮೂರು ಸೇನಾಪಡೆಗಳಿಗೆ ನಮ್ಮ ನಮನಗಳು ಹಾಗೂ ಧನ್ಯವಾದಗಳು ಎಂದು ಪ್ರಧಾನ ನರೇಂದ್ರ ಮೋದಿಯವರು ಹೇಳಿದ್ದಾರೆ.
ಆತ್ಮನಿರ್ಭರ ಭಾರತದ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಈ ಮಿಲಿಟರಿ ಕಾರ್ಯಾಚರಣೆ ಮೂಲಕ ಇಡೀ ಜಗತ್ತಿಗೆ ಮನದಟ್ಟು ಮಾಡಿದ್ದೇವೆ. ಅಣ್ವಸ್ತ್ರದ ಹೆಸರಿನಲ್ಲಿ ಭಾರತವನ್ನು ಬ್ಲಾಕ್ ಮೇಲ್ ಮಾಡಿದರೆ ಭಾರತ ಅದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಅವರು ಹೇಳಿದರು.
“ಇಂದು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಪ್ರತಿಯೊಂದು ಭಯೋತ್ಪಾದಕ ಸಂಘಟನೆಗೂ ನಮ್ಮ ದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹಣೆಯ ಮೇಲಿನ ಸಿಂಧೂರವನ್ನು ಒರೆಸುವುದು ಎಂದರೆ ಏನೆಂದು ತಿಳಿದಿದೆ.”
“ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ. ಇದು ದೇಶದ ಲಕ್ಷಾಂತರ ಜನರ ಭಾವನೆಗಳ ಪ್ರತಿಬಿಂಬವಾಗಿದೆ. ಆಪರೇಷನ್ ಸಿಂಧೂರ್ ನ್ಯಾಯದ ಅವಿಚ್ಛಿನ್ನ ಪ್ರತಿಜ್ಞೆಯಾಗಿದೆ. ಮೇ 6 ರ ತಡರಾತ್ರಿ ಮತ್ತು ಮೇ 7 ರ ಬೆಳಿಗ್ಗೆ, ಇಡೀ ಜಗತ್ತು ಈ ಪ್ರತಿಜ್ಞೆಯು ಫಲಿತಾಂಶವಾಗಿ ಬದಲಾಗುವುದನ್ನು ಕಂಡಿದೆ.”
ಪಾಕಿಸ್ತಾನದೊಂದಿಗಿನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಕುರಿತು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ “ಪಾಕಿಸ್ತಾನವು ಇನ್ನು ಮುಂದೆ ಯಾವುದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ಅಥವಾ ಮಿಲಿಟರಿ ಸಾಹಸಗಳಲ್ಲಿ ತೊಡಗುವುದಿಲ್ಲ ಎಂದು ಮನವಿ ಮಾಡಿ ಭರವಸೆ ನೀಡಿತು. ಹಾಗಾಗಿ ಭಾರತ ಈ ವಿನಂತಿಯನ್ನು ಪರಿಗಣಿಸಿತು. ನಾವು ಇದೀಗ ಪಾಕಿಸ್ತಾನದ ಭಯೋತ್ಪಾದಕ ಮತ್ತು ಮಿಲಿಟರಿ ನೆಲೆಗಳ ಮೇಲಿನ ನಮ್ಮ ಪ್ರತೀಕಾರದ ಕ್ರಮಗಳನ್ನು ಸ್ಥಗಿತಗೊಳಿಸಿದ್ದೇವೆ.”
“ಹಾಗೆಂದು ಪಾಕಿಸ್ತಾನವು ತೆಗೆದುಕೊಂಡ ಪ್ರತಿಯೊಂದು ಹೆಜ್ಜೆಯನ್ನು ಅದರ ಕ್ರಮಗಳ ಆಧಾರದ ಮೇಲೆ ನಾವು ನಿರ್ಣಯಿಸುತ್ತೇವೆ. ಭಾರತದ ಸಶಸ್ತ್ರ ಪಡೆಗಳ ಮೂರು ಪಡೆಗಳಾದ ನಮ್ಮ ವಾಯುಪಡೆ, ಭೂಸೇನೆ ಮತ್ತು ನೌಕಾಪಡೆ ಹಾಗೂ ನಮ್ಮ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಿರಂತರ ಜಾಗರೂಕತೆಯಿಂದ ಇರುತ್ತವೆ. ಸರ್ಜಿಕಲ್ ಸ್ಟ್ರೈಕ್‌ಗಳು ಮತ್ತು ವಾಯುದಾಳಿಗಳ ನಂತರ, ಆಪರೇಷನ್ ಸಿಂಧೂರ್ ಈಗ ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯಾಗಿದೆ” ಎಂದು ಹೇಳಿದ್ದಾರೆ.
“ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಮೊದಲನೆಯದಾಗಿ, ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಬಲವಾದ ಪ್ರತಿಕ್ರಿಯೆ ನೀಡಲಾಗುವುದು. ಇದಕ್ಕೆ ನಾವು ನಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ ಮತ್ತು ಭಯೋತ್ಪಾದನೆಯ ಬೇರುಗಳು ಕಂಡುಬರುವ ಪ್ರತಿಯೊಂದು ಸ್ಥಳದಲ್ಲೂ ಕ್ರಮ ಕೈಗೊಳ್ಳುತ್ತೇವೆ. ಎರಡನೆಯದಾಗಿ, ಭಾರತ ಯಾವುದೇ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ.”