ನವದೆಹಲಿ, ಮೇ.10 www.bengaluruwire.com : ಪಾಕ್ ಸೇನೆಯು ತನ್ನ ಸೈನ್ಯವನ್ನು ಗಡಿ ಪ್ರದೇಶಗಳತ್ತ ಸ್ಥಳಾಂತರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಇದಲ್ಲದೆ, ಭಾರತದ ಪ್ರಮುಖ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿರುವುದಾಗಿ ಪಾಕ್ ಸುಳ್ಳು ಹೇಳಿದೆ ಎಂದು ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದರು. ವಿದೇಶಾಂಗ ಸಚಿವಾಲಯ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ ವೇಳೆ ಮಾತನಾಡಿದ ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ಪಾಕಿಸ್ತಾನ ಸೇನೆಯು ಗಡಿ ಪ್ರದೇಶಗಳಿಗೆ ತನ್ನ ಸೈನಿಕರನ್ನು ನಿಯೋಜಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪಾಕಿಸ್ತಾನದ ಸೇನಾ ಪಡೆಗಳು ಇಡೀ ಪಶ್ಚಿಮ ಭಾಗದಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಮುಂದುವರೆಸಿವೆ. ಭಾರತೀಯ ಸೇನೆ ಚೆಕ್ ಪೋಸ್ಟ್ಗಳನ್ನು ಗುರಿಯಾಗಿಸಿಕೊಂಡು ಯುಸಿಎಪಿ ಡ್ರೋನ್‌ಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಫೈಟರ್ ಜೆಟ್‌ಗಳನ್ನು ಬಳಸಿ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಎಲ್‌ಒಸಿಯಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ. ಎಲ್‌ಒಸಿ ಮತ್ತು ಐಬಿಯಲ್ಲಿ, ಪಾಕ್ ಫೈಟರ್ ಜೆಟ್‌ಗಳು 26ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿಗೆ ಪ್ರಯತ್ನಿಸಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕ್ನ ಪ್ರಯತ್ನಗಳನ್ನು ವಿಫಲಗೊಳಿಸಿದೆ.
ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರ್ ವಾಯುನೆಲೆಗಳಲ್ಲಿರುವ ಆಸ್ಪತ್ರೆಗಳು ಮತ್ತು ಶಾಲಾ ಆವರಣಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿರುವುದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಬೆಳಗಿನ ಜಾವ 1.40ಕ್ಕೆ ಪಂಜಾಬ್‌ನ ವಾಯುನೆಲೆಯನ್ನು ನಾಶಪಡಿಸಲು ಪಾಕ್ ಹೈ-ಸ್ಪೀಡ್ ಕ್ಷಿಪಣಿಯನ್ನು ಬಳಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದರು.

ಪಾಕ್ ಹೇಳುತ್ತಿರುವುದು ಸಂಪೂರ್ಣ ಸುಳ್ಳಿನ ಸರಮಾಲೆ :


ಪಾಕಿಸ್ತಾನ ನೀಡುತ್ತಿರುವ ಹೇಳಿಕೆಗಳು ಸುಳ್ಳು, ತಪ್ಪು ಮಾಹಿತಿ ಮತ್ತು ನಿಯೋಜಿತ ಪ್ರಚಾರದಿಂದ ತುಂಬಿವೆ. ಇದಲ್ಲದೆ, ಪಾಕಿಸ್ತಾನದ ಸುದ್ದಿ ಸಂಸ್ಥೆಗಳು ಇದನ್ನು ಬೆಂಬಲಿಸುತ್ತಿವೆ. ದೇಶದಲ್ಲಿನ ವಿವಿಧ ಮಿಲಿಟರಿ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿ ನಾಶಪಡಿಸಿರುವುದಾಗಿ ಪಾಕ್ ನೀಡಿರುವ ಹೇಳಿಕೆಗಳು ಸಂಪೂರ್ಣ ಸುಳ್ಳಾಗಿದೆ.
ಸೂರತ್‌ಗಢದ ಸಿರ್ಸಾದಲ್ಲಿರುವ ವಾಯುಪಡೆಯ ನೆಲೆಗಳು ನಾಶವಾಗಿವೆ ಮತ್ತು ಅದಮ್‌ಪುರದಲ್ಲಿರುವ S-400 ನೆಲೆಯ ಕುರಿತು ನೀಡಿರುವ ಹೇಳಿಕೆಗಳೂ ಸುಳ್ಳು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದೇಶದ ವಾಯುನೆಲೆಗಳು ಸುರಕ್ಷಿತವಾಗಿರುವ ಬಗ್ಗೆ ಫೋಟೋಗಳನ್ನು ಬಿಡುಗಡೆ ಮಾಡಲಾಯಿತು. (Source : PTI)