ನವದೆಹಲಿ, ಮೇ.10 www.bengaluruwire.com : ಭಾರತ ಮತ್ತು ಪಾಕಿಸ್ತಾನ ಇಂದು ಸಂಜೆ 5 ಗಂಟೆಯಿಂದ ಭೂಮಿ, ಸಮುದ್ರ ಮತ್ತು ವಾಯು ಪ್ರದೇಶಗಳಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಇಂದು ಪ್ರಕಟಿಸಿದರು. ಉಭಯ ದೇಶಗಳು ಮೇ 12 ರಂದು ಮಾತುಕತೆ ನಡೆಸಲು ಸಿದ್ಧವಾಗಿವೆ.
ಈ ಘೋಷಣೆಯ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಇಂದು ಭಾರತವನ್ನು ಸಂಪರ್ಕಿಸಿದರು ಮತ್ತು ಉಭಯ ದೇಶಗಳು ಇಂದು ಭಾರತೀಯ ಕಾಲಮಾನ ಸಂಜೆ 5 ಗಂಟೆಯಿಂದ ಭೂಮಿ, ಸಮುದ್ರ ಮತ್ತು ವಾಯು ಪ್ರದೇಶಗಳಲ್ಲಿ ಎಲ್ಲಾ ಮಿಲಿಟರಿ ಕ್ರಮಗಳನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ ಎಂದು ಮಿಸ್ರಿ ಖಚಿತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, “ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಇಂದು ಮಧ್ಯಾಹ್ನ 3.35 ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದರು. ಭಾರತೀಯ ಸಮಯ ಸಂಜೆ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಕದನ ವಿರಾಮಕ್ಕೆ (ceasefire ) ಒಪ್ಪಂದ ಮಾಡಿಕೊಳ್ಳಲಾಯಿತು. ಈ ತಿಳುವಳಿಕೆಯನ್ನು ಜಾರಿಗೆ ತರಲು ಎರಡೂ ಕಡೆಯಿಂದಲೂ ಸೂಚಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12 ರಂದು ಮತ್ತೊಮ್ಮೆ ಮಾತನಾಡುತ್ತಾರೆ” ಎಂದರು.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಗುಂಡಿನ ಚಕಮಕಿ ಮತ್ತು ಮಿಲಿಟರಿ ಕ್ರಮಗಳ ಸ್ಥಗಿತವನ್ನು ಉಭಯ ದೇಶಗಳ ನಡುವೆ ನೇರವಾಗಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತವು ಇದನ್ನು ದ್ವಿಪಕ್ಷೀಯವಾಗಿ ಕಾರ್ಯಗತಗೊಳಿಸಿದೆ ಮತ್ತು ಯಾವುದೇ ಮಧ್ಯಸ್ಥಿಕೆಯ ಪರಿಣಾಮವಾಗಿ ಅಲ್ಲ ಎಂದು ಮೂಲಗಳು ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿ, “ಗುಂಡಿನ ಚಕಮಕಿ ಮತ್ತು ಮಿಲಿಟರಿ ಕ್ರಮಗಳನ್ನು ಸ್ಥಗಿತಗೊಳಿಸುವ ಕುರಿತು ಭಾರತ ಮತ್ತು ಪಾಕಿಸ್ತಾನ ಇಂದು ತಿಳುವಳಿಕೆಗೆ ಬಂದಿವೆ. ಭಯೋತ್ಪಾದನೆಯ ಎಲ್ಲಾ ಸ್ವರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಭಾರತವು ಸ್ಥಿರವಾದ ಮತ್ತು ರಾಜಿ ಮಾಡಿಕೊಳ್ಳದ ನಿಲುವನ್ನು ಕಾಯ್ದುಕೊಂಡಿದೆ. ಅದನ್ನು ಮುಂದುವರಿಸುತ್ತದೆ” ಎಂದಿದ್ದಾರೆ.
ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡು ರಾಷ್ಟ್ರಗಳಿಗೂ ಅಭಿನಂದನೆಗಳು” ಎಂದು ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.