ನವದೆಹಲಿ, ಮೇ.09 www.bengaluruwire.com : ದೇಶದಲ್ಲಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ದಾಸ್ತಾನಿದೆ. ಎಲ್ಲೂ ಕೂಡಾ ಕೊರತೆಯಿಲ್ಲ, ಜನಸಾಮಾನ್ಯರು, ವರ್ತಕರು ಯಾರೂ ಈ ಬಗ್ಗೆ ಚಿಂತಿತರಾಗಬೇಕಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಅಕ್ಕಿ, ಗೋಧಿ, ಸಕ್ಕರೆ, ಕಡಲೆ, ತೊಗರಿ, ಮಸೂರ್, ಹೆಸರುಕಾಳು, ಖಾದ್ಯ ತೈಲ ಹೀಗೆ ಪ್ರತಿಯೊಂದೂ ಕೂಡಾ ಸಾಕಷ್ಟು ದಾಸ್ತಾನಿದೆ. “ಆಹಾರ ಪದಾರ್ಥ ಕೊರತೆಯಿದೆ” ಎನ್ನುವುದು ಕೇವಲ ಸುಳ್ಳು ವದಂತಿ. ಇದಕ್ಕೆ ಯಾರೂ ಕಿವಿಗೊಡಬಾರದು, ಭಯಭೀತರಾಗಬಾರದು ಹಾಗೂ ವರ್ತಕರೂ ಹೆಚ್ಚು ಹೆಚ್ಚು ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ, ದಾಸ್ತಾನು ಮಾಡಿಟ್ಟುಕೊಳ್ಳಬಾರದು ಎಂದು ಕರೆ ನೀಡಿದ್ದಾರೆ.
ದೇಶದಲ್ಲಿ ಎಲ್ಲಿಯೂ ಆಹಾರ ಧಾನ್ಯ, ಅಗತ್ಯ ವಸ್ತುಗಳ ಕೊರತೆ ಇರುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯ ಖರೀದಿಗೆ ಮಾರುಕಟ್ಟೆಗಳಲ್ಲಿ ಮುಗಿಬೀಳುವ ಅವಶ್ಯಕತೆಯಿಲ್ಲ ಎಂದ ಸಚಿವರು, ವಿನಾಕಾರಣ ಯಾರಾದರೂ ಸುಳ್ಳು ವದಂತಿ ಹರಡಲು ಯತ್ನಿಸಿದರೆ ಹಾಗೂ ವರ್ತಕರು ಹೆಚ್ಚು ಹೆಚ್ಚು ಸಂಗ್ರಹ ಮಾಡಿಟ್ಟುಕೊಂಡರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಅಥವಾ ವ್ಯಾಪಾರ ಸಂಸ್ಥೆಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ಸಹ ನೀಡಿದೆ ಎಂದಿದ್ದಾರೆ.

ಆಹಾರ ಧಾನ್ಯ ದುಪ್ಪಟ್ಟು ಸಂಗ್ರಹವಿದೆ- ವದಂತಿ ನಂಬಬೇಡಿ:

ದೇಶದಲ್ಲಿ ಎಲ್ಲೆಡೆಯೂ ದುಪ್ಪಟ್ಟು ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಸಂಗ್ರವಿದೆ. ಸಾಕಷ್ಟು ದಾಸ್ತಾನಿದೆ. ಹಾಗಿದ್ದರೂ “ಕೊರತೆಯಿದೆ ಎಂದು ಯಾರಾದರೂ ಅಪಪ್ರಚಾರ ಮಾಡಿದಲ್ಲಿ, ಸಂದೇಶಗಳನ್ನು ರವಾನಿಸಿದಲ್ಲಿ ಯಾರೂ ನಂಬಬಾರದು. ಅಗತ್ಯ ಮಾನದಂಡಗಳನ್ನು ಮೀರಿದ ಸಂದೇಶಗಳಿಗೆ ಗಮನ ಕೊಡಬೇಡಿ ಎಂದು ಸಚಿವ ಜೋಶಿ ಕರೆ ನೀಡಿದ್ದಾರೆ.
ದೇಶದಲ್ಲಿ ಏನೇನು? ಎಷ್ಟೆಷ್ಟು ದಾಸ್ತಾನಿದೆ? :
ದೇಶದಲ್ಲಿ ಪ್ರಸ್ತುತ ಅಕ್ಕಿ ದಾಸ್ತಾನು 356.42 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. 135 ಲಕ್ಷ ಮೆಟ್ರಿಕ್ ಟನ್ (Lakh Metric Tonnes- LMT) ಬಫರ್ ಮಾನದಂಡಕ್ಕೆ ವಿರುದ್ಧವಾಗಿ ದುಪ್ಪಟ್ಟು ದಾಸ್ತಾನಿದೆ. ಅದೇ ರೀತಿ, ಗೋಧಿ ದಾಸ್ತಾನು ಸಹ ಹೆಚ್ಚಿದೆ. 276 ಎಲ್‌ಎಂಟಿಯಷ್ಟಿದ್ದು ಬಫರ್ ಮಾನದಂಡಕ್ಕೆ ವಿರುದ್ಧವಾಗಿ 383.32 ಎಲ್‌ಎಂಟಿಯಷ್ಟು ಸಂಗ್ರವಿದ್ದು, ಇದು ಅಗತ್ಯ ಬಫರ್ ಮಾನದಂಡಗಳಿಗಿಂತ ಬಲವಾದ ಹೆಚ್ಚುವರಿಯನ್ನು ಪ್ರದರ್ಶಿಸುತ್ತಿದ್ದು, ರಾಷ್ಟ್ರವ್ಯಾಪಿ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೇ, ಭಾರತ ಸುಮಾರು 17 ಎಲ್‌ಎಂಟಿಯಷ್ಟು ಖಾದ್ಯ ತೈಲ ದಾಸ್ತಾನು ಹೊಂದಿದೆ. ದೇಶೀಯವಾಗಿ ಗರಿಷ್ಠ ಉತ್ಪಾದನಾ ಋತುವಿನಲ್ಲಿ ಸಾಸಿವೆ ಎಣ್ಣೆಯ ಲಭ್ಯತೆ ಹೇರಳವಾಗಿದ್ದು, ಖಾದ್ಯ ತೈಲ ಪೂರೈಕೆಗೆ ಪೂರಕವಾಗಿದೆ. ಪ್ರಸ್ತುತ ಸಕ್ಕರೆ ಋತುವು 79 ಎಲ್‌ಎಂಟಿ ಪ್ರಮಾಣದಷ್ಟು ಕ್ಯಾರಿ-ಓವರ್ ಸ್ಟಾಕ್‌ನೊಂದಿಗೆ ಪ್ರಾರಂಭವಾಗಿದ್ದು, 34 ಎಲ್‌ಎಂಟಿ ಎಥೆನಾಲ್ ಉತ್ಪಾದನೆಗೆ ಬಳಸಿದ ನಂತರವೂ 262 ಎಲ್‌ಎಂಟಿ ಪ್ರಮಾಣದಷ್ಟು ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಸುಮಾರು 257 ಎಲ್‌ಎಂಟಿ ಸಕ್ಕರೆಯನ್ನು ಈಗಾಗಲೇ ಉತ್ಪಾದಿಸಲಾಗಿದೆ. 280 ಎಲ್‌ಎಂಟಿ ದೇಶೀಯ ಬಳಕೆ ಮತ್ತು 10 ಎಲ್‌ಎಂಟಿ ರಫ್ತನ್ನು ಪರಿಗಣಿಸಿ, ಅಂತಿಮ ಸ್ಟಾಕ್ ಸುಮಾರು 50 ಎಲ್‌ಎಂಟಿ ನಿರೀಕ್ಷೆಯಿದೆ. ಇದು ಎರಡು ತಿಂಗಳ ಬಳಕೆಗಿಂತ ಹೆಚ್ಚು ಸಂಗ್ರಹವನ್ನು ತೋರ್ಪಡಿಸುತ್ತದೆ. ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ 2025–26ರ ಸಕ್ಕರೆ ಋತುವಿನ ಉತ್ಪಾದನಾ ನಿರೀಕ್ಷೆಯೂ ಆಶಾದಾಯಕವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಂಕಿ-ಸಂಖ್ಯೆ ಸಹಿತ ವಿವರಿಸಿದ್ದಾರೆ.