ನವದೆಹಲಿ, ಮೇ.9 www.bengaluruwire.com : ಪಾಕಿಸ್ತಾನವು ಭಾರತದತ್ತ ದುಸ್ಸಾಹಸದಿಂದ ಕಣ್ಣೆತ್ತಿ ನೋಡದಂತೆ ಮಾಡುವ ದಿಟ್ಟ ನಿರ್ಧಾರಕ್ಕೆ ಭಾರತವು ಬಂದಿದೆ. ಮೂರು ಸೇನೆಗಳು ಒಟ್ಟಾಗಿ ಪಾಕಿಸ್ತಾನದ ಮೇಲೆ ಭೀಕರ ದಾಳಿ ನಡೆಸಿದ್ದು, ಪಾಕ್ ಸೇನೆಯು ಭಾರತದ ದಾಳಿಯನ್ನು ವಿಫಲಗೊಳಿಸಲು ನಡೆಸಿದ ಪ್ರಯತ್ನವು ಸಂಪೂರ್ಣವಾಗಿ ವಿಫಲವಾಗಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆಯು ಉಗ್ರ ಪ್ರತಿದಾಳಿ ನಡೆಸಿದೆ.
ವಿಶೇಷವೆಂದರೆ, 1971ರ ಭಾರತ-ಪಾಕಿಸ್ತಾನ ಐತಿಹಾಸಿಕ ಯುದ್ಧದ ನಂತರ ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆಯು ಪಾಕಿಸ್ತಾನದ ಆರ್ಥಿಕ ನರನಾಡಿಯಾಗಿರುವ ಕರಾಚಿ ಬಂದರಿನ ಮೇಲೆ ದಿಟ್ಟ ದಾಳಿ ನಡೆಸಿದೆ.
ಐಎನ್‌ಎಸ್ ವಿಕ್ರಾಂತ್‌ನಿಂದ ಕರಾಚಿ ಬಂದರು ಪುನಃ ಭಸ್ಮ :
ಭಾರತದ ಹೆಮ್ಮೆಯ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್, 1971ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿ ಕರಾಚಿ ಬಂದರನ್ನು ಧ್ವಂಸಗೊಳಿಸಿತ್ತು. ಇದೀಗ ಮತ್ತೆ ಅದೇ ವಿಕ್ರಾಂತ್, ಕರಾಚಿ ಬಂದರಿನ ಮೇಲೆ ಸಿಂಹದಂತೆ ಮುಗಿಬಿದ್ದಿದೆ. ಈ ಭೀಕರ ದಾಳಿಯಲ್ಲಿ ಕರಾಚಿ ಬಂದರಿನ ಬಹುತೇಕ ಭಾಗವು ಹೊತ್ತಿ ಉರಿದಿದೆ ಎಂದು ವರದಿಯಾಗಿದೆ.

ಭಾರತದ ಮೇಲೆ ಪಾಕಿಸ್ತಾನವು ನಡೆಸಿದ 8 ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಭಾರತವು ತನ್ನ ಮೂರು ಸೇನಾ ಪಡೆಗಳ ಮೂಲಕ ಎಲ್ಲಾ ದಿಕ್ಕುಗಳಿಂದಲೂ ಪಾಕಿಸ್ತಾನವನ್ನು ಸುತ್ತುವರೆದು ಅಕ್ಷರಶಃ ನರಕವನ್ನೇ ಸೃಷ್ಟಿಸಿದೆ.

ಧಗಧಗ ಕರಾಚಿ ಬಂದರು: ಪಾಕ್ ಆತಂಕ :
ಕರಾಚಿ ಬಂದರು ಪಾಕಿಸ್ತಾನಕ್ಕೆ ಇಂಧನ ಮತ್ತು ಸರಕುಗಳ ಪೂರೈಕೆಯ ಪ್ರಮುಖ ಕೇಂದ್ರವಾಗಿದೆ. ಇದರ ಮೇಲೆ ಭಾರತೀಯ ನೌಕಾಪಡೆಯು ಯಶಸ್ವಿ ದಾಳಿ ನಡೆಸಿರುವುದರಿಂದ ಪಾಕಿಸ್ತಾನವು ತೀವ್ರ ಆತಂಕಕ್ಕೆ ಒಳಗಾಗಿದೆ. ಬಂದರು ಹೊತ್ತಿ ಉರಿಯುತ್ತಿರುವುದರಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪಾಕಿಸ್ತಾನದಾದ್ಯಂತ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪಾಕ್ ವಿರುದ್ಧ 26 ಯುದ್ಧ ನೌಕೆ ನಿಯೋಜನೆ :
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮತ್ತು ಅವರ ಸಂಭಾವ್ಯ ದಾಳಿಗಳನ್ನು ಎದುರಿಸಲು ಭಾರತವು ಬರೋಬ್ಬರಿ 26 ಅತ್ಯಾಧುನಿಕ ಯುದ್ಧ ನೌಕೆಗಳನ್ನು ನಿಯೋಜಿಸಿದೆ. ಈ ಬೃಹತ್ ನೌಕಾ ಪಡೆಯ ಮುಂಚೂಣಿಯಲ್ಲಿರುವ ಐಎನ್‌ಎಸ್ ವಿಕ್ರಾಂತ್ ಈಗಾಗಲೇ ಕರಾಚಿ ಬಂದರಿನ ಮೇಲೆ ತನ್ನ ಅಬ್ಬರದ ದಾಳಿಯನ್ನು ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಮೂರು ಸೇನೆಗಳ ಸಂಯುಕ್ತ ಆಕ್ರಮಣ :
ಐಎನ್‌ಎಸ್ ವಿಕ್ರಾಂತ್ ಇದೀಗ ಸರ್ವ ಸನ್ನದ್ಧವಾಗಿದ್ದು, ನೌಕಾಪಡೆಯು ಹದ್ದಿನ ಕಣ್ಣಿನಿಂದ ಕಾಯ್ದು ತನ್ನ ನಿಖರ ದಾಳಿ ನಡೆಸುತ್ತಿದೆ. ಪಾಕಿಸ್ತಾನವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಭಾರತೀಯ ಸೇನೆಯು ದಾಳಿಯನ್ನು ಸಂಘಟಿಸುತ್ತಿದೆ. ನೌಕಾಪಡೆಯ ಈ ದಿಟ್ಟ ದಾಳಿಯೊಂದಿಗೆ, ಭಾರತದ ವಾಯುಸೇನೆ ಮತ್ತು ಭೂಸೇನೆಯೂ ಪಾಕಿಸ್ತಾನದ ಮೇಲೆ ಏಕಕಾಲಕ್ಕೆ ಮುಗಿಬಿದ್ದಿವೆ.
ಬೆಂಗಳೂರು ಹೆಚ್ಎಎಲ್ನಲ್ಲಿ ಹೈ ಅಲರ್ಟ್, ಸಿಬ್ಬಂದಿ ರಜೆ ರದ್ದು:
ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಚ್ಎಎಲ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಿಬ್ಬಂದಿಯ ರಜೆಗಳನ್ನೆಲ್ಲ ರದ್ದು ಮಾಡಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧರಿರಲು ಸೂಚನೆ ನೀಡಲಾಗಿದೆ. ಯುದ್ಧ ವಿಮಾನಗಳ ನಿರ್ವಹಣೆಯ ಕಾರಣ ಕಡ್ಡಾಯ ಹಾಜರಿರುವಂತೆ ಸಿಬ್ಬಂದಿಗೆ, ತಂತ್ರಜ್ಞರಿಗೆ ಸೂಚನೆ ನೀಡಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ತಯಾರಿ ನಡೆಸುವಂತೆ ನಿರ್ದೇಶನ ನೀಡಿದೆ.
ಪಾಕ್ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಭಾರತ :
ಪಾಕಿಸ್ತಾನವು ತನ್ನ ಫೈಟರ್ ಜೆಟ್‌ಗಳ ಮೂಲಕ ಭಾರತದ ಮೇಲೆ ಹೇಡಿತನದ ದಾಳಿ ನಡೆಸಲು ಪ್ರಯತ್ನಿಸಿತು. ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದ ಗಡಿ ಭಾಗದ ಮೂಲಕ ಭಾರತದೊಳಗೆ ನುಗ್ಗಲು ಯತ್ನಿಸಿದ ಪಾಕ್ ವಾಯುಸೇನೆಗೆ ಭಾರತೀಯ ವಾಯುಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತವು ಪಾಕಿಸ್ತಾನದ ಎರಡು ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ್ದು, ಈ ಪೈಕಿ ಒಂದು ವಿಮಾನದ ಪೈಲಟ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಮತ್ತೋರ್ವ ಪೈಲಟ್ ವಿಮಾನ ಪತನದ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಕರಾಚಿ ಬಂದರಿನ ಮೇಲೆ ಮತ್ತಷ್ಟು ಭಾರತೀಯ ದಾಳಿಗಳ ಭೀತಿಯಿಂದಾಗಿ ಆ ಬಂದರಿನ ಸಮೀಪದಲ್ಲಿ ಯಾವುದೇ ಹಡಗುಗಳು ಕಾಣುತ್ತಿಲ್ಲ. ಭಾರತದ ಈ ದಿಟ್ಟ ಕ್ರಮವು ಪಾಕಿಸ್ತಾನಕ್ಕೆ ತೀವ್ರ ಆತಂಕವನ್ನುಂಟು ಮಾಡಿದೆ.