ನವದೆಹಲಿ, ಮೇ.08 www.bengaluruwire.com : ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರವು ಬುಧವಾರ ಒಂದು ವರ್ಷ ವಿಸ್ತರಣೆ ಮಾಡಿದೆ. ಆ ಮೂಲಕ ನೂತನ ನಿರ್ದೇಶಕರ ಆಯ್ಕೆಯನ್ನು ಮುಂದೂಡಿದಂತಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಒಳಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಮಿತಿಯು ಸೋಮವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿದ್ದಾರೆ ಎಂದು ಪಿಟಿಐ ಹೇಳಿದೆ.
ಪ್ರವೀಣ್ ಅವರ ಅಧಿಕಾರಾವಧಿಯನ್ನು ಇದೇ ಮೇ 24ರಿಂದ ಒಂದು ವರ್ಷ ವಿಸ್ತರಿಸುವಂತೆ ಸಮಿತಿ ನೀಡಿರುವ ಶಿಫಾರಸನ್ನು ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಅಂಗೀಕರಿಸಿದೆ.
ಮೂಲಗಳ ಪ್ರಕಾರ, ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಭೆ ಸೇರಿದ ಮೂವರು ಸದಸ್ಯರ ಆಯ್ಕೆ ಸಮಿತಿಯು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸೇರಿದಂತೆ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳ ಕುರಿತು ಚರ್ಚಿಸಿತು.

ಆದಾಗ್ಯೂ, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ, ಆ ನಂತರ ಸದಸ್ಯರು ಸೂದ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲು ಒಪ್ಪಿದರು. ಮೇ 25 ರಂದು ಪ್ರವೀಣ್ ಸೂದ್ ಅವರ ಎರಡು ವರ್ಷಗಳ ನಿಗದಿತ ಅಧಿಕಾರಾವಧಿಯ ಅಂತ್ಯದ ಮೊದಲು ಈ ಚರ್ಚೆಗಳು ನಡೆದು ಅವರ ಸೇವೆಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
