ಬೆಂಗಳೂರು, ಮೇ.7 www.bengaluruwire.com : ಭಾರತೀಯ ಸೇನಾಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಪೋಷಿತ ಭಯೋತ್ಪಾದಕರ 9 ನೆಲೆಗಳ ಮೇಲೆ ಯಶಸ್ವಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಆದೇಶಿಸಿದ್ದಾರೆ.
ಈ ಕುರಿತು ಮುಜರಾಯಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಸಚಿವರು, “ಆಪರೇಷನ್ ಸಿಂಧೂರ” ಹೆಸರಿನ ಈ ದಿಗ್ವಿಜಯದ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ ಭಾರತೀಯ ಸೇನಾಪಡೆಗಳ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ, ರಾಜ್ಯದ ಮುಜರಾಯಿ ಇಲಾಖೆ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಯೋಧರ ಹೆಸರಿನಲ್ಲಿ ಪೂಜೆಗಳನ್ನು ನಡೆಸಿ, ಯೋಧರಿಗೆ ಒಳಿತಾಗಲಿ, ಭಾರತೀಯ ಸೇನೆಗೆ ದೇವರು ಮತ್ತಷ್ಟು ಶಕ್ತಿ ನೀಡಿ ಅನುಗ್ರಹಿಸಲಿ ಎಂದು ಸಂಕಲ್ಪದೊಂದಿಗೆ ಪೂಜೆ ನೆರವೇರಿಸಲು ಕ್ರಮ ಕೈಗೊಳ್ಳಬೇಕು” ಎಂದು ಸಚಿವರು ಆದೇಶಿಸಿದ್ದಾರೆ. ಇದನ್ನೂ ಓದಿ : ‘ಆಪರೇಷನ್ ಸಿಂಧೂರ್’ ನಲ್ಲಿ ಧ್ವಂಸವಾದ 9 ಭಯೋತ್ಪಾದಕ ಶಿಬಿರಗಳ ಮ್ಯಾಪ್ ಸಹಿತ ಡಿಟೇಲ್ಸ್ ಇಲ್ಲಿದೆ
ಈ ಸಂಬಂಧ ಇಂದು ಮುಜರಾಯಿ ಆಯುಕ್ತರು ಸಚಿವರ ಆದೇಶದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರುಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ನಮ್ಮ ಸೈನಿಕರು ದೇಶದ ಗಡಿಗಳನ್ನು ಕಾಯುವಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಅವರ ಈ ಸಾಹಸ ಕಾರ್ಯಕ್ಕೆ ನಾವು ಕೃತಜ್ಞರಾಗಿರಬೇಕು. ಆಪರೇಷನ್ ಸಿಂಧೂರದಲ್ಲಿನ ಯಶಸ್ಸು ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿ, ಆ ವೀರ ಯೋಧರಿಗೆ ನಮ್ಮ ಗೌರವವನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು.

“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.
