ನವದೆಹಲಿ, ಮೇ.7 www.bengaluruwire.com : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯಾನಕ ಭಯೋತ್ಪಾದಕ ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ನೀಡಿದ ವಿಶೇಷ ಸುದ್ದಿಗೋಷ್ಠಿಯಲ್ಲಿ, ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಮೂಲಕ ಗಡಿ ನಿಯಂತ್ರಣ ರೇಖೆಯ ಬಳಿ ಇದ್ದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಲಾಗಿದೆ ಎಂದು ತಿಳಿಸಿದರು.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಗೆ ಸೇರಿದ ಭಯೋತ್ಪಾದಕರು ಅಮಾಯಕರಾದ ಪ್ರವಾಸಿಗರನ್ನು ಗುರಿಯಾಗಿಸಿ ಹತ್ಯೆಗೈದಿದ್ದರು. ಈ ಹೇಯ ಕೃತ್ಯದಲ್ಲಿ 25 ಭಾರತೀಯರು ಮತ್ತು 1 ನೇಪಾಳಿ ಪ್ರಜೆಯು ಬಲಿಯಾಗಿದ್ದರು. ಪ್ರವಾಸೋದ್ಯಮವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿತ್ತು ಎಂದು ಮಿಸ್ರಿ ಹೇಳಿದರು.
“ದಿ ರೆಸಿಸ್ಟೆನ್ಸ್ ಫ್ರಂಟ್” ಎಂಬ ಸಂಘಟನೆಯು ಈ ದಾಳಿಯ ಹೊಣೆ ಹೊತ್ತಿಕೊಂಡಿದ್ದು, ಇದು ಲಷ್ಕರ್-ಎ-ತೊಯ್ಬಾದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಮಿಸ್ರಿ ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲದೆ, ಭಯೋತ್ಪಾದಕ ಸಂಘಟನೆ TRF ಕುರಿತ ಉಲ್ಲೇಖವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಧ್ಯಮ ಪ್ರಕಟಣೆಯಿಂದ ತೆಗೆದುಹಾಕಲು ಪಾಕಿಸ್ತಾನವು ಪ್ರಯತ್ನಿಸಿರುವುದು ಅವರ ಭಯೋತ್ಪಾದಕ ನಂಟನ್ನು ಮತ್ತಷ್ಟು ಬಯಲು ಮಾಡುತ್ತದೆ ಎಂದು ಅವರು ತಿಳಿಸಿದರು.
ಭಾರತದ ಗುಪ್ತಚರ ಸಂಸ್ಥೆಗಳು ದೇಶದ ಮೇಲೆ ಮತ್ತಷ್ಟು ದಾಳಿಗಳಾಗುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದವು. ಹೀಗಾಗಿ, ಭವಿಷ್ಯದ ದಾಳಿಗಳನ್ನು ತಡೆಯುವ ಮತ್ತು ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಪಡಿಸುವ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ, ಭಾರತವು ಇಂದು ಮುಂಜಾನೆ ತನ್ನ ಹಕ್ಕನ್ನು ಚಲಾಯಿಸಿ, ಗಡಿಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಿದೆವು. ಈ ಕಾರ್ಯಾಚರಣೆಯು ನಿಯಂತ್ರಿತ, ಪ್ರಮಾಣಾನುಗುಣ ಮತ್ತು ಜವಾಬ್ದಾರಿಯುತವಾಗಿತ್ತು ಎಂದು ಮಿಸ್ರಿ ವಿವರಿಸಿದರು.

ಕರ್ನಲ್ ಸೋಫಿಯಾ ಖುರೇಶಿ ಅವರು ನೀಡಿದ ಮಾಹಿತಿಯ ಪ್ರಕಾರ, ಬುಧವಾರ ಮುಂಜಾನೆ 1.05 ರಿಂದ 1.30 ರ ನಡುವೆ ಈ ದಾಳಿಗಳು ನಡೆದವು. “ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ‘ಸಿಂಧೂರ್’ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಒಟ್ಟು ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ಧ್ವಂಸ ಮಾಡಲಾಗಿದೆ” ಎಂದು ಅವರು ತಿಳಿಸಿದರು.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಮಾತನಾಡಿ, “ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಭಾರತೀಯ ಸಶಸ್ತ್ರ ಪಡೆಗಳು ‘ಸಿಂಧೂರ್’ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿವೆ. ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಮತ್ತು ಯಾವುದೇ ನಾಗರಿಕ ಸಾವುನೋವು ಸಂಭವಿಸದಂತೆ ಎಚ್ಚರಿಕೆಯಿಂದ ಗುರಿಗಳನ್ನು ಆಯ್ಕೆ ಮಾಡಲಾಗಿತ್ತು” ಎಂದು ಹೇಳಿದರು.
9 ಉಗ್ರಗಾಮಿಗಳ ಕ್ಯಾಂಪ್ ಹೆಸರುಗಳು :
ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಸವಾಯಿ ನಾಲಾ -ಮುಜಫರಾಬಾದ್, ಸೈಯದ್ನಾ ಬಿಲಾಲ್ – ಮುಜಫರಾಬಾದ್, ಗುಲ್ಪುರ- ಕೋಟ್ಲಿ, ಬರ್ನಾಲಾ- ಭಿಂಬರ್, ಅಬ್ಬಾಸ್ -ಕೊಟ್ಲಿಬಹವಲ್ಪುರ ಉಗ್ರಗಾಮಿ ನೆಲೆಗಳು ಹಾಗೂ ಪಾಕಿಸ್ತಾನದಲ್ಲಿನ ಮುರಿಡ್ಕೆ, ಸರ್ಜಾಲ್ ಹಾಗೂ ಮೆಹಮೂನ ಜೊಯಾ ಸೇರಿದಂತೆ ಒಟ್ಟು 9 ಉಗ್ರಗಾಮಿಗಳ ಕ್ಯಾಂಪ್ ಗಳ ಮೇಲೆ ವಾಯುಪಡೆಯ ಯುದ್ಧ ವಿಮಾನಗಳು ಹಾಗೂ ಸೇನಾಪಡೆಯು ನಿರ್ದಿಷ್ಟ ದಾಳಿ ನಡೆಸಿ ಆ ಕ್ಯಾಂಪ್ ಗಳನ್ನು ನಿರ್ನಾಮ ಮಾಡಿದೆ.
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದವು. ಇದರಲ್ಲಿ ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆಯಾದ ಬಹಾವಲ್ಪುರ ಮತ್ತು ಲಷ್ಕರ್-ಎ-ತೊಯ್ಬಾದ ಮುಖ್ಯ ನೆಲೆಯಾದ ಮುರಿದ್ಕೆಯೂ ಸೇರಿವೆ.
ದಾಳಿಗಳು ಯಶಸ್ವಿಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ಈ ದಾಳಿಯಲ್ಲಿ ಸ್ಟ್ಯಾಂಡ್-ಆಫ್ ವೆಪನ್‌ಗಳು, ಡ್ರೋನ್‌ಗಳು ಮತ್ತು ನಿಖರ ಮದ್ದುಗುಂಡುಗಳನ್ನು ಒಳಗೊಂಡಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡಿವೆ ಎಂದು ತಿಳಿದುಬಂದಿದೆ. (News Source : PIB & ANI)