ನವದೆಹಲಿ, ಮೇ.07 www.bengaluruwire.com : ಪಾಕಿಸ್ತಾನದ ಭಯೋತ್ಪಾದನೆಗೆ ಭಾರತೀಯ ಸಶಸ್ತ್ರ ಪಡೆಗಳು ಮಂಗಳವಾರ ತಡರಾತ್ರಿ ತಕ್ಕ ಪ್ರತ್ಯುತ್ತರ ನೀಡಿದೆ.
ಇತ್ತೀಚೆಗೆ ನಡೆದ ಭಯಾನಕ ಪಾಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿ ಯಶಸ್ವಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದಕರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಧ್ವಂಸಗೊಳಿಸಿದೆ.
ಈ ಕಾರ್ಯಾಚರಣೆಯಲ್ಲಿ ಮುರಿಡ್ಕೆ ಮತ್ತು ಬಹವಾಲ್ಪುರ್ ಸೇರಿದಂತೆ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳ ಭದ್ರಕೋಟೆಗಳಾಗಿರುವ ಒಟ್ಟು ಒಂಬತ್ತು (9) ಭಯೋತ್ಪಾದಕ ನೆಲೆಗಳನ್ನು ಹೊಡೆದುರುಳಿಸಲಾಗಿದೆ.
ಏಪ್ರಿಲ್ 22 ರಂದು ನಡೆದ ಪಾಹಲ್ಗಾಮ್ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆಯ ಹತ್ಯೆಯಾಯಿತು. ಈ ಕೃತ್ಯಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡುವ ಭರವಸೆಯನ್ನು ಭಾರತ ಸರ್ಕಾರ ನೀಡಿತ್ತು.

ಅದರಂತೆ, ಭಾರತೀಯ ಸೇನೆಯು ಅತ್ಯಂತ ನಿಖರ ಮತ್ತು ಯೋಜಿತ ರೀತಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದೆ. ಗಮನಾರ್ಹ ಸಂಗತಿಯೆಂದರೆ, ಈ ಕಾರ್ಯಾಚರಣೆಯು ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಲ್ಲ. ಭಾರತವು ಶತ್ರು ನೆಲೆಗಳ ಗುರಿಗಳ ಆಯ್ಕೆ ಮತ್ತು ಕಾರ್ಯಾಚರಣೆಯ ವಿಧಾನದಲ್ಲಿ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಕಾರ್ಯಾಚರಣೆಗಳಲ್ಲಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಪ್ರಮುಖ ಭಯೋತ್ಪಾದಕ ಸಂಘಟನೆಗಳ ತರಬೇತಿ ಶಿಬಿರಗಳು ಮತ್ತು ನೆಲೆಗಳು ಸೇರಿವೆ ಎಂದು ತಿಳಿದುಬಂದಿದೆ.
ಈ ಭಯೋತ್ಪಾದಕ ಗುಂಪುಗಳು ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದಕ ಕೃತ್ಯಗಳನ್ನು ಸಂಘಟಿಸುವಲ್ಲಿ ಮತ್ತು ನಿರ್ದೇಶಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು.
ಭಾರತದ ಈ ದಿಟ್ಟ ಕ್ರಮವು ಭಯೋತ್ಪಾದನೆಗೆ ತನ್ನ ಶೂನ್ಯ ಸಹಿಷ್ಣುತಾ ನೀತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ, ತನ್ನ ನಾಗರಿಕರ ರಕ್ಷಣೆಗೆ ಭಾರತವು ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಕಾರ್ಯಾಚರಣೆಯ ಕುರಿತು ಹೆಚ್ಚಿನ ವಿವರಗಳನ್ನು ಇಂದು ನಂತರ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. (Photo Credit : Reuters)
ಪಾಕಿಸ್ತಾನದಿಂದ ಶ್ರೀನಗರದ ವಾಯುನೆಲೆ ಮೇಲೆ ದಾಳಿಯಾಗಿಲ್ಲ :

ಪಾಕಿಸ್ತಾನ ಪರವಾಗಿರುವ ಹಲವಾರು ಹ್ಯಾಂಡಲ್‌ಗಳು ಹಂಚಿಕೊಂಡಿರುವ ವೀಡಿಯೊದಲ್ಲಿ, ಪಾಕಿಸ್ತಾನ ವಾಯುಪಡೆಯು ಶ್ರೀನಗರ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿದೆ ಎಂದು ತಪ್ಪಾಗಿ ಹೇಳಲಾಗುತ್ತಿದೆ. ಹಂಚಿಕೊಳ್ಳಲಾದ ವೀಡಿಯೊ ಹಳೆಯದಾಗಿದ್ದು, ಭಾರತದ್ದಲ್ಲ. ಈ ವೀಡಿಯೊ 2024 ರಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಜನಾಂಗೀಯ ಘರ್ಷಣೆಗಳದ್ದಾಗಿದೆ. ಇದೊಂದು ಸುಳ್ಳು ಸುದ್ದಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ತಿಳಿಸಿದೆ.