ಬೆಂಗಳೂರು, ಮೇ.2 www.bengaluruwire.com : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇದೇ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ರಾಜ್ಯಾದ್ಯಂತ 2818 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗೆ ಒಟ್ಟು 8,42,173 ಅಭ್ಯರ್ಥಿಗಳು ಹಾಜರಾಗಿದ್ದರು. ಆ ಪೈಕಿ ಒಟ್ಟಾರೆಯಾಗಿ ಶೇ.62.34 ಮಂದಿ ಪಾಸಾಗಿದ್ದಾರೆ.
ಮಂಡಳಿಯು ನೀಡಿದ ಮಾಹಿತಿಯ ಪ್ರಕಾರ, ಉತ್ತರದ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಏಪ್ರಿಲ್ 15 ರಿಂದ 26 ರವರೆಗೆ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 237 ಮೌಲ್ಯಮಾಪನ ಕೇಂದ್ರಗಳಲ್ಲಿ 60,943 ಮೌಲ್ಯಮಾಪಕರಿಂದ ನಡೆಸಲಾಗಿತ್ತು.
ಫಲಿತಾಂಶದ ವಿವರ:
* ಒಟ್ಟಾರೆ ಫಲಿತಾಂಶ: 62.34%

* ಶಾಲಾ ವಿದ್ಯಾರ್ಥಿಗಳ ಫಲಿತಾಂಶ: 66.14%

* ಖಾಸಗಿ ವಿದ್ಯಾರ್ಥಿಗಳ ಫಲಿತಾಂಶ: 8.15%
* ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶ: 1.85% (ಶಾಲಾ ವಿದ್ಯಾರ್ಥಿಗಳು), 5.00% (ಖಾಸಗಿ ವಿದ್ಯಾರ್ಥಿಗಳು)
ಪರೀಕ್ಷೆಯಲ್ಲಿ ಬಾಲಕಿಯರ ಫಲಿತಾಂಶವು ಬಾಲಕರ ಫಲಿತಾಂಶಕ್ಕಿಂತ ಹೆಚ್ಚಾಗಿದೆ. ಬಾಲಕಿಯರ ಉತ್ತೀರ್ಣ ಪ್ರಮಾಣವು 74.00% ಆಗಿದ್ದರೆ, ಬಾಲಕರ ಉತ್ತೀರ್ಣ ಪ್ರಮಾಣವು 58.07% ಆಗಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ.
ಪರೀಕ್ಷಾ ಮಂಡಳಿಯು ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಮತ್ತು ಎಸ್‌ಎಂಎಸ್ ಮೂಲಕ ಪಡೆಯಲು ಅವಕಾಶವನ್ನು ಕಲ್ಪಿಸಿದೆ. ಅಲ್ಲದೆ, ಶಾಲೆಗಳಲ್ಲಿ ಕ್ರೋಢೀಕರಿಸಿದ ಫಲಿತಾಂಶ ಪಟ್ಟಿಗಳನ್ನು ನೀಡಲಾಗುವುದು ಎಂದು ತಿಳಿಸಿದೆ.
ಪರೀಕ್ಷೆ-1 ರಲ್ಲಿ ‘ಪೂರ್ಣಗೊಂಡಿಲ್ಲ’ (Not Completed) ಎಂದು ಫಲಿತಾಂಶ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ-2ಕ್ಕೆ ಪರೀಕ್ಷಾ ಶುಲ್ಕವನ್ನು ಮಂಡಳಿಯು ಮನ್ನಾ ಮಾಡಿದೆ. ಆದರೆ, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ತಿಳಿಸಲಾಗಿದೆ.
2024-25ನೇ ಸಾಲಿನಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್‌ಕಾಸ್ಟಿಂಗ್ ಮಾಡುವ ಪದ್ಧತಿಯನ್ನು ಮುಂದುವರಿಸಲಾಗಿದ್ದು, ಇದರಿಂದ ಪರೀಕ್ಷಾ ಅಕ್ರಮಗಳನ್ನು ತಡೆಯಲು ಸಹಕಾರಿಯಾಗಿದೆ ಎಂದು ಮಂಡಳಿ ತಿಳಿಸಿದೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 2, 2025 ರಿಂದ ಮೇ 7, 2025 ರವರೆಗೆ ಅವಕಾಶವಿರುತ್ತದೆ. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ / ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯವಿಲ್ಲದವರು ಆಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕವನ್ನು ಮೇ 2, 2025 ರಿಂದ ಮೇ 8, 2025 ರವರೆಗೆ ಪಾವತಿಸಬಹುದು.
ಉತ್ತರ ಪತ್ರಿಕೆಗಳ ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 4 ರಿಂದ ಮೇ 11 ರವರೆಗೆ ಅವಕಾಶವಿರುತ್ತದೆ. ಅಲ್ಲದೆ, ಎಸ್‌ಎಸ್‌ಎಲ್‌ಸಿ 2025 ರ ಪರೀಕ್ಷೆ -2 ನ್ನು ಮೇ 26 ರಿಂದ ಜೂನ್ 2 ರವರೆಗೆ ಮತ್ತು ಪರೀಕ್ಷೆ -3 ನ್ನು ಜೂನ್ 23 ರಿಂದ 30 ರವರೆಗೆ ನಡೆಸಲು ನಿರ್ಧರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಫಲಿತಾಂಶಗಳನ್ನು ವೀಕ್ಷಿಸಲು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್ https://kseab.karnataka.gov.in ಭೇಟಿ ನೀಡಿ.