ಬೆಂಗಳೂರು, ಮೇ.01 www.bengaluruwire.com : ಕ್ರಿಕೆಟ್ ಅಂದರೆ ನಮ್ಮ ಭಾರತದಲ್ಲಿ ಕ್ರೀಡಾಪ್ರೇಮಿಗಳಿಗೆ ಇರುವಷ್ಟು ಕ್ರೇಜ್ ಬೇರೆ ಆಟಕ್ಕೆ ಕಡಿಮೆಯೇ. ಟಿ-20 ಕಿರು ಕ್ರಿಕೆಟ್ ಬಂದ ಮೇಲಂತೂ ಈ ಕ್ರೀಡೆಯ ನೋಡುವ, ಆರಾಧಿಸುವ ವಿಧಾನವೇ ಬದಲಾಗಿದೆ. ಬೆಂಗಳೂರಿನ ಆರ್ ಸಿಬಿ ಟೀಮ್ ಬೆಂಬಲಿಸುವ ಅಭಿಮಾನಿಗಳು ಇದೀಗ RCB ಕ್ರಿಕೆಟ್ ಗೀತೆ ರಚಿಸಿದ್ದು ಇದನ್ನು ಎಂಆರ್ ಟಿ ಮ್ಯೂಸಿಕ್ ಹೊರತಂದಿದೆ.
ಸುಮಾರು 4.03 ನಿಮಿಷದ ಈ ಆರ್ ಸಿಬಿ ಕ್ರಿಕೆಟ್ ಗೀತೆಯನ್ನು ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ಯೂಟ್ಯೂಬ್ ನಲ್ಲಿ ಕಳೆದ ಮೂರು ದಿನಗಳ ಹಿಂದೆ ಲಾಂಚ್ ಮಾಡಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಆ…….. ಆರ್..ಸಿ… ಬಿ. ಒಂದೇ ಊರು
ಆರ್…. ಸಿ… ಬಿ. ಇದೊಂದೇ ಉಸಿರು” ಎಂಬ ಆಂತಮ್ ಸಾಂಗ್ ಆರ್ ಸಿಬಿ ಫ್ಯಾನ್ಸ್ ಗಳಿಗೆ ಸಾಕಷ್ಟು ಜೋಷ್ ಹಾಗೂ ಥ್ರಿಲ್ ತಂದುಕೊಟ್ಟಿದೆ. ಮುಂದೆ ಈ ಕ್ರಿಕೆಟ್ ಗೀತೆ, ಆರ್ ಸಿಬಿ ಕ್ರೀಡಾಭಿಮಾನಿಗಳಲ್ಲಿ ಕ್ರಿಕೆಟ್ ಕಿಚ್ಚು ಹೆಚ್ಚಿಸುವ ಲಕ್ಷಣ ಹೊಂದಿದೆ.

ಗಗನ್ ಎಂಬ ಆರ್ ಸಿಬಿ ಫ್ಯಾನ್ ಕಳೆದ ಒಂದು ವರ್ಷದಿಂದ ಆರ್ ಸಿಬಿ ಕ್ರಿಕೆಟ್ ಗೀತೆ ರಚಿಸಿ, ಚಿತ್ರಕಥೆ ಹಾಗೂ ತಮ್ಮ ಇತರ ಸ್ನೇಹಿತ ಜೊತೆ ಸೇರಿ ಹಾಡಿದ್ದಲ್ಲದೆ ಸಹ ನಿರ್ಮಾಪಕರಾಗಿ ಈ ಗೀತೆಯನ್ನು ನಿರ್ಮಾಣ ಮಾಡಿದ್ದಾರೆ.
ಆರ್ ಸಿಬಿ ನಮ್ಮ ಉಸಿರು ಗೀತೆಯನ್ನು ಗಗನ್ ಕಂಠಕ್ಕೆ ಜೊತೆಯಾಗಿ ಅವರ ಸ್ನೇಹಿತರಾದ ಭಾನು ಪ್ರಕಾಶ್, ಶೃಂಗಾರ್, ಪ್ರಕೃತಿ ಸಾಥ್ ನೀಡಿದ್ದಾರೆ.
ಆರ್ ಸಿಬಿ ಕ್ರಿಕೆಟ್ ಗೀತೆಯ ಬಗ್ಗೆ ಅದರ ರುವಾರಿಯಾದ ಗಗನ್ ಬೆಂಗಳೂರು ವೈರ್ ಜೊತೆ ಮಾತನಾಡಿ, “ಕ್ರಿಕೆಟ್ ನಲ್ಲಿ ಸೋಲು ಗೆಲುವು ಇದ್ದಿದ್ದೇ. ಆರ್ ಸಿಬಿ ನಮ್ಮ ನಾಡಿನ ಹೆಮ್ಮೆ. ಈ ತಂಡವನ್ನು ಹಲವು ವರ್ಷಗಳಿಂದ ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಆರಾಧಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೇನೆ. ಒಬ್ಬ ಕ್ರೀಡಾಭಿಮಾನಿಯಾಗಿ ಆರ್ ಸಿಬಿ ಕ್ರಿಕೆಟ್ ಗೀತೆ ರಚಿಸಬೇಕು ಅಂತ ಬಂದಾಗ ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡೆ”.
“ಈ ಸಂಗೀತ, ಸಿನಿಮಾ, ಡ್ಯಾನ್ಸ್ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಚಿಕ್ಕ ವಯಸ್ಸಿನಿಂದಲೂ ಶಾಲೆ-ಕಾಲೇಜಿನ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ಮಾಡಿಕೊಂಡೇ ಬೆಳೆದೆ. ಆಗ ಸಣ್ಣ ಪುಟ್ಟ ಕೊರಿಯೋಗ್ರಫಿ ಮಾಡುತ್ತಿದ್ದೆ. ಅಲ್ಲದೆ ಆರ್ ಸಿಬಿ ತಂಡದ ಮೇಲೆ ಇರೋ ಹುಚ್ಚು ಅಭಿಮಾನ ಈ ಸಾಂಗ್ ಬರಿಯೋಕೆ ಸುಲಭ ಆಯ್ತು. ಈ ಸಾಂಗ್ ನಿರ್ದೇಶನವನ್ನು ಪವನ್ ಒಡೆಯರ್ ಅಥವಾ ಸಿಂಪಲ್ ಸುನಿ ಮಾಡಬೇಕಿತ್ತು. ಅವರ ಜೊತೆ ಕಾರಣಾಂತರಗಳಿಂದ ಕೆಲಸ ಮಾಡಲು ಆಗಲಿಲ್ಲ. ಪ್ರಾರಂಭದಲ್ಲಿ ಹಲವರನ್ನು ಈ ಪ್ರಾಜೆಕ್ಟ್ ಹೂಡಿಕೆ ಮಾಡೋಕೆ ಕೇಳಿದ್ರು ಯಾರೂ ಮುಂದೆ ಬರಲಿಲ್ಲ. ಆನಂತರ ನಾನು, ಭಾನುಪ್ರಕಾಶ್ ಹಾಗೂ ಶೃಂಗಾರ್ ನಿರ್ಮಾಪಕರಾಗಿ ಈ ಸಾಂಗ್ ಮಾಡಿದ್ವಿ. ಗುಟ್ಟಹಳ್ಳಿಯ ಅನಿಲ್ ಕುಮಾರ್ ಅವರು ನಮಗೆ ಬೆಂಬಲ ಕೊಟ್ರು”.

“ಆರ್ ಸಿಬಿ ನಮ್ಮ ಉಸಿರು ಗೀತೆ ಕರ್ನಾಟಕದ ಗೀತೆ. ಇದು ಶುದ್ಧ ಭಾವನಾತ್ಮಕ ಅಂಶಗಳನ್ನು ಹೊಂದಿದ ಹಾಡು. ಇದರಲ್ಲಿ ಬಳಸಿದ ಒಂದೊಂದು ಪದ ಕೇಳುಗರಿಗೆ ನಮ್ಮ ಮನಸಿನ ಮಾತು ಅಂತ ಫೀಲ್ ಆಗುತ್ತೆ. ಈ ಗೀತೆಯಲ್ಲಿ ಎಲ್ಲೂ ಕೂಡ ಆರ್ ಸಿಬಿ ತಂಡದ ಯಾವ ಆಟಗಾರನ ಹೆಸರು ಬಳಸಿಲ್ಲ. ಇನ್ನು 10 ವರ್ಷ ಆದ್ರೂ ಇದು ಫ್ರೆಶ್ ಆಗಿ ಕೇಳುಗ/ನೋಡುಗರನ್ನು ಸೆಳೆಯುತ್ತೆ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಆರ್ ಸಿಬಿ ನಮ್ಮ ಉಸಿರು ಗೀತೆ ಆರಂಭ…ಹೀಗಿದೆ
“ವಿಜಯದ ಸಂಕೇತಕ್ಕು ಮೀರಿರುವ ಈ ಮನಕೆ…
ನಿಮಗೆ ಏಕೆ ಆ ಒಂದು ಸಣ್ಣ ಗೆಲುವ ಹೋಲಿಕೆ….
ಆಟವೆಂಬ ಯುದ್ಧದಲ್ಲಿ ಸೋಲು ಗೆಲುವು ಇರೋದೆ
ವಾಡಿಕೆ….ಆರ್ಭಟಿಸಿ ಉಸಿರು ಬಿಗಿದು ಸಾರಿ ಸಾರಿ
ಕೂಗೋ ಬೇಡಿಕೆ….”
ಅಂತ ಆರಂಭವಾಗಿ 04.03 ನಿಮಿಷದ ಸಾಂಗ್ ಮುಗಿಯೋ ವೇಳೆಗೆ ಇದೊಂದು ಪಕ್ಕಾ ಕ್ರಿಕೆಟ್ ಗೀತೆ ಅನ್ನಿಸೋದರಲ್ಲಿ ಯಾವುದೇ ಅನುಮಾನವಿಲ್ಲ.
ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗೂ ಅವರ ತಂಡ ಮೈದಾನದಲ್ಲಿ ತೋರುವ ವಿವಿಧ ಸಂದರ್ಭದಲ್ಲಿನ ಆಟದ ಖದರ್, ಕ್ರೀಡಾಭಿಮಾನಿಗಳ ಪ್ರತಿಕ್ರಿಯೆ, ಎಐ ತಂತ್ರಜ್ಞಾನ ಆಧರಿಸಿ ನಟರಾದ ಶಿವರಾಜ್ ಕುಮಾರ್, ಸುದೀಪ್ ಹಾಗೂ ಅಗಲಿದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಒಟ್ಟಿಗೆ RCB ಜರ್ಸಿಯಲ್ಲಿ ಹೆಗಲ ಮೇಲೆ ಕೈಹಾಕಿ ನಿಂತು ಕ್ರೀಡಾ ಸ್ಪೂರ್ತಿ ಮೆರೆಯುತ್ತಿರುವ ಇಮೇಜ್ ಗಳನ್ನು ಸಮಯೋಚಿತವಾಗಿ ಬಳಸಿದ್ದಾರೆ.
ಎಚ್ ಎಶ್ ಆರ್ ಲೇಔಟ್ ನಲ್ಲಿನ ಆಸ್ಟ್ರಲ್ ಸ್ಟುಡಿಯೋಸ್ ನಲ್ಲಿ ಈ ಸಾಂಗ್ ನಿರ್ಮಾಣವಾಗಿದ್ದು, ಆನಂದ್ ಪಿಲಿಕ್ಕಟ್, ಫ್ಲಿಂಟ್ ಎಸ್ ಕಾನಿತ್ ಸಂಗೀತ ಸಂಯೋಜನೆ, ಗಿಟಾರ್ ಮತ್ತು ಬಾಸ್ ಅನ್ನು ಮೊಹಮ್ಮದ್ ಉವೈಸ್, ವಿಶ್ಯುವಲ್ ಮಿಶ್ರಣ ಮತ್ತು ಮಾಸ್ಟರಿಂಗ್ ಕಾರ್ಯವನ್ನು ವಿಘ್ನೇಶ್ ಶಂಕರ್ ನಿರ್ವಹಿಸಿದ್ದಾರೆ. ರಾಜ್ಸೋ ಕ್ರಿಯೇಟಿವ್ಸ್ ವಿಡಿಯೋ ಎಡಿಟಿಂಗ್ ಮಾಡಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.