ಬೆಂಗಳೂರು, ಮೇ.01 www.bengaluruwire.com : ಬಿಡಿಎ ವ್ಯಾಪ್ತಿಯಲ್ಲಿ ಸ್ವತ್ತಿನ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿ ತೆರಿಗೆಯನ್ನು ಏ.1ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಕಳೆದ ವರ್ಷದ ಆಸ್ತಿಗೆ ಹೋಲಿಸಿದರೆ ಈ ಬಾರಿಯ ಆಸ್ತಿ ತೆರಿಗೆ ದರದಲ್ಲಿ ಶೇ.20ರಿಂದ 40ರಷ್ಟು ಏರಿಕೆ ಮಾಡಿ ಬಿಡಿಎ ಬಡಾವಣೆಯ ನಾಗರೀಕರಿಗೆ ಆಸ್ತಿ ತೆರಿಗೆ ಏರಿಕೆಯ ಬರೆ ಹಾಕಿದೆ.
ಇದರಿಂದಾಗಿ ಬಿಡಿಎ ನಿರ್ಮಿಸಿದ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಸೇರಿದಂತೆ ಪ್ರಾಧಿಕಾರದ 9 ಲೇಔಟ್, ಬಿಡಿಎ ಅನುಮೋದಿತ ಚಿಕ್ಕಪುಟ್ಟ ಲೇಔಟ್ ಸ್ವತ್ತಿನ ಮಾಲೀಕರು, ಪ್ರಾಧಿಕಾರ ಹಂಚಿಕೆ ಮಾಡಿದ ಅಪಾರ್ಟ್ ಮೆಂಟ್ ವಸತಿ ಘಟಕಗಳು ಸೇರಿ ಒಟ್ಟಾರೆ 1.22 ಲಕ್ಷ ಆಸ್ತಿ ಮಾಲೀಕರಿಗೆ ಪರಿಷ್ಕ್ರತ ಪ್ರಾಪರ್ಟಿ ಟ್ಯಾಕ್ಸ್ ಬಿಸಿ ತಟ್ಟಲಿದೆ. ಈ ಆಸ್ತಿ ತೆರಿಗೆ ಬಗ್ಗೆ ಈಗಾಗಲೇ ಬಿಡಿಎನ ಬನಶಂಕರಿ ಆರನೇ ಹಂತದ ಬಡಾವಣೆ, ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್, ನಾಡಪ್ರಭು ಕೆಂಪೇಗೌಡ ಬಡಾವಣೆ ಸೇರಿದಂತೆ ವಿವಿದ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಆಕ್ರೋಶ ವ್ಯಕ್ತಪಡಿಸಿವೆ.
ಬಿಡಿಎ ಪ್ರಸ್ತುತ ತನ್ನ ವ್ಯಾಪ್ತಿಯ ಸ್ವತ್ತುಗಳಿಂದ ವಾರ್ಷಿಕ 55 ರಿಂದ 60 ಕೋಟಿ ಆಸ್ತಿತೆರಿಗೆ ಸಂಗ್ರಹಿಸುತ್ತಿದೆ. ಹಿಂದಿನ ವರ್ಷಗಳ 40 ಕೋಟಿ ರೂ. ಆಸ್ತಿ ತೆರಿಗೆಯನ್ನು ಸಾವಿರಾರು ಸ್ವತ್ತಿನ ಮಾಲೀಕರು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಸೆಂಟರ್ ಫಾರ್ ಇ-ಗವರ್ನೆನ್ಸ್ ಇಲಾಖೆಗೆ ಪ್ರತಿಯೊಂದು ಸ್ವತ್ತಿನ ಮಾಹಿತಿಯ ಆಸ್ತಿತೆರಿಗೆಯನ್ನು ಲೆಕ್ಕಹಾಕುವ ನಿಟ್ಟಿನಲ್ಲಿ ಸಾಫ್ಟ್ ವೇರ್ ನಲ್ಲಿ ದತ್ತಾಂಶವನ್ನು ಅಪಡೇಟ್ ಮಾಡಿ ಬದಲಾವಣೆ ಮಾಡಲಾಗಿದೆ. ಇದೇ ಏ.28 ರಂದು ಈ ಅಪಡೇಟ್ ಆದ ಮಾಹಿತಿಯನ್ನು ವೆಬ್ ಸೈಟಿನಲ್ಲಿ ಅಪಲೋಡ್ ಮಾಡಿದೆ. 2025-26ನೇ ಅರ್ಥಿಕ ವರ್ಷದಲ್ಲಿ ಏ.1ರಿಂದಲೇ ಸ್ವತ್ತಿ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿತೆರಿಗೆ ನಿರ್ಧಾರವಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಆಸ್ತಿ ತೆರಿಗೆ ಶುಲ್ಕ ಶೇ.9ರಿಂದ 50ರಷ್ಟು ಪರಿಷ್ಕರಣೆ :

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ, ತೆರಿಗೆಗಳನ್ನು 9 ರಿಂದ 50% ಕ್ಕೆ (20/30 ರಿಂದ 5/80) ಪರಿಷ್ಕರಿಸಲಾಗಿದೆ, ಆದರೆ ಇನ್ನೂ ಎಲ್ಲಾ 9 ಬ್ಲಾಕ್‌ಗಳು ವಾಹನ ಓಡಾಡುವಂತಹ ರಸ್ತೆ, ನೀರು ಸರಬರಾಜು, ವಿದ್ಯುತ್ ಮತ್ತು ಯುಜಿಡಿಯಂತಹ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ, ಏಕೆಂದರೆ ಪ್ರಾಧಿಕಾರವು ಭಾಗಶಃ ಕೆಲಸ ಮಾಡಿದೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಓಪನ್ ಫೋರಮ್ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಎಸ್‌ಆರ್ ಮೌಲ್ಯದ ಆಧಾರದ ಮೇಲೆ ತೆರಿಗೆ ಸಂಗ್ರಹಿಸಿದರೆ, ಬಿಡಿಎ ತೆರಿಗೆ ಸಂಗ್ರಹಿಸುವ ಮೂಲಭೂತ ಸೌಲಭ್ಯಗಳನ್ನು ಸಕ್ಷಮ ಪ್ರಾಧಿಕಾರವು ಒದಗಿಸಬೇಕು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲ, ಆದರೆ 8 ವರ್ಷಗಳಿಂದ ತೆರಿಗೆ ಸಂಗ್ರಹಿಸಲಾಗುತ್ತಿದೆ, ಮತ್ತು ಈ ವರ್ಷ, ತೆರಿಗೆಯನ್ನು ಪರಿಷ್ಕರಿಸಲಾಯಿತು, ಇದು ಪ್ರತಿಯೊಬ್ಬ ಸೈಟ್ ಮಾಲೀಕರ ಜೋಬಿಗೆ ಕತ್ತರಿ ಹಾಕಿದೆ” ಎಂದು ಸೂರ್ಯಕಿರಣ್ ಟೀಕಿಸಿದ್ದಾರೆ.
ಇದನ್ನೂ ಓದಿ : Video News | “ಆರ್‌ಸಿಬಿ ನಮ್ಮ ಉಸಿರು” ಕ್ರಿಕೆಟ್ ಪ್ರೇಮಿಗಳ ಅಭಿಮಾನದ- ಕಿಚ್ಚು ಹೆಚ್ಚಿಸುವ ಕ್ರಿಕೆಟ್ ಗೀತೆ ನಿರ್ಮಾಣ
ಬಿಡಿಎ ಆಸ್ತಿ ತೆರಿಗೆ ನಿರ್ಧಾರ ಅವೈಜ್ಞಾನಿಕ :
“ಬಿಡಿಎ ಸ್ವತ್ತುಗಳ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿ ತೆರಿಗೆ ವಿಧಿಸುತ್ತಿರುವುದು ಅವೈಜ್ಞಾನಿಕ. ಏಕೆಂದರೆ ಬಿಡಿಎ ನಿರ್ಮಿಸಿರುವ ಬಡಾವಣೆಗಳಲ್ಲಿ ಇನ್ನೂ ಪೂರ್ಣರೂಪದಲ್ಲಿ ಮೂಲಭೂತ ಸೌಕರ್ಯವನ್ನೇ ಕಲ್ಪಿಸಿಲ್ಲ. ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಜನರ ಮೇಲೆ ತೆರಿಗೆ ಭಾರ ಹಾಕಿ ದೌರ್ಜನ್ಯ ಮಾಡ್ತಿದ್ದಾರೆ. ಯಾವುದಕ್ಕೂ ಜನಸಾಮಾನ್ಯರ ಪ್ರತಿಕ್ರಿಯೆಗೆ ಬೆಲೆ ಕೊಡುತ್ತಿಲ್ಲ. ಈಗಿನ ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ನಾವು ಖಂಡಿಸುತ್ತೇವೆ. ವಿರೋಧ ಪಕ್ಷಗಳು ಬಿಡಿಎ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ದನಿ ಎತ್ತದಿರುವುದು ದುರದೃಷ್ಟಕರ”
– ಡಿ.ಎಸ್.ಗೌಡ, ಅಧ್ಯಕ್ಷರು, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ (1 ರಿಂದ 9ನೇ ಬ್ಲಾಕ್)
ಬಿಎಸ್‌ಕೆ 6ನೇ ಹಂತಕ್ಕೆ 24 ವರ್ಷದಿಂದ ಮೂಲ ಸೌಲಭ್ಯವಿಲ್ಲ :
“ಬಿಎಸ್‌ಕೆ 6ನೇ ಹಂತದ ಬಡಾವಣೆ ರಚನೆಯಾಗಿ 24 ವರ್ಷಗಳಾದರೂ, ಇಲ್ಲಿಯವರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಮತ್ತು ಹಂಚಿಕೆದಾರರಿಂದ ಹೆಚ್ಚುವರಿ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸಿಲ್ಲ. ಈಗ ಬಿಡಿಎ ಎಸ್ ಆರ್ ದರದ ಅನ್ವಯ ಆಸ್ತಿ ತೆರಿಗೆ ಪರಿಷ್ಕರಿಸಿರುವುದು ಸರಿಯಾದ ಕ್ರಮವಲ್ಲ. ನಿವೇಶನದಾರರಿಗೆ ತೆರಿಗೆ ಹೊರೆಯಾಗುತ್ತಿದೆ.”
– ಟಿ.ಎಸ್ ಮಹೇಶ, ಅಧ್ಯಕ್ಷರು, ಬಿಎಸ್‌ಕೆ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ