ನವದೆಹಲಿ, ಏ.30 www.bengaluruwire.com : ಅಮೆರಿಕದಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) “ಆಪರೇಷನ್ ಹಾಕ್” ಕಾರ್ಯಾಚರಣೆ ನಡೆಸಿ, ಅಂತರರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಆನ್‌ಲೈನ್ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಜಾಲಗಳನ್ನು ಯಶಸ್ವಿಯಾಗಿ ಭೇದಿಸಿದೆ.
ಸಿಬಿಐನ ಅಂತಾರಾಷ್ಟ್ರೀಯ ಕಾರ್ಯಾಚರಣೆ ವಿಭಾಗವು ಶೇಖ್ ಮುಯಿಜ್ ಅಹ್ಮದ್ ಎಂಬಾತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66ಡಿ ಮತ್ತು ಪೋಕ್ಸೊ ಕಾಯ್ದೆ 2012 ರ ಸೆಕ್ಷನ್ 12 ಜೊತೆಗೆ 11 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಶೇಖ್ ಮುಯಿಜ್ ಅಹ್ಮದ್ ಮಾಡಿದ ದುಷ್ಕೃತ್ಯವೇನು?:
ಈ ಆರೋಪಿ ಮಾರ್ಚ್ 2024 ರಲ್ಲಿ “ಡಿಸ್ಕಾರ್ಡ್” ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ “heisenberg7343” ಎಂಬ ಬಳಕೆದಾರ ಹೆಸರಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದನು. ಈತ ಅಮೆರಿಕದ ಅಪ್ರಾಪ್ತ ಬಾಲಕಿಯೊಂದಿಗೆ ಆನ್‌ಲೈನ್‌ನಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಚಾಟ್ ಮಾಡಿದ್ದಲ್ಲದೆ, ಆಕೆಯನ್ನು ಲೈಂಗಿಕ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದ್ದನು.

ಇದಲ್ಲದೆ, ಆನ್‌ಲೈನ್‌ನಲ್ಲಿ ಅಶ್ಲೀಲ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಬಾಲಕಿಗೆ ಬೆದರಿಕೆ ಹಾಕಿದ್ದನು. ಪ್ರಕರಣ ದಾಖಲಿಸಿದ ನಂತರ, ಸಿಬಿಐ ಮುಂಬೈ ಮತ್ತು ಮಂಗಳೂರಿನಲ್ಲಿ ಆರೋಪಿಗೆ ಸಂಬಂಧಿಸಿದ ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ.

ಈ ಸಾಧನಗಳಲ್ಲಿ ಬಾಲಕಿಯಿಂದ ಪಡೆದ ಅಪ್ರಾಪ್ತರ ಲೈಂಗಿಕ ದೌರ್ಜನ್ಯದ (CSAM) ವಿಷಯಗಳು ಕಂಡುಬಂದಿವೆ. ಆರೋಪಿ ಶೇಖ್ ಮುಯಿಜ್ ಅಹ್ಮದ್‌ನನ್ನು ಸಿಬಿಐ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದಲ್ಲದೆ, ಸಿಬಿಐ ಇದೇ ರೀತಿಯ ಮತ್ತೊಂದು ಪ್ರಕರಣವನ್ನು ಮುಕುಲ್ ಸೈನಿ ಎಂಬಾತನ ವಿರುದ್ಧ ದಾಖಲಿಸಿದೆ. ಈತ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 67 ಮತ್ತು ಪೋಕ್ಸೊ ಕಾಯ್ದೆ 2012 ರ ಸೆಕ್ಷನ್ 12 ಜೊತೆಗೆ 11 ಮತ್ತು 15 ರ ಅಡಿಯಲ್ಲಿ ಸಿಬಿಐ ಪ್ರಕರಣ.
ಏನಿದು ಪ್ರಕರಣ?:
2023-2024 ರ ಅವಧಿಯಲ್ಲಿ, ದೆಹಲಿಯ ನಿವಾಸಿಯಾದ ಮುಕುಲ್ ಸೈನಿಯು “ಡಿಸ್ಕಾರ್ಡ್” ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ “Izumi#9412”, “Izumi#7070”, “Deadddd#6873” ಮತ್ತು “Arisu” ಎಂಬ ಐಡಿಗಳ ಮೂಲಕ ಅಮೆರಿಕದ ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ವಿಷಯಗಳ ಬಗ್ಗೆ ಚಾಟ್ ಮಾಡಿದ್ದನು. ಅಲ್ಲದೆ, ಆಕೆಯನ್ನು ಲೈಂಗಿಕ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದ್ದನು. ಒಂದು ವೇಳೆ ಆಕೆ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದರೆ ಅವುಗಳನ್ನು ಅಂತರ್ಜಾಲದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನು.
ಈತನ ವಿರುದ್ಧ ಪ್ರಕರಣ ದಾಖಲಿಸಿದ ನಂತರ, ಸಿಬಿಐ ದೆಹಲಿಯಲ್ಲಿ ಆರೋಪಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿ ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.
ಸಿಬಿಐ ಆನ್‌ಲೈನ್ ಬಾಲ ಲೈಂಗಿಕ ದೌರ್ಜನ್ಯದ ಪಿಡುಗನ್ನು ತಡೆಗಟ್ಟಲು ಮತ್ತು ಜಾಗತಿಕವಾಗಿ ಮಕ್ಕಳ ರಕ್ಷಣೆಯನ್ನು ಈ ಹಿಂದೆಯೂ, ಸಿಬಿಐ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಆನ್‌ಲೈನ್ ಬಾಲ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ತ್ವರಿತವಾಗಿ ಸ್ಪಂದಿಸಲು 202 1 ಇಸವಿಯಲ್ಲಿ “ಆಪರೇಷನ್ ಕಾರ್ಬನ್” ಹಾಗೂ 2022 ಇಸವಿಯಲ್ಲಿ “ಆಪರೇಷನ್ ಮೇಘ ಚಕ್ರ” ಕಾರ್ಯಾಚರಣೆ ನಡೆಸಿತ್ತು.