ಬೆಂಗಳೂರು, ಏ.29 www.bengaluruwire.com : ರಾಜ್ಯ ಸರ್ಕಾರವು ಸೋಮವಾರ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಿದೆ. ತುಷಾರ್ ಗಿರಿನಾಥ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಅವರು ಎಸ್.ಆರ್. ಉಮಾಶಂಕರ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಅದೇ ರೀತಿ, ಮಹೇಶ್ವರ್ ರಾವ್ ಅವರನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL – ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಜೊತೆಗೆ ಬಿಬಿಎಂಪಿ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ಹುದ್ದೆಯ ಜೊತೆಗೆ ಗೃಹ ಇಲಾಖೆಯ ಎಸಿಎಸ್ ಹುದ್ದೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಈ ಬದಲಾವಣೆಯು ಏ.28 ರಿಂದ ಜಾರಿಗೆ ಬಂದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.
ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ಆಯುಕ್ತರಾಗಿ ಸುಮಾರು 2.5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1993ರ ಬ್ಯಾಚ್ ಐಎಎಸ್ ಅಧಿಕಾಎಇಯಾಗಿರುವ ಅವರು, ಬೆಂಗಳೂರು ನಗರದ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಪಾಲಿಕೆಯಲ್ಲಿ ಸೇವೆ ಸಲ್ಲಿಸಿರುವ ಅವಧಿಯಲ್ಲಿ ಪ್ರಮುಖವಾಗಿ ನಗರದಲ್ಲಿ ಸ್ವತ್ತುಗಳ ಡಿಜಿಟಲೀಕರಣ, ಇ-ಖಾತಾ ಯೋಜನೆ ಜಾರಿಗೆ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 ಯಶಸ್ವಿಯಾಗಿ ರಾಜ್ಯ ಸರ್ಕಾರದಿಂದ ಅನುಮೋದನೆಯಾಗಿದ್ದು, ನಗರದ ಜನತೆಗೆ ಮನೆ ಕಟ್ಟಲು ನಂಬಿಕೆ ನಕ್ಷೆ ಯೋಜನೆ ಜಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಗೆ ಸೂಕ್ತ ರೂಪುರೇಷೆ ನೀಡಿಕೆ ಸೇರಿದಂತೆ ಹಲವು ಕೊಡುಗೆಗಳನ್ನು ರಾಜಧಾನಿಗೆ ನೀಡಿದ್ದಾರೆ.

ಅವರು ಈ ಹಿಂದೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ನಗರದ ಮೂಲಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಮತ್ತು ನಾಗರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ.

ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ (BCAP) ಯಲ್ಲಿ ಇವರ ಕಾರ್ಯವೈಖರಿ ಬಹಳ ಮಹತ್ವದ್ದಾಗಿತ್ತು. ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಇವರು ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದ ಆಡಳಿತ ಬಿಗಿಮುಷ್ಠಿಯಲ್ಲಿ ದೈನಂದಿನ ಆಡಳಿತದಲ್ಲಿ ಸುಲಭ ನಿರ್ಧಾರ ಕೈಗೊಳ್ಳಲೂ ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದ್ದರು ಎನ್ನಲಾಗಿದೆ.
ಇನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆ ಸೃಷ್ಟಿಯಾದ ಮೇಲೆ ಮೂರನೇ ಅಧಿಕಾರಿಯಾಗಿ ಮಹೇಶ್ವರ್ ರಾವ್ ನೇಮಕವಾಗಿದ್ದಾರೆ. 1995 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮಹೇಶ್ವರ್ ರಾವ್ ಅವರಿಗೆ ಬಿಬಿಎಂಪಿ ಹೊಸತಲ್ಲ. ಈ ಹಿಂದೆ ಕೆಲವು ಕಾಲ ಪಾಲಿಕೆಯ ಆಯುಕ್ತರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಈ ಹಿಂದೆ ಕೈಗಾರಿಕಾ ಅಭಿವೃದ್ಧಿ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರು ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದಲ್ಲದೆ ಮಂಡ್ಯ, ಮಂಗಳೂರು, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳ ಡೆಪ್ಯುಟಿ ಕಮಿಷನರ್ ಆಗಿ ಸಹ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಸ್ತುತ ಮೆಟ್ರೋ ರೈಲು ಯೋಜನೆ ಕಾರ್ಯ ಬಹಳ ವೇಗವಾಗಿ ನಡೆಯುತ್ತಿದ್ದು, ಮೆಟ್ರೋ ಅಭಿವೃದ್ದಿಯಲ್ಲಿ ಇವರ ಪಾತ್ರ ಬಹಳ ಮಹತ್ವದ್ದಾಗಿದೆ.