ಪಹಲ್ಗಾಮ್(ಜಮ್ಮು ಮತ್ತು ಕಾಶ್ಮೀರ) ಏ.22 www.bengaluruwire.com : ಇಂದು ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಾವಿನ ಸಂಖ್ಯೆಯನ್ನು ಇನ್ನೂ ಖಚಿತಪಡಿಸಲಾಗುತ್ತಿದೆ ಮತ್ತು ನಂತರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಹೇಳಿದರು. “ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಾವು ನೋಡಿದ ಯಾವುದೇ ದಾಳಿಗಿಂತ ಈ ದಾಳಿ ತುಂಬಾ ದೊಡ್ಡದಾಗಿದೆ” ಎಂದು ಅವರು ಎಕ್ಸ್ ನಲ್ಲಿ ಹೇಳಿದರು.
ಆವರ ಈ ಹೇಳಿಕೆಯನ್ನು ಗಮನಸಿದರೆ ಪರಿಸ್ಥಿತಿ ಸಾಕಷ್ಟು ಗಂಭೀರವಾಗಿರುವುದನ್ನು ಸೂಚಿಸುತ್ತದೆ.
ಜಮ್ಮು ಮತ್ತು ಕಾಶ್ಮೀರದ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ನಡೆಸುವಾಗ ಯಾವ ಧರ್ಮ ಅಂತ ಕೇಳಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದೇಶದ ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.


ಈ ಗುಂಡಿನ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಸೇರಿದಂತೆ ಹಲವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ದುಷ್ಕೃತ್ಯದಲ್ಲಿ ಕನಿಷ್ಠ 25 ಜನ ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳಾಂತರಿಸಲು ಆಯಂಬುಲೆನ್ಸ್ ಗಳನ್ನು ರವಾನಿಸಲಾಗಿದೆ. ಉಗ್ರರಿಂದ ದಾಳಿಯಾಗುತ್ತಿದ್ದಂತೆ ಭಾರತೀಯ ಸೇನೆ ಪ್ರದೇಶವನ್ನು ಸುತ್ತುವರೆದಿದ್ದು ಕಾರ್ಯಾಚರಣೆ ಕೈಗೊಂಡಿತು.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಘೋರ ಕೃತ್ಯದ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಶತಃಸಿದ್ದ ಎಂದು ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಘಟನೆಯನ್ನು ಟೀಕಿಸಿದ್ದಾರೆ.
ಉಗ್ರಗಾಮಿಗಳ ಈ ದಾಳಿಯ ನಂತರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು ಮತ್ತು ಈ ಭೀಕರ ಘಟನೆಗೆ ಪ್ರತಿಕ್ರಿಯೆಯಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರಿಗೆ ನಿರ್ದೇಶನ ನೀಡಿದರು. ಎಲ್ಲಾ ಭದ್ರತಾ ಏಜೆನ್ಸಿಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಲು ಶಾ ಶ್ರೀನಗರಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಅನಂತ್‌ನಾಗ್ ಪೊಲೀಸರು ಪ್ರವಾಸಿಗರಿಗಾಗಿ ತುರ್ತು ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಸಹಾಯ ಅಥವಾ ಮಾಹಿತಿ ಅಗತ್ಯವಿರುವ ಪ್ರವಾಸಿಗರಿಗೆ ಸಹಾಯ ಮಾಡಲು ಅನಂತನಾಗ್ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಮೀಸಲಾದ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸಂಪರ್ಕ ವಿವರಗಳು:
9596777669
01932225870
ವಾಟ್ಸಾಪ್: 9419051940