ಬೆಂಗಳೂರು, ಏ.20 www.bengaluruwire.com : ವಿಶ್ವಸಂಸ್ಥೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯ ತುರ್ತು ಪರಿಸ್ಥಿತಿ ಇದೆ ಎಂದು ಎಚ್ಚರಿಕೆ ನೀಡಿದೆ. ಇದರ ಪರಿಣಾಮಗಳು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಾಣಿಗಳು ಮತ್ತು ಪರಿಸರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಮೊಟ್ಟೆ ಇಟ್ಟು ಮರಿ ಹಾಕುವ ಹಾವುಗಳು ಈ ವರ್ಷ ಬೇಗನೆ ಇಡುತ್ತಿರುವುದು ಕಂಡುಬಂದಿದೆ.
ಮೇ ತಿಂಗಳ ಕೊನೆಯಿಂದ ಜೂನ್ 15 ರ ತನಕ ತೋಳದ ಹಾವು, ನೀರು ಹಾವು, ಆಭರಣದ ಹಾವು, ಕೆರೆ ಹಾವು ಮರಿ ಹಾಕುತ್ತವೆ. ಆಮೇಲೆ ಜೂ.15ರ ನಂತರ ನಾಗರಹಾವು, ಕೊಳಕುಮಂಡಲ (Russle wiper) ಹಾಗೂ ಇತರ ಹಾವುಗಳು ಮರಿ ಹಾಕುತ್ತವೆ. ಕುಕ್ರಿ ಹಾವು ಸಾಮಾನ್ಯವಾಗಿ ಜೂನ್ ಜುಲೈನಲ್ಲಿ ಮರಿ ಹಾಕುತ್ತವೆ.
ಸಾಮಾನ್ಯವಾಗಿ, ಜೂನ್ ತಿಂಗಳಲ್ಲಿ ಮಳೆಗಾಲದ ಆರಂಭದೊಂದಿಗೆ ಹಸಿರು ಹುಲ್ಲು ಬೆಳೆದು ನಿಲ್ಲುತ್ತದೆ. ಕಪ್ಪೆ ಮರಿಗಳು, ಮಿಡತೆಗಳು ಮುಂತಾದ ಕೀಟಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದು ಹುಟ್ಟಿದ ಹಾವು ಮರಿಗಳಿಗೆ ಆಹಾರದ ಮೂಲವಾಗುತ್ತದೆ. ಅಲ್ಲದೆ, ದಟ್ಟವಾದ ಹಸಿರು ಹೊದಿಕೆಯು ಹಾವುಗಳಿಗೆ ಬಚ್ಚಿಟ್ಟುಕೊಳ್ಳಲು ಮತ್ತು ತಮ್ಮ ಶತ್ರುಗಳಿಂದ ರಕ್ಷಿಸಿಕೊಳ್ಳಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ.

ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಜನವರಿ ತಿಂಗಳಲ್ಲೇ ಬ್ಯಾಂಡೆಡ್ ಕುಕ್ರಿ ಹಾವು ಮರಿಯೊಂದು ಕಾಣಿಸಿಕೊಂಡಿದ್ದು ಆಶ್ಚರ್ಯ ಮೂಡಿಸಿತ್ತು. ಇದರ ಬೆನ್ನಲ್ಲೇ, ಏಪ್ರಿಲ್ 19 ರಂದು ಕೊಳಕುಮಂಡಲದಂತಹ ವಿಷಕಾರಿ ಹಾವು ಮರಿಯೊಂದು ಕಾಣಿಸಿಕೊಂಡಿರುವುದು ಪರಿಸರ ತಜ್ಞರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಇಷ್ಟು ಬೇಗ ಹಾವು ಮರಿಗಳು ಹೊರಗೆ ಬಂದರೆ, ಅವುಗಳಿಗೆ ಸೂಕ್ತವಾದ ಆಹಾರ ಸಿಗದೆ ಸಾಯುವ ಸಾಧ್ಯತೆ ಇದೆ. ಒಣ ಹವೆ ಮತ್ತು ಆಹಾರದ ಕೊರತೆಯಿಂದಾಗಿ ಅವುಗಳ ಬದುಕುಳಿಯುವಿಕೆ ಕಷ್ಟಕರವಾಗಬಹುದು. ಮತ್ತೊಂದು ಕಡೆ, ಈ ಚಿಕ್ಕ ಹಾವು ಮರಿಗಳು ಸಹ ಮನುಷ್ಯರನ್ನು ಸಾಯಿಸುವಷ್ಟು ವಿಷವನ್ನು ಹೊಂದಿರುತ್ತವೆ. ಹೀಗಾಗಿ, ಸಾರ್ವಜನಿಕರು ಹಾವು ಮರಿಗಳು ಕಂಡುಬಂದಲ್ಲಿ ಕನಿಷ್ಠ ಐದರಿಂದ ಹತ್ತು ಅಡಿಗಳಷ್ಟು ದೂರವಿರುವುದು ಸುರಕ್ಷಿತ. ತಕ್ಷಣವೇ ವನ್ಯಜೀವಿ ರಕ್ಷಣಾ ತಂಡವನ್ನು ಸಂಪರ್ಕಿಸಿ ಅವುಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗುವುದು ಸೂಕ್ತ ಎಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ.
ಹವಾಮಾನ ಬದಲಾವಣೆಯ ಈ ರೀತಿಯ ಪರಿಣಾಮಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಬೆಂಗಳೂರಿನ ಹವಾಮಾನ ಬದಲಾವಣೆಗೆ ಮತ್ತೊಂದು ಸಾಕ್ಷಿ :
ಈ ಬಾರಿ ಜನವರಿಯಲ್ಲಿ ಕೊಮ್ಮಘಟ್ಟದಲ್ಲಿ ಬ್ಯಾಂಡೆಡ್ ಕುಕ್ರಿ ಮರಿ ಸಿಕ್ಕಿದೆ. ಸಾಮಾನ್ಯವಾಗಿ ಈ ಸಂದರ್ಭ ಹೆಣ್ಣು-ಗಂಡು ಹಾವುಗಳು ಸೇರುವ ಸಮಯ. ಆದರೆ ಈ ಬಾರಿ ಜೂನ್-ಜುಲೈನಲ್ಲಿ ಮರಿ ಹಾಕುವುದು, ಜನವರಿಯಲ್ಲಿ ಮರಿ ಹಾಕಿದೆ. ಅದೇ ರೀತಿ ಕೋಣನಕುಂಟೆಯಲ್ಲಿ ಆಭರಣದ ಹಾವು ಮರಿ ಆಗ ಸಿಕ್ಕಿತ್ತು. ಇಂದು ನಾಗರಬಾವಿ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ನಾಲ್ಕು ಕೊಳಕುಮಂಡಲ ಹಾವು ಸಿಕ್ಕಿದೆ. ಈ ರೀತಿ ಹಾವು ಅಕಾಲದಲ್ಲಿ ಮರಿ ಹಾಕಿದ್ರೆ ಹಾವು ಮರಿಗಳು ಬದುಕುಳಿಯಲ್ಲ. ಇದು ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಗೆ ಮತ್ತೊಂದು ಸಾಕ್ಷಿಯಾಗಿದೆ.
– ಪ್ರಸನ್ನ ಕುಮಾರ್, ಬೆಂಗಳೂರು ಪ್ರಾಣಿ ಕಲ್ಯಾಣ ಪರಿಪಾಲಕ