ಬೆಂಗಳೂರು: ಏ.20 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಏಪ್ರಿಲ್ 21 ರಿಂದ 30ರವರೆಗೆ ಬೃಹತ್ ಪ್ರಮಾಣದ ಸ್ವಚ್ಛತಾ ಅಭಿಯಾನ (A large-scale cleaning campaign)ವನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಮಳೆಗಾಲ (Rainy season)ದ ಮುಂಚಿತವಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ(BSWML -ಬಿಎಸ್‌ಡಬ್ಲ್ಯೂಎಂಎಲ್) ವತಿಯಿಂದ 10 ದಿನಗಳ ಕಾಲ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್ ಗಳಲ್ಲಿ ನಗರದಾದ್ಯಂತ ಬೃಹತ್ ಪ್ರಮಾಣದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮುಖ್ಯ ಕಾರ್ಯಾಚರಣಾಧಿಕಾರಿಯಾದ ರಮಾಮಣಿ ಅವರು ತಿಳಿಸಿದ್ದಾರೆ.
ನಾಗರಿಕರು ಸಾರ್ವಜನಿಕ ಸ್ಥಳಗಳಾದ ರಸ್ತೆ ಬದಿ, ಪಾದಚಾರಿ ಮಾರ್ಗಗಳು, ಖಾಲಿ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದರಿಂದ ನಗರದ ಸೌಂದರ್ಯಕ್ಕೆ ತೊಂದರೆಯಾಗುವುದರ ಜೊತೆಗೆ ಪರಿಸರ ಕೂಡಾ ಹಾಳಾಗಲಿದೆ. ಈ ಸಂಬಂಧ ನಗರದಾದ್ಯಂತ ತ್ಯಾಜ್ಯ ಬಿಸಾಡುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಎಲ್ಲಾ ಸ್ಥಳಗಳನ್ನು ಒಂದು ಬಾರಿಗೆ ಸ್ವಚ್ಛತೆಗೊಳಿಸಲು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಿಬಿಎಂಪಿ, ಬಿಎಸ್‌ಡಬ್ಲ್ಯೂಎಂಎಲ್ ಸಾರ್ವಜನಿಕರು, ಸರ್ಕಾರೇತರ ಸಂಘ ಸಂಸ್ಥೆಗಳು, ನಿವಾಸಿ ಕಲ್ಯಾಣ ಸಂಘಗಳು, ಅಪಾರ್ಟಮೆಂಟ್ ಮಾಲಿಕರ ಸಂಘಗಳು, ಸ್ವಯಂ ಸೇವಕ ಗುಂಪುಗಳ ಸಹಭಾಗಿತ್ವದೊಂದಿಗೆ ನಗರದಾದ್ಯಂತ ರಸ್ತೆ, ಪಾದಾಚಾರಿ ಮಾರ್ಗ, ರಸ್ತೆಗಳ ಮೀಡಿಯನ್ಸ್ ಮತ್ತು ಸಾರ್ವಜನಿಕ ಸ್ಥಳಗಳನ್ನು 10 ದಿನಗಳಲ್ಲಿ ಸ್ವಚ್ಛಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದರ ಜೊತೆಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವ ಉದ್ದಿಮೆ/ಮಳಿಗೆಗಳ ಮೇಲೆ ದಾಳಿ ನಡೆಸಿ, ಏಕ ಬಳಕೆ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು.

ಕಟ್ಟಡ ಭಗ್ನಾವಶೇಷಗಳ ತೆರವು:

ನಗರದಲ್ಲಿ ಕಟ್ಟಡ ಭಗ್ನಾವಶೇಷಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು. ಖಾಲಿ ಜಾಗದಲ್ಲಿ ಸುರಿದಿರುವ ಕಟ್ಟಡ ಭಗ್ನಾವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಕ್ರಮವಹಿಸಲಾಗುವುದು.
ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಂತೆ ನಾಗರಿಕರಲ್ಲಿ ಅರಿವು ಮೂಡಿಸುವ ಕುರಿತು ಎಲ್ಲಾ 8 ವಲಯಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ರಮಾಮಣಿಯವರು ಹೇಳಿದ್ದಾರೆ.