ಬೆಂಗಳೂರು, ಏ.19 www.bengaluruwire.com : ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ತೆಗಿಸಿದ ಘಟನೆ ಖಂಡನಾರ್ಹ. ಬ್ರಾಹ್ಮಣ ಸಮುದಾಯದ ಮೇಲೆ ವೃತಾ ನಿಂದನೆ, ಹೀಯಾಳಿಸುವುದು ಹಾಗೂ ಅಪಮಾನ ಮಾಡುವುವನ್ನು(AKBMS) ಸಹಿಸುವುದಿಲ್ಲ. ಇಂತಹ ಘಟನೆಗಳ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗುಡುಗಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಹಾಸಭಾದಿಂದ ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ನೂತನ ಅಧ್ಯಕ್ಷ ಎಸ್.ರಘುನಾಥ್ ಅವರು, ಜನಿವಾರ ಕಿತ್ತು ಹಾಕಿರುವುದರಿಂದ ಬ್ರಾಹ್ಮಣ ಸಮುದಾಯವು ರಾಜ್ಯಾದ್ಯಂತ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಪ್ರತಿಭಟನೆಯಾಗುತ್ತಿದೆ. ವಿಪ್ರ ಸಮುದಾಯದಕ್ಕೆ ಆಗಿರುವ ನೋವು, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಹಾಸಭಾದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುತ್ತದೆ.
ಬ್ರಾಹ್ಮಣ ಸಮಾಜವನ್ನು ಹೀಯಾಳಿಸುವುದು, ನಿಂದಿಸುವುದು, ಅಪಹಾಸ್ಯಕ್ಕೆ ಒಳಪಡಿಸುವುದು ಮತ್ತು ಬ್ರಾಹ್ಮಣರ ಮೇಲೆ ದೌರ್ಜನ್ಯ ವೆಸುಗುವುದು ಸಾಮಾನ್ಯವಾಗಿದೆ. ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದಾರೆ. ಇಂತಹ ಕಹಿ ಘಟನೆಗಳು ಮರುಕಳಿಸಿದರೆ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಎಸ್.ರಘುನಾಥ್ ಎಚ್ಚರಿಕೆ ನೀಡಿದ್ದಾರೆ.
ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕಿತ್ತುಹಾಕಿದ ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ. ಶಿಕ್ಷಣ ಸಚಿವರು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ ಮತ್ತು ಸಿ.ಇ.ಟಿ.ಪ್ರಾಧಿಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿರುವುದು ಸಮಾಧಾನಕರ ಸಂಗತಿ.

ಸಿ.ಇ.ಟಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬ್ರಾಹ್ಮಣ ವಿದ್ಯಾರ್ಥಿಗೆ ಶಿಕ್ಷಣಕ್ಕೆ ಬೇಕಾದ ಆರ್ಥಿಕ ಸಹಾಯ ಮಹಾಸಭಾದಿಂದ ನೀಡಲಾಗುವುದು. ಆತ ನಮ್ಮ ಸಂಪ್ರದಾಯ, ಸಂಸ್ಕೃತಿ ಎತ್ತಿಹಿಡಿದಿದ್ದಾನೆ ಎಂದು ಅವರು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು ಮಾತನಾಡಿ, ಯಾರು ಏನು ಬೇಕಾದರು ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಮಾಡಬಹುದು ಎಂದು ತಿಳಿದಿದ್ದಾರೆ. ಜನಿವಾರ ವಿವಾದ ಇಡೀ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಪರೀಕ್ಷೆ ಬರೆಯಲು ಲಕ್ಷಾಂತರ ವಿದ್ಯಾರ್ಥಿಗಳು ಬರುತ್ತಾರೆ, ಅದರಲ್ಲಿ ಬ್ರಾಹ್ಮಣ ವಿದ್ಯಾರ್ಥಿಗೆ ಈ ಪರೀಕ್ಷೆ ಮಾಡಬೇಕು ಎಂದರೆ ಇದೊಂದು ಪೂರ್ವನಿಯೋಜಿತ ಸಂಚು ಎಂದು ತೋರುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಂವಿಧಾನದಲ್ಲಿ ಬ್ರಾಹ್ಮಣರಿಗೆ ಬದುಕಲು ಅವಕಾಶ ನೀಡಿದೆ. ಸರ್ಕಾರ ಇಂತಹ ಘಟನೆಗಳ ವಿರುದ್ದ ತತಕ್ಷಣ ಕ್ರಮ ಕೈಗೊಳ್ಳಬೇಕು. ಹೋಂ ಗಾರ್ಡ್ ಮೇಲಧಿಕಾರಿಗಳ ಕೆಲಸದ ಆದೇಶ ಪಾಲಿಸುತ್ತಾನೆ. ಅವನನ್ನು ಬಲಿಪಶು ಮಾಡುವ ಬದಲು ಅಧಿಕಾರಿಗಳ ತಲೆದಂಡವಾಗಬೇಕು. ಇದಲ್ಲದೆ ಇತ್ತೀಚೆಗೆ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ರವರು ಬ್ರಾಹ್ಮಣರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಮಹಾಸಭಾ ಖಂಡನೆ ವ್ಯಕ್ತಪಡಿಸುತ್ತದೆ. ಅವರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.
ವಿಪ್ರ ಮುಖಂಡರುಗಳಾದ ರವಿಶಂಕರ, ಶಂಕರನಾರಾಯಣ್ ಶಾಸ್ತ್ರಿ, ಶ್ರೀನಿವಾಸಮೂರ್ತಿ ಜೋಯಿಸ್, ಜಿಲ್ಲಾ ಪ್ರತಿನಿಧಿಗಳಾದ ಜಿ.ಎಸ್.ನಾಗೇಶ್, ಸತೀಶ್ ಉರಾಳ್, ಕೆ.ಎನ್.ರವಿಕುಮಾರ್, ಅಂಬಿಕಾ ರಾಮಚಂದ್ರ, ಮಂಜುನಾಥ್ ವಿಪ್ರ ಮುಖಂಡರುಗಳು ಉಪಸ್ಥಿತರಿದ್ದರು.