ಬೆಂಗಳೂರು, ಏ.17 www.bengaluruwire.com : ವರ್ತೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ವರ್ತೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ 1.92 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವರ್ತೂರು ಕೆರೆ ಕೋಡಿಯಿಂದ ವಿನಾಯಕ ಥಿಯೇಟರ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಈ 452 ಕೋಟಿ ರೂ. ವೆಚ್ಚದ ಯೋಜನೆಯನ್ನು ಕೂಡಲೇ ರದ್ದುಪಡಿಸುವಂತೆ ಗ್ರಾಮಸ್ಥರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ. 2016-17ರಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರೂ, ಸ್ಥಳೀಯರ ತೀವ್ರ ಪ್ರತಿರೋಧದಿಂದಾಗಿ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೂ, ಕೆಆರ್‌ಡಿಸಿಎಲ್ ಯೋಜನೆಯನ್ನು ಕೈಬಿಡದೆ ಮುಂದುವರಿಸಲು ಪ್ರಯತ್ನಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರ್ತೂರು ನಾಗರಿಕರ ಹಿತರಕ್ಷಣಾ ವೇದಿಕೆಯು ಎಲಿವೇಟೆಡ್ ಕಾರಿಡಾರ್ ಯೋಜನೆಯಿಂದಾಗುವ ತೊಂದರೆಗಳ ಬಗ್ಗೆ ವಿವರಿಸಿತು. ಈ ಯೋಜನೆಯಿಂದ ಸೊರಹುಣಸಿ, ವಾಲೇಪುರ, ಮುತ್ತಂದ್ರ, ಹಲಸಹಳ್ಳಿ ಸೇರಿದಂತೆ ಐದಾರು ಗ್ರಾಮಗಳಿಗೆ ತೊಂದರೆಯಾಗಲಿದೆ ಎಂದು ವೇದಿಕೆಯ ಸದಸ್ಯರು ಗಮನಸೆಳೆದರು. ಅಲ್ಲದೆ, ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಯೋಜನೆ ರೂಪಿಸಲು ಯತ್ನಿಸುತ್ತಿರುವುದರ ಬಗ್ಗೆಯೂ ಮುಖ್ಯ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿಕೊಡಲಾಯಿತು.
ಯೋಜನೆಯಿಂದ ಪರಿಸರ ನಾಶ ಆತಂಕ :

ಎಲಿವೇಟೆಡ್ ಕಾರಿಡಾರ್ ಯೋಜನೆಯು ಪರಿಸರವನ್ನು ನಾಶಪಡಿಸುವ ಯೋಜನೆಯಾಗಿದ್ದು, ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಯಾವುದೇ ಮೂಲಸೌಕರ್ಯ ಯೋಜನೆಯನ್ನು ಪ್ರಾರಂಭಿಸುವ ಮೊದಲು ಸ್ಥಳೀಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಪರ್ಯಾಯ ಪರಿಹಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ನಗರ ಭೂ ಸಾರಿಗೆ ನಿರ್ದೇಶನಾಲಯದಂತಹ ಸಮರ್ಥ ಸಂಸ್ಥೆಗಳಿಂದ ಅಧ್ಯಯನ ನಡೆಸಬೇಕು. ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಮೆಟ್ರೋ ಮತ್ತು ಉಪನಗರ ರೈಲು ಯೋಜನೆಗಳಂತಹ ಸಮೂಹ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು. ಗ್ರಾಮದ ಪರಿಸರ ಮತ್ತು ಪರಂಪರೆಗೆ ಧಕ್ಕೆಯಾಗದಂತೆ ಯೋಜನೆಗಳನ್ನು ರೂಪಿಸಬೇಕು ಮತ್ತು ಯಾವುದೇ ಯೋಜನೆಯ ಡಿಪಿಆರ್ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಕಾನೂನು ನಿಯಮ ಉಲ್ಲಂಘನೆ ಆರೋಪ :
ಈ ಯೋಜನೆಯು ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ಆಕ್ಟ್-1961 ಮತ್ತು ಪರಿಸರ ಸಂರಕ್ಷಣೆ ಕಾಯಿದೆ-1986 ರ ಉಲ್ಲಂಘನೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಧಿಕಾರಿಗಳು ಸಾಂವಿಧಾನಿಕ ಆದೇಶಗಳು ಮತ್ತು ನಗರ ಯೋಜನೆ ಮಾನದಂಡಗಳನ್ನು ಅನುಸರಿಸದೆ ಹಾಗೂ ಕಾನೂನು ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೌಲ್ಯಮಾಪನವಿಲ್ಲದೆ ಭೂಸ್ವಾಧೀನಕ್ಕೆ ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಸ್ಥಳೀಯರೊಂದಿಗೆ ಹಂಚಿಕೊಂಡಿಲ್ಲ. ಈ ಯೋಜನೆಗಾಗಿ ಸಾಕಷ್ಟು ಮರಗಳನ್ನು ಕಡಿಯುವುದರಿಂದ ನಗರದ ಹಸಿರು ಹೊದಿಕೆಯೂ ಕಡಿಮೆಯಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಅಗಲೀಕರಣ ಯೋಜನೆ ಎಲಿವೇಟೆಡ್ ಕಾರಿಡಾರ್ ಆಗಿ ಬದಲು :
2016-17 ರಲ್ಲಿ ಮೊದಲು 40 ಅಡಿ ರಸ್ತೆ ಅಗಲೀಕರಣಕ್ಕೆ ಯೋಜಿಸಲಾಗಿತ್ತು. ನಂತರ ಟ್ರಾಫಿಕ್ ಸಮಸ್ಯೆಯ ನೆಪವೊಡ್ಡಿ, 60 ಅಡಿ ರಸ್ತೆ ಅಗಲೀಕರಣ ಯೋಜನೆಯನ್ನು ಎಲಿವೇಟೆಡ್ ಕಾರಿಡಾರ್ ಯೋಜನೆಯಾಗಿ ಪರಿವರ್ತಿಸಲಾಯಿತು. ರಸ್ತೆ ಅಗಲೀಕರಣಕ್ಕೆ ಒಪ್ಪಿದ್ದ ಸ್ಥಳೀಯರು, ಎಲಿವೇಟೆಡ್ ಕಾರಿಡಾರ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು ಮತ್ತು ಸಹಿ ಸಂಗ್ರಹ ಅಭಿಯಾನವನ್ನು ಸಹ ನಡೆಸಿದರು. ಆದರೂ, ಸರ್ಕಾರವು ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಾ ಅದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಸ್ ಸಕಾರಾತ್ಮಕ ಸ್ಪಂದನೆ :
ವರ್ತೂರು ನಾಗರಿಕರ ಹಿತರಕ್ಷಣಾ ವೇದಿಕೆಯ ಜಗದೀಶ್ ರೆಡ್ಡಿ ಅವರು ಮಾತನಾಡಿ, “ವರ್ತೂರು ಕೆರೆಯ ಬಫರ್ ವಲಯ ಸೇರಿದಂತೆ ಅನೇಕ ಪರಿಸರ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಿ ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿಗೊಳಿಸಲು ಕೆಆರ್‌ಡಿಸಿಎಲ್ ಪ್ರಯತ್ನಿಸುತ್ತಿದೆ. ರಸ್ತೆ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ಇಲ್ಲಿ ಎಲಿವೇಟೆಡ್ ಕಾರಿಡಾರ್ ಅಗತ್ಯವಿಲ್ಲ. ಈ ವಿಷಯಗಳನ್ನು ಮುಖ್ಯ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು, ಅವರು ಈ ಬಗ್ಗೆ ಪುನರ್ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಗ್ರಾಮಸ್ಥರ ವಿರೋಧಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದು ಅವರು ತಿಳಿಸಿದರು.