ಬೆಂಗಳೂರು, ಏ.17 www.bengaluruwire.com : ಕಟ್ಟಡ ನಿಯಮಾವಳಿ ಉಲ್ಲಂಘಿಸಿ ಕಟ್ಟುವ ನಗರದ ಸಾವಿರಾರು ಆಸ್ತಿ ಮಾಲೀಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP – ಬಿಬಿಎಂಪಿ) 2003ರ ಕಟ್ಟಡ ಉಪವಿಧಿಯಲ್ಲಿ ನಿಗಧಿಪಡಿಸಿರುವ ಕಟ್ಟಡ ನಿರ್ಮಾಣ ಸಮಯದಲ್ಲಿನ ಉಲ್ಲಂಘನೆ ಮಿತಿಯನ್ನು ಪ್ರಸ್ತುತ ಶೇ.5 ರಿಂದ 15% ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯಿಂದ ಪಾಲಿಕೆಯ ಈ ಪ್ರಸ್ತಾವನೆಗೆ ಒಪ್ಪಿಗೆಯನ್ನು ಪಡೆದರೆ, ಹೆಚ್ಚಿನ ಆಸ್ತಿ ಮಾಲೀಕರು ಆಕ್ಯುಪೆನ್ಸಿ ಪ್ರಮಾಣಪತ್ರಗಳಿಗೆ (OC) ಅರ್ಹರಾಗುತ್ತಾರೆ. 2024ರ ಡಿ.17ರಂದು ಸುಪ್ರೀಂಕೋರ್ಟ್ ಸ್ವಾಧೀನಪತ್ರ ಇಲ್ಲದ ಕಟ್ಟಡಗಳಿಗೆ ವಿದ್ಯುತ್, ನೀರು ಹಾಗೂ ಒಳಚರಂಡಿಯಂತಹ ಸಂಪರ್ಕಗಳನ್ನು ನೀಡುವಂತಿಲ್ಲ ಎಂದು ಆದೇಶಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಕ್ರಮ ಸಂಖ್ಯೆ: 21ರ (iv) ರಲ್ಲಿ ಈ ಕೆಳಕಂಡಂತೆ ಆದೇಶಿಸಲಾಗಿರುತ್ತದೆ.
“All the necessary service connections, such as, Electricity, water supply, sewerage connection, etc., shall be given by the service provider/ Board to the buildings only after the production of the completion/occupation certificate”.
ಮೇಲ್ಕಂಡಂತೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿನ ಕಟ್ಟಡಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಸಂಪರ್ಕ ಹಾಗೂ ನೀರು ಸರಬರಾಜು ನೀರು ಸಂಪರ್ಕ ನೀಡುವ ಪೂರ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್, ನೀರು ಸರಬರಾಜು ಹಾಗೂ ಒಳಚರಂಡಿ ಸಂಪರ್ಕವನ್ನು ನೀಡಲು ಕ್ರಮವಹಿಸಬೇಕಾಗಿರುತ್ತದೆ.
ವಾಸ್ತವ ಪರಿಸ್ಥಿತಿ ಏನಾಗಿದೆ?:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ನಿರ್ಮಾಣ ಮಾಡುತ್ತಿರುವ ಬಹುತೇಕ ಕಟ್ಟಡಗಳಲ್ಲಿ ಉಲ್ಲಂಘನೆ ಪ್ರಮಾಣವು ಶೇ.5 ಕ್ಕಿಂತ ಹೆಚ್ಚಾಗಿರುವುದು ಕಂಡುಬಂದಿದ್ದು, ಉಲ್ಲಂಘನೆ ಪ್ರಮಾಣವನ್ನು ಶೇ.5 ಕ್ಕೆ ಮಿತಿಗೊಳಿಸುವಂತೆ ನಿರ್ಮಾಣ ಮಾಡಲು ವಾಸ್ತವವಾಗಿ ನಿವೇಶನ ಆಳತೆ ಮತ್ತು ಭೌಗೋಳಿಕ ಇತಿಮಿತಿಗೊಳಿಂದಾಗಿ ಸಾಧ್ಯವಾಗುತ್ತಿಲ್ಲ.
ಇಂತಹ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಆಗುವುದಿಲ್ಲ. ಹೀಗಾಗಿ ಒಸಿ ಇಲ್ಲದ ಕಟ್ಟಡಗಳಿಗೆ ಸರ್ವೋಚ್ಚ ನ್ಯಾಯಾಲಯವು ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲು ಸೂಚಿಸಿರುವ ಹಿನ್ನಲೆಯಲ್ಲಿ ಕಟ್ಟಡದ ಮಾಲೀಕರಿಗೆ ಇದರಿಂದಾಗಿ ಅಥವಾ ಸಣ್ಣಪುಟ್ಟ ಉಲ್ಲಂಘನೆಗಳಾದಲ್ಲಿ ಕಟ್ಟಡಕ್ಕೆ ಸ್ವಾಧಿನಾನುಭವ ಪ್ರಮಾಣ ಪತ್ರ ನೀಡಲು ಸಾಧ್ಯವಾಗದ ಕಾರಣ ಬಹುತೇಕ ಕಟ್ಟಡ ಮಾಲೀಕರುಗಳಿಗೆ ತೊಂದರೆಯಾಗುತ್ತದೆ. ಇದಲ್ಲದೆ ಪಾಲಿಕೆಯ ಆದಾಯವು ಸಹ ಕುಂಠಿತವಾಗುತ್ತದೆ.
ಆದ್ದರಿಂದ ಪಾಲಿಕೆಯಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆದು ನಿರ್ಮಾಣ ಮಾಡುತ್ತಿರುವ ಕಟ್ಟಡಗಳಲ್ಲಿ ಉಲ್ಲಂಘನೆಯ ಪ್ರಮಾಣವನ್ನು ಶೇ.5 ರ ಮಿತಿಯಿಂದ ಶೇ 15 ರಷ್ಟು ಹೆಚ್ಚಿಸಿದ್ದಲ್ಲಿ, ಹಲವಾರು ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರವನ್ನು ದಂಡ ವಿಧಿಸಿ, ಕ್ರಮಬದ್ಧಗೊಳಿಸಿದ್ದಲ್ಲಿ ಪಾಲಿಕೆಯ ಆದಾಯವು ಕೂಡ ಹೆಚ್ಚಾಗಲಿದೆ ಮತ್ತು ವಾಸಕ್ಕನುಗುಣವಾಗಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪಾಲಿಕೆ ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಪ್ರಸ್ತುತ ಕಟ್ಟಡ ಬೈಲಾ ಏನು ಹೇಳುತ್ತೆ?:
ಕಟ್ಟಡ ಬೈಲಾ 2003 (Building By-Law 2003)ಗಳು ಅನುಮೋದಿತ ಕಟ್ಟಡ ನಿರ್ಮಾಣ ಯೋಜನೆಯಲ್ಲಿ ಶೇ.5 ರವರೆಗೆ ಉಲ್ಲಂಘನೆಗಳನ್ನು ಅನುಮತಿಸುತ್ತವೆ. ಶೇ.5 ಕ್ಕಿಂತ ಕಡಿಮೆ ಉಲ್ಲಂಘನೆಗಳನ್ನು ಹೊಂದಿರುವ ಕಟ್ಟಡಗಳಿಗೆ, ಆಸ್ತಿ ಮಾಲೀಕರು ಅಗತ್ಯವಾದ ದಂಡವನ್ನು ಪಾವತಿಸುವ ಮೂಲಕ ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಪಡೆಯಬಹುದು.
ಪ್ರಸ್ತುತ 5% ಕ್ಕಿಂತ ಹೆಚ್ಚು ಕಟ್ಟಡ ನಿರ್ಮಾಣದಲ್ಲಿನ ಉಲ್ಲಂಘನೆಗಳನ್ನು ಹೊಂದಿರುವ ಕಟ್ಟಡಗಳಿಗೆ ಒಸಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರಲ್ಲಿ ಹೆಚ್ಚಿನ ಕಟ್ಟಡ ನಡುಜಾಗ (Setback) ಅಳತೆ, ಆವರಿಸುವಿಕೆ (Coverage) ಶೇಕಡವಾರು ಪ್ರಮಾಣ ಇಲ್ಲದಿರುವುದು ಅಥವಾ ಮಹಡಿ ಎತ್ತರದ ಅಳತೆ ಉಲ್ಲಂಘಿಸುವುದು ಸೇರಿವೆ.
ನಗರದಲ್ಲಿ ಕಟ್ಟಡ ನಿರ್ಮಾಣ ಸಮಯದಲ್ಲಿನ ಉಲ್ಲಂಘನೆ ಮಿತಿಯನ್ನು ಮೀರಿ ಕಟ್ಟಡಗಳನ್ನು ಕಟ್ಟಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಬಿಎಂಪಿಯಿಂದ ಅಧಿಕಾರಿಯೊಬ್ಬರು ಹೇಳಿದರು. ಈ ಉಲ್ಲಂಘನೆ ಮಿತಿಯನ್ನು 5% ರಿಂದ 15% ಕ್ಕೆ ಹೆಚ್ಚಿಸಲು ನಾವು ಈಗ ಪ್ರಸ್ತಾಪಿಸಿದ್ದೇವೆ. ಸರ್ಕಾರದ ಮುಂದೆ ಪ್ರಸ್ತಾವನೆಯು ಅನುಮೋದನೆಗಾಗಿ ಬಾಕಿ ಇದೆ. ಸರ್ಕಾರವು ಅನುಮೋದನೆ ನೀಡಿದ ನಂತರ, ಕಟ್ಟಡ ನಿಯಮಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರತಿಯೊಂದು ಉಲ್ಲಂಘನೆಗೂ ವಿಧಿಸಬೇಕಾದ ದಂಡದ ಪ್ರಮಾಣವನ್ನು ಹೆಚ್ಚಿಸಲು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು. “ಈ ರೀತಿಯಾಗಿ, ಆದಾಯ ಗಳಿಸುವುದರ ಜೊತೆಗೆ, 6 ರಿಂದ 15% ವರೆಗಿನ ಉಲ್ಲಂಘನೆಗಳನ್ನು ಹೊಂದಿರುವ ಕಟ್ಟಡಗಳನ್ನು ನಾವು ಕ್ರಮಬದ್ಧಗೊಳಿಸುತ್ತೇವೆ” ಎಂದು ಅವರು ಹೇಳಿದರು.
ಈ ಬಾರಿ ಬಿಬಿಎಂಪಿ ಪ್ರಸ್ತಾವನೆಗೆ ಒಪ್ಪಿಗೆ ಸಾಧ್ಯತೆ :
ಈ ಹಿಂದೆಯೂ ಆಗ ಪಾಲಿಕೆ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಇದೇ ರೀತಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಅದಕ್ಕೆ ಸರ್ಕಾರದ ಅನಜಮತಿ ದೊರೆತಿರಲಿಲ್ಲ. ಆದರೆ ಪ್ರಸ್ತುತ 2024ರಲ್ಲಿ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಜನರಿಗಾಗುವ ಅನಾನುಕೂಲ ತಪ್ಪಿಸಲು ಸರ್ಕಾರ ಪಾಲಿಕೆಯ ಈಗಿನ ಪ್ರಸ್ತಾವನೆಗೆ ಕೆಲವೊಂದು ಬದಲಾವಣೆ ಸೂಚಿಸಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.