ಬೆಂಗಳೂರು, ಏ.15 www.bengaluruwire.com : ರಾಜ್ಯದಲ್ಲಿ ಡೀಸೆಲ್ ದರ ಏರಿಕೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ, ಟ್ರಕ್ ಹಾಗೂ ಗೂಡ್ಸ್ ವಾಹನಗಳು ಸೋಮವಾರ ರಾತ್ರಿಯಿಂದಲೇ ಕಾರ್ಯಾಚರಣೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.
ಈ ಮುಷ್ಕರದಿಂದಾಗಿ ರಾಜ್ಯಾದ್ಯಂತ ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ನೆರೆ ರಾಜ್ಯಗಳಿಂದ ಯಾವುದೇ ರೀತಿಯ ಸರಕು ಸಾಗಣೆ ಲಾರಿಗಳು ಕರ್ನಾಟಕಕ್ಕೆ ಆಗಮಿಸುತ್ತಿಲ್ಲ. ರಾಜ್ಯದಲ್ಲಿ ಜಲ್ಲಿ, ಮರಳು, ಕಲ್ಲು, ಸಿಮೆಂಟ್ ಸಾಗಾಟ ಸೋಮವಾರ ರಾತ್ರಿಯೇ ಸ್ಥಗಿತಗೊಂಡಿದೆ. ಗ್ಯಾಸ್ ಮಾಲೀಕರ ಸಂಘದ ಸಹಿತ 69 ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ರಾಜ್ಯ ಲಾಇ ಮಾಲೀಕರ ಹಾಗೂ ಏಜಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ತಿಳಿಸಿದ್ದಾರೆ.
ಲಾರಿ ಮುಷ್ಕರದಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಡೀಸೆಲ್ ಮೇಲಿನ ಅತಿಯಾದ ತೆರಿಗೆಯಿಂದಾಗಿ ಸಾರಿಗೆ ಉದ್ಯಮವು ತೀವ್ರ ಸಂಕಷ್ಟದಲ್ಲಿದೆ ಎಂದು ಸಂಘಟನೆಗಳು ಆರೋಪಿಸಿವೆ. ಡೀಸೆಲ್ ದರವನ್ನು ಇಳಿಸುವುದು, ಟೋಲ್ ಶುಲ್ಕವನ್ನು ಕಡಿಮೆ ಮಾಡುವುದು ಮತ್ತು ವಾಹನ ವಿಮೆಯ ದರವನ್ನು ನಿಯಂತ್ರಿಸುವುದು ಮುಷ್ಕರದ ಪ್ರಮುಖ ಬೇಡಿಕೆಗಳಾಗಿವೆ.
ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಸೇರಿದಂತೆ ರಾಜ್ಯದ ಹಲವೆಡೆ ಲಾರಿ ಮತ್ತು ಟ್ರಕ್ ನಿಲ್ದಾಣಗಳಲ್ಲಿ ವಾಹನಗಳು ಓಡಾಟ ನಡೆಸದೆ ನಿಂತಿವೆ. ಕೆಲವು ಸರಕು ಸಾಗಣೆ ಲಾರಿ ನಿಲ್ದಾಣಗಳು ಖಾಲಿ ಖಾಲಿಯಾಗಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸರಕು ಸಾಗಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸಾರಿಗೆ ಸಚಿವರಿಂದ ಮುಷ್ಕರ ಕೈ ಬಿಡಲು ಮನವಿ :

ಸೋಮವಾರ ರಾತ್ರಿಯೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಜಾಗೂ ಮುಖಂಡರೊಂದಿಗೆ ಮುಷ್ಕರ ಕೈಬಿಡುವಂತೆ ಕರೆ ಮಾಡಿ ಮನವಿ ಮಾಡಿದರು. ಕೇಂದ್ರ ಸರ್ಕಾರ ಈಗಾಗಲೇ ಕಳೆದ 10 ವರ್ಷಗಳಲ್ಲಿ ಹಲವು ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿದೆ. ಈಗ ಕಚ್ಛಾತೈಲ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ದರ ಏರಿಕೆ ಮಾಡಿದೆ. ಕೇಂದ್ರದ ವಿರುದ್ಧ ಒಮ್ಮೆಯೂ ಮುಷ್ಕರ ನಡೆಸದೆ, ರಾಜ್ಯ ಸರ್ಕಾರ ಲೀ. ಡೀಸೆಲ್ ಗೆ 2 ರೂ. ದರ ಹೆಚ್ಚಿಸಿದಕ್ಕೆ ಮುಷ್ಕರ ನಡೆಸಲು ಕರೆ ನೀಡಿದ್ದು ಸರಿಯೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಸಂಘಟನೆಗಳೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಆದರೆ, ಮುಷ್ಕರವನ್ನು ಹಿಂಪಡೆಯುವ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ನೀಡಲು ಅವರು ನಿರಾಕರಿಸಿದ್ದಾರೆ.
ಮುಷ್ಕರವು ಮುಂದಿನ ದಿನಗಳಲ್ಲಿ ಯಾವ ಸ್ವರೂಪವನ್ನು ಪಡೆದುಕೊಳ್ಳಲಿದೆ ಮತ್ತು ಸರ್ಕಾರವು ಇದಕ್ಕೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಈ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾರೆ ಎಂಬುದು ಕೂಡಾ ಗಮನಾರ್ಹವಾಗಿದೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಲಾರಿ ಮಾಲೀಕರ ಸಂಘವು ಕರೆ ನೀಡಿರುವ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಗಳೂರಿನ ಹೊರವಲಯದ ದೇವನಗೊಂದಿ ಇಂಧನ ಸಾಗಣೆ ಮಾಡುವ ದೇವನಗುಂಡಿ ಟ್ಯಾಂಕರ್ ಚಾಲಕ ಸಹಾಯಕ ಸಂಘ ಈ ಮುಷ್ಕರವನ್ನು ತಮ್ಮ ಸಂಘ ಬೆಂಬಲಿಸುತ್ತಿಲ್ಲ ಎಂದಿದೆ.
ಇಂಧನ ಟ್ಯಾಂಕರ್ ಚಾಲಕ, ಸಹಾಯಕರ ಸಂಘದಿಂದ ಮುಷ್ಕರಕ್ಕೆ ಬೆಂಬಲವಿಲ್ಲ :
ಈ ಬಗ್ಗೆ ದೇವನಗುಂಡಿ ಟ್ಯಾಂಕರ್ ಚಾಲಕ, ಸಹಾಯಕ ಸಂಘದ ಅಧ್ಯಕ್ಷ ಶ್ರೀ ರಂಗೇಗೌಡ ಅವರು, ತಮ್ಮ ಸಂಘವು ಮುಷ್ಕರವನ್ನು ಬೆಂಬಲಿಸುತ್ತಿಲ್ಲ ಎಂದು ಅವರು ದೃಢಪಡಿಸಿದ್ದಾರೆ ಮತ್ತು ನಮ್ಮ ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕರ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಅಗತ್ಯವಿದ್ದರೆ, ಚಿಲ್ಲರೆ ಮಾರಾಟ ಮಳಿಗೆಗಳಿಗೆ ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಟ್ಯಾಂಕರ್ ಸಿಬ್ಬಂದಿ ಪೊಲೀಸ್ ಬೆಂಗಾವಲು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.