ಬೆಂಗಳೂರು, ಏ.14 www.bngaluruwire.com : ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ (76) ಅವರು ವಿಧಿವಶರಾಗಿದ್ದಾರೆ. ಭಾನುವಾರ ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಇರಿಸಲಾಗಿದ್ದು, ಇಂದು (ಸೋಮವಾರ) ಬೆಳಗ್ಗೆ 10 ಗಂಟೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಪುತ್ರ ಗುರುಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. 1949ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದ ಜನಾರ್ಧನ್ ಅವರು, 1985ರಲ್ಲಿ ತೆರೆಕಂಡ ‘ಪಿತಾಮಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್…’, ‘ತರ್ಲೆ ನನ್ಮಗ’ ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಆದರೆ 2016ರ ನಂತರ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿರಲಿಲ್ಲ.
ಚಿತ್ರರಂಗಕ್ಕೆ ಬರುವ ಮುನ್ನ ಜನಾರ್ಧನ್ ಅವರು ಹೊಳಲ್ಕೆರೆಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಟಕಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಅವರ ನಾಟಕಾಭಿನಯವನ್ನು ಮೆಚ್ಚಿದ ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ಜನಾರ್ಧನ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡರು.

ಬೆಂಗಳೂರಿಗೆ ಬಂದ ನಂತರ ಜನಾರ್ಧನ್ ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ನಟ ವಜ್ರಮುನಿ ಅವರ ಅಂಗರಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡರು. ಬ್ಯಾಂಕ್ ಉದ್ಯೋಗದ ಜೊತೆಗೆ ನಾಟಕಗಳಲ್ಲಿಯೂ ಸಕ್ರಿಯರಾಗಿದ್ದ ಅವರಿಗೆ, ಕ್ರಮೇಣ ಸಿನಿಮಾಗಳತ್ತ ಒಲವು ಹೆಚ್ಚಾಯಿತು. ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದ ಕಾರಣದಿಂದಲೇ ಅವರಿಗೆ ‘ಬ್ಯಾಂಕ್’ ಜನಾರ್ಧನ್ ಎಂಬ ಹೆಸರು ಬಂದಿತು.

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಜನಾರ್ಧನ್ ಅವರು, ನಂತರದ ದಿನಗಳಲ್ಲಿ ಅನೇಕ ದೊಡ್ಡ ಬಜೆಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದರಾಗಿ ಅವರು ಗುರುತಿಸಿಕೊಂಡಿದ್ದರು.
ನಟನೆಯಲ್ಲಿ ಬ್ಯುಸಿಯಾಗಿದ್ದರೂ ಸಹ ಜನಾರ್ಧನ್ ಅವರು ತಮ್ಮ ಬ್ಯಾಂಕ್ ಕೆಲಸವನ್ನು ಬಿಟ್ಟಿರಲಿಲ್ಲ. ಆದರೆ ಚಿತ್ರೀಕರಣದ ಕಾರಣದಿಂದಾಗಿ ಅವರಿಗೆ ಬ್ಯಾಂಕ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಅವರ ಸಂಬಳದಲ್ಲಿ ಕಡಿತವಾಗುತ್ತಿತ್ತು. ಅಷ್ಟೇ ಅಲ್ಲದೆ, ಸಿನಿಮಾಗಳಲ್ಲಿಯೂ ಅವರಿಗೆ ಹೆಚ್ಚಿನ ಸಂಭಾವನೆ ಸಿಗುತ್ತಿರಲಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿತ್ತು ಎಂದು ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
“ಇವತ್ತಿನವರೆಗೆ 860 ಸಿನಿಮಾ ಮಾಡಿದ್ದೇನೆ. ಇದರಲ್ಲಿ ಮೂರು ತೆಲುಗು, ಮೂರು ತಮಿಳು, ನಾಲ್ಕು ತುಳು ಸಿನಿಮಾಗಳಿವೆ. ಆದರೆ ನನ್ನ ಖಾತೆಯಲ್ಲಿ ಹೆಚ್ಚಿನ ಹಣವಿಲ್ಲ. ಏಕೆಂದರೆ ನಾನು ಎಂದಿಗೂ ಸಂಭಾವನೆ ಹೆಚ್ಚಿಗೆ ಕೊಡಿ ಎಂದು ಕೇಳಲಿಲ್ಲ. ಅವರು ಎಷ್ಟು ಕೊಟ್ಟರೋ ಅಷ್ಟೇ ತೆಗೆದುಕೊಂಡಿದ್ದೇನೆ. ನನಗೆ ಪಾತ್ರದ ಮೇಲೆ ವ್ಯಾಮೋಹ ಇತ್ತು. ಹೀಗಾಗಿ ಸಂಭಾವನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ” ಎಂದು ಬ್ಯಾಂಕ್ ಜನಾರ್ಧನ್ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.