ಬೆಂಗಳೂರು, ಏ.10 www.bengaluruwire.com : ನಗರದ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶದ ಉದ್ಯೋಗಿಗಳಿಗೆ ಹೊಸದೊಂದು ಸವಾಲನ್ನು ಹಾಕಲಾಗಿದೆ. ಈ ವಿನೂತನ ಕಾರ್ಯಕ್ರಮಕ್ಕೆ ನಾಳೆ (ಏಪ್ರಿಲ್ 11ಕ್ಕೆ) ಚಾಲನೆ ದೊರೆಯಲಿದೆ.
ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶದ ಉದ್ಯೋಗಿಗಳು ತಮ್ಮ ವೈಯುಕ್ತಿಕ ವಾಹನಗಳನ್ನು ತೊರೆದು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಪ್ರೇರೇಪಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ನಾಳೆ ಹೊಸ ಸವಾಲನ್ನು ಪ್ರಾರಂಭಿಸಲಾಗುತ್ತಿದೆ.
ವಿಶ್ವ ಸಂಪನ್ಮೂಲ ಸಂಸ್ಥೆ (World Resources Institute, India) ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಸಂಸ್ಥೆ (ELCIA) ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಾಳೆ ಬೆಳಿಗ್ಗೆ 10.30ಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ ಇಎಲ್‌ಸಿಐಎ ಕಚೇರಿಯ ಸಭಾಂಗಣದಲ್ಲಿ ‘ಸ್ಟ್ಯಾಂಪ್ 3.0: ಪ್ರಯಾಣಿಕರ ನಡವಳಿಕೆಯನ್ನು ಪ್ರೇರೇಪಿಸುವುದು’ (STAMP 3.0: Nudging Commuter Behaviour) ಎಂಬ ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಬೆಂಗಳೂರಿನ ಸುಸ್ಥಿರ ಮತ್ತು ಸುಲಭ ಸಾರಿಗೆ ವ್ಯವಸ್ಥೆಯ ಕಡೆಗಿನ ಪ್ರಯತ್ನಗಳಿಗೆ ಈ ಕಾರ್ಯಕ್ರಮವು ಬೆಳಕು ಚೆಲ್ಲಲಿದೆ. ಮುಂಬರುವ ಹಳದಿ ಮಾರ್ಗದ ಮೆಟ್ರೋ (Yellow Line Metro) ಮತ್ತು ಕೊನೆಯ ಮೈಲಿ ಸಂಪರ್ಕಕ್ಕಾಗಿ ಫೀಡರ್ ಬಸ್ (Feeder bus for last mile connectivity)ಗಳ ಸೌಲಭ್ಯದ ಹಿನ್ನೆಲೆಯಲ್ಲಿ ಈ ನವೀನ ಸವಾಲನ್ನು ಪ್ರಾರಂಭಿಸಲಾಗುತ್ತಿದೆ.

ಬಹುತೇಕ ಟ್ರಾಫಿಕ್ ದಟ್ಟಣೆ ಮತ್ತು ಮಾಲಿನ್ಯವು ಪ್ರತಿನಿತ್ಯದ ಪ್ರಯಾಣಿಕರಿಂದ ಉಂಟಾಗುತ್ತಿದ್ದು, ಐಟಿ/ಬಿಟಿ ಉದ್ಯೋಗಿಗಳನ್ನು ಸಾರ್ವಜನಿಕ ಸಾರಿಗೆಗೆ ಬದಲಾಯಿಸುವುದು ಇದರ ಮುಖ್ಯ ಗುರಿಯಾಗಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದಲ್ಲಿ ನಗದು ಬಹುಮಾನಗಳನ್ನು ಒಳಗೊಂಡಿರುವ ನವೀನ ಸವಾಲನ್ನು ಅನಾವರಣಗೊಳಿಸಲಾಗುವುದು. ಇದರೊಂದಿಗೆ, ನಗರದ ನಾಯಕರು, ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಅಧಿಕಾರಿಗಳು, ಸಾರಿಗೆ ತಜ್ಞರು ಮತ್ತು ಕೈಗಾರಿಕಾ ಪ್ರಮುಖರೊಂದಿಗೆ ಸಂವಾದಗಳು ನಡೆಯಲಿವೆ. ಪ್ರಯಾಣಿಕರ ನಡವಳಿಕೆ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳ ಕುರಿತು ಚಿಂತನಾರ್ಹ ಗೋಷ್ಠಿಗಳು ಸಹ ಏರ್ಪಡಿಸಲಾಗಿದೆ ಎಂದು ವಿಶ್ವ ಸಂಪನ್ಮೂಲ ಸಂಸ್ಥೆಯ ಶ್ರೀನಿವಾಸ್ ಅಲವಿಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.