ಬೆಂಗಳೂರು, ಏ.9 www.bengaluruwire.com : ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಔಷಧಗಳು ಹಾಗೂ ಕಾಂತಿವರ್ಧಕಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತೀವ್ರ ನಿಗಾ ವಹಿಸಿದೆ. ಇಲಾಖೆಯ ಔಷಧ ಆಡಳಿತ ವಿಭಾಗವು ಮಾರ್ಚ್ 2025 ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 41 ಅನುತ್ತಮ ಗುಣಮಟ್ಟದ ಔಷಧಗಳನ್ನು ಪತ್ತೆ ಮಾಡಿದೆ.
ಔಷಧ ಮಾದರಿಗಳ ವಿಶ್ಲೇಷಣೆ :
ಇಲಾಖೆಯ ಅಮಲು ಜಾರಿ ಅಧಿಕಾರಿಗಳು ಮಾರ್ಚ್ ತಿಂಗಳಲ್ಲಿ ಒಟ್ಟು 1,891 ಔಷಧ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದರು. ಈ ಮಾದರಿಗಳನ್ನು ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 1,298 ಮಾದರಿಗಳು ಉತ್ತಮ ಗುಣಮಟ್ಟದ್ದೆಂದು ದೃಢಪಟ್ಟಿವೆ. ಆದರೆ, 41 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿವೆ.
ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಕ್ರಮ :

2024-25ನೇ ಸಾಲಿನಲ್ಲಿ ಔಷಧ ಮತ್ತು ಕಾಂತಿವರ್ಧಕಗಳ ಕಾಯ್ದೆ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಫೆಬ್ರವರಿ ತಿಂಗಳಲ್ಲಿ 10 ಮತ್ತು ಮಾರ್ಚ್ ತಿಂಗಳಲ್ಲಿ 18 ಸೇರಿದಂತೆ ಒಟ್ಟು 28 ಮೊಕದ್ದಮೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿ ಕಳಪೆ ಗುಣಮಟ್ಟ :
ನಿರ್ದಿಷ್ಟವಾಗಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ 196 ಬ್ಯಾಚ್‌ಗಳ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 113 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತಯಾರಿಕಾ ಸಂಸ್ಥೆಯಾದ ಪಶ್ಚಿಮ್ ಬಂಗಾ ಫಾರ್ಮಾಸ್ಯೂಟಿಕಲ್ಸ್ (Paschim Banga Pharmaceuticals) ವಿರುದ್ಧ ಮಾರ್ಚ್ ಅಂತ್ಯದವರೆಗೆ 78 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಇನ್ನಿತರ ಔಷಧ ತಯಾರಕರ ವಿರುದ್ಧ ಮೊಕದ್ದಮೆ :
ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸಿದ ಮತ್ತು ನಿಯಮ ಉಲ್ಲಂಘನೆ ಮಾಡಿದ ಇತರ ತಯಾರಿಕಾ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಅಂತಹ 43 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಇಲಾಖೆ ಅನುಮತಿ ನೀಡಿದೆ.
ಔಷಧ ಮಳಿಗೆಗಳ ಪರಿಶೀಲನೆ ಮತ್ತು ಲೈಸೆನ್ಸ್ ಅಮಾನತು :
ಫೆಬ್ರವರಿ 2025 ರಲ್ಲಿ ಔಷಧ ಆಡಳಿತದ ಅಧಿಕಾರಿಗಳು 1,872 ಔಷಧ ಮಾದರಿಗಳನ್ನು ವಿಶ್ಲೇಷಣೆಗಾಗಿ ಪಡೆದಿದ್ದು, 2,078 ಔಷಧ ಮಳಿಗೆಗಳನ್ನು ಪರಿಶೀಲಿಸಿದ್ದಾರೆ. ಈ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದ 215 ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.
ಮಾರುಕಟ್ಟೆಯಿಂದ ಕಳಪೆ ಔಷಧ ಹಿಂಪಡೆಯುವಿಕೆ :
ರಾಜ್ಯದಲ್ಲಿ ಕಳಪೆ ಗುಣಮಟ್ಟವೆಂದು ಪತ್ತೆಯಾದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವ ವಿಶೇಷ ಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಲಾಗಿದೆ. ಈ ಅವಧಿಯಲ್ಲಿ ಸುಮಾರು 24,29,479/- ರೂಪಾಯಿ ಮೌಲ್ಯದ ಕಳಪೆ ಗುಣಮಟ್ಟದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುಧಾರಣಾ ಕ್ರಮಗಳು ಜಾರಿ :
ಕಳಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಕಳಪೆ ದಾಸ್ತಾನುಗಳನ್ನು ಹಿಂಪಡೆಯಲು ಹಾಗೂ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಮತ್ತು ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ತಂತ್ರಾಂಶವು ಶೀಘ್ರದಲ್ಲೇ ಜಾರಿಗೆ ಬರಲಿದೆ.
ಬಾಟಲಿ ಕುಡಿಯುವ ನೀರಿನ ಗುಣಮಟ್ಟ ಕಳಪೆ :

ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್‌ಗಳ 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದ್ದು, 255 ಮಾದರಿಗಳ ವರದಿ ಬಂದಿದೆ. ಅದರಲ್ಲಿ 72 ಮಾದರಿಗಳು ಸುರಕ್ಷಿತವಾಗಿದ್ದರೆ, 95 ಅಸುರಕ್ಷಿತ ಮತ್ತು 88 ಕಳಪೆ ಗುಣಮಟ್ಟದ್ದೆಂದು ತಿಳಿದುಬಂದಿದೆ.
ಕರಿದ ಬಟಾಣಿಗಳಲ್ಲಿ ಕೃತಕ ಬಣ್ಣ ಪತ್ತೆ :
ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, 115 ಮಾದರಿಗಳನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. 46 ಮಾದರಿಗಳು ಸುರಕ್ಷಿತವಾಗಿದ್ದರೆ, 69 ಮಾದರಿಗಳು ಅಸುರಕ್ಷಿತವೆಂದು ವರದಿಯಾಗಿವೆ.
ಇತರ ಆಹಾರ ಪದಾರ್ಥಗಳ ತಪಾಸಣೆ :

ಮಾರ್ಚ್ ತಿಂಗಳಲ್ಲಿ ತುಪ್ಪ, ಖೋವಾ, ಪನ್ನೀರ್, ಸಿಹಿತಿಂಡಿ ಮತ್ತು ಖಾರ ಮಿಕ್ಚರ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಲಾಗಿದೆ. ಇದಲ್ಲದೆ, ಸ್ಥಳೀಯ ಜ್ಯೂಸ್, ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್‌ಗಳ ಮಾದರಿಗಳನ್ನು ಸಹ ಪರೀಕ್ಷಿಸಲಾಗಿದೆ. ಲೋಪ ಕಂಡುಬಂದ 92 ಘಟಕಗಳಿಗೆ ನೋಟಿಸ್ ನೀಡಲಾಗಿದ್ದು, 6 ಘಟಕಗಳಿಗೆ ದಂಡ ವಿಧಿಸಲಾಗಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಪರಿಶೀಲನೆ :
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಕ್ರಿಮಿ ಕೀಟಗಳ ನಿಯಂತ್ರಣ ಕ್ರಮಗಳ ಕುರಿತು 590 ಸ್ಥಳಗಳಿಗೆ ಭೇಟಿ ನೀಡಲಾಗಿದೆ. ನಿಯಮ ಪಾಲಿಸದ 214 ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದ್ದು, 11 ಹೋಟೆಲ್‌ಗಳಿಗೆ ದಂಡ ವಿಧಿಸಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.