ಬೆಂಗಳೂರು, ಏ.9 www.bengaluruwire.com : ನಗರದ ಮಲ್ಲೇಶ್ವರದ 4ನೇ ಕ್ರಾಸ್, ಸಂಪಿಗೆ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡಕ್ಕೆ ಯಾವುದೇ ರೀತಿಯ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate) ಹಾಗೂ ಪೂರ್ಣಗೊಳಿಸುವಿಕೆ ಪ್ರಮಾಣಪತ್ರ (Completion Certificate) ನೀಡದಂತೆ ಬಿಬಿಎಂಪಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಕಟ್ಟಪ್ಪಣೆ ನೀಡಿದೆ.
ಇದಲ್ಲದೆ, ಮುಂದಿನ ಆದೇಶದವರೆಗೆ ಈ ಕಟ್ಟಡಕ್ಕೆ ಶಾಶ್ವತ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ನೀಡದಂತೆ ಬೆಸ್ಕಾಂ ಮತ್ತು ಜಲ ಮಂಡಳಿಗೂ ನ್ಯಾಯಾಲಯ ನಿರ್ಬಂಧ ಹೇರಿದೆ ಎಂದು ಅರ್ಜಿದಾರರೂ ಹಾಗೂ ಹಿರಿಯ ವಕೀಲರಾದ ಎನ್.ಪಿ.ಅಮೃತೇಶ್ ತಿಳಿಸಿದ್ದಾರೆ.
ಐದು ಹೆಚ್ಚುವರಿ ಮಹಡಿಗಳ ಅನಧಿಕೃತ ನಿರ್ಮಾಣ:
ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಯಾವುದೇ ಅನುಮತಿ ಪಡೆಯದೆ ಐದು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದರು.

ಹಿರಿಯ ವಕೀಲರೂ ಹಾಗೂ ಸ್ಥಳೀಯ ನಿವಾಸಿಯೂ ಆದ ಎನ್.ಪಿ.ಅಮೃತೇಶ್ ಅವರು ದಾಖಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ಆದೇಶ ಹೊರಡಿಸಿದೆ.

ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘನೆ:
ಈ ಹಿಂದೆ ಮಾರ್ಚ್ 21 ರಂದು ಯಾವುದೇ ಹೆಚ್ಚಿನ ನಿರ್ಮಾಣ ಕಾರ್ಯ ನಡೆಸದಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ, ಖಾಸಗಿ ಪ್ರತಿವಾದಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನಿರ್ಮಾಣ ಕಾರ್ಯ ಮುಂದುವರೆಸಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಕಟ್ಟಡದ ಒಳಾಂಗಣ ವಿನ್ಯಾಸ ಕಾರ್ಯಗಳನ್ನು ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಬಿಬಿಎಂಪಿಯಿಂದ ತೆರವು ಆದೇಶ:
ಈ ಕುರಿತು ಹೈಕೋರ್ಟಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು, ಈಗಾಗಲೇ ಮಾ.14 ರಂದು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 356 (2) ಅಡಿಯಲ್ಲಿ ಅನಧಿಕೃತ ನಿರ್ಮಾಣ ತೆರವುಗೊಳಿಸುವ ಆದೇಶ ಹೊರಡಿಸಲಾಗಿದೆ. ಆದರೆ ಖಾಸಗಿ ಪ್ರತಿವಾದಿಯು ಇದನ್ನು ಧಿಕ್ಕರಿಸಿ ನಿರ್ಮಾಣ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖ:
ಇದಲ್ಲದೆ ನ್ಯಾಯಾಲಯವು ಈ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಬರ್ಜಾತ್ಯ ವಿ. ಯು.ಪಿ. ಆವಾಸ್ ಏವಂ ವಿಕಾಸ್ ಪರಿಷತ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿತು. ಸಮರ್ಥ ಪ್ರಾಧಿಕಾರಗಳಿಂದ ಸ್ವಾಧೀನಾನುಭವ ಅಥವಾ ಪೂರ್ಣಗೊಳಿಸುವಿಕೆ ಪ್ರಮಾಣಪತ್ರ (OC or CC) ನೀಡಿದ ನಂತರವೇ ಮೂಲಭೂತ ಸೌಕರ್ಯಗಳನ್ನು (utility services) ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿತು.
ವ್ಯಾಪಾರ ಪರವಾನಗಿ ನೀಡದಂತೆ ಆದೇಶ:
ಇದರಂತೆ, ನ್ಯಾಯಾಲಯವು ಈ ಪ್ರಕರಣದಲ್ಲಿ ಯಾವುದೇ ವ್ಯಾಪಾರ ಪರವಾನಗಿಯನ್ನು ನೀಡಬಾರದು ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಪೊಲೀಸ್ ಆಯುಕ್ತರು ತಮ್ಮ ವ್ಯಾಪ್ತಿಯ ಪೊಲೀಸರ ಮೂಲಕ ನ್ಯಾಯಾಲಯದ ಮಧ್ಯಂತರ ಆದೇಶಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶಿಸಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನಾಳೆಗೆ (ಏಪ್ರಿಲ್ 09 ಕ್ಕೆ) ನಿಗದಿಪಡಿಸಲಾಗಿದೆ ಮತ್ತು ಈ ಹಿಂದೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದೆ.