ಬೆಂಗಳೂರು ಏ.08 www.bengaluruwire.com : ಹೊಸ ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ನಿಟ್ಟಿನಲ್ಲಿ, ಒಮ್ಮೆಲೆ ಹಣ ಪಾವತಿಸಲು ಸಾಧ್ಯವಾಗದೇ ಇರುವಂತಹ ಅಪಾರ್ಟ್‌ಮೆಂಟ್ ಅಸೋಷಿಯೇಷನ್‌ಗಳಿಗೆ ಹಾಗೂ ಕಟ್ಟಡ ಮಾಲೀಕರಿಗೆ ಸಮಾನ ಕಂತುಗಳಲ್ಲಿ (EMI- ಇಎಂಐ) ಶುಲ್ಕ ಪಾವತಿಸುವ ಅವಕಾಶವನ್ನು ಬೆಂಗಳೂರು ಜಲಮಂಡಳಿ ಕಲ್ಪಿಸಿದೆ.
ಬೆಂಗಳೂರು ನಗರದ ಎಲ್ಲಾ ನಾಗರೀಕರಿಗೂ ಶುದ್ಧ ಹಾಗೂ ಬಿಐಎಸ್ ಪ್ರಾಮಾಣೀಕೃತ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಯೋಜನೆಯನ್ನು ಏ.15ರ ನಂತರ ಅನುಷ್ಠಾನಗೊಳಿಸಲಾಗುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾನ ಕಂತುಗಳಲ್ಲಿ ಹಣ ಪಾವತಿಸುವ ಅವಕಾಶ :
ಅಪಾರ್ಟ್‌ಮೆಂಟ್ ಅಸೋಷಿಯೇಷನ್‌ಗಳು ಅಥವಾ ಮನೆಗಳ ಮಾಲೀಕರು 12 ತಿಂಗಳ ಸಮಾನ ಕಂತುಗಳಲ್ಲಿ ಮಂಡಳಿಗೆ ಶುಲ್ಕ ಪಾವತಿಸುವ ಮೂಲಕ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿರುವ ಈ ಯೋಜನೆಗೆ ಎರಡು ತಿಂಗಳ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಾವೇರಿ ನೀರಿನ ಸಂಪರ್ಕ ಪಡೆಯಲು ಷರತ್ತುಗಳು :

1) ಡಿಮ್ಯಾಂಡ್ ನೊಟೀಸ್‌ನ (ಅನ್ವಯಿಸಿದಲ್ಲಿ ಪ್ರೋರೇಟಾ ಶುಲ್ಕ, ಮೀಟರ್ ಶುಲ್ಕ, ಇನ್ಸ್ ಪೆಕ್ಷನ್ ಚಾರ್ಜಸ್, ಜಿಬಿ ವಾಸ್ಟ್, ಬಿಸಿಸಿ ಶುಲ್ಕಗಳು ಹಾಗೂ ಲೈನ್ ಕಾಸ್ಟ್ ಸೇರಿದ) ಶೇಕಡಾ 20 ರಷ್ಟು ಹಣವನ್ನು ಮೊದಲ ಕಂತಾಗಿ ಪಾವತಿಸಬೇಕು.
2) ಇನ್ನುಳಿದ ಶೇಕಡಾ 80 ರಷ್ಟು ಶುಲ್ಕವನ್ನು ಪಾವತಿಸಲು 12 ತಿಂಗಳುಗಳ ಕಾಲಾವಕಾಶ.
3) ಅಪಾರ್ಟ್‌ಮೆಂಟ್ ಅಸೋಷಿಯೇಷನ್‌ಗಳು, ಮನೆ ಹಾಗೂ ಕಟ್ಟಡ ಮಾಲೀಕರಿಗೆ ಮಾತ್ರ ಇಎಂಐ ಸೌಲಭ್ಯ.
ನಗರದ ಹೊರವಲಯದ ಪ್ರದೇಶಗಳಲ್ಲಿರುವ ನಿವಾಸಿಗಳು ಅಂತರ್ಜಲದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಅಂತರ್ಜಲ ಬಳಕೆ ಶೇಕಡಾ 187 ರಷ್ಟು ಹೆಚ್ಚಾಗಿದೆ. ಇದರಿಂದ ದಿನೇ ದಿನೇ ಅಂತರ್ಜಲ ಕುಸಿತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರಿಂದ ಬಹಳಷ್ಟು ಸಮಸ್ಯೆಯಾಗಲಿದೆ.
ಅಪಾರ್ಟ್‌ಮೆಂಟ್ ಗಳ ಅಸೋಷಿಯೇಷನ್‌ಗಳ ಪದಾಧಿಕಾರಿಗಳು ಒಮ್ಮೆಲೆ ದೊಡ್ಡ ಮೊತ್ತವನ್ನು ಸಂಗ್ರಹಿಸುವುದರಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಗಮನ ಸೆಳೆದಿದ್ದರು. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹಾಗೂ ಉತ್ತಮ ಗುಣಮಟ್ಟದ ಹಾಗೂ ಬಿಐಎಸ್ ಪ್ರಮಾಣೀಕೃತ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ರಾಮ್ ಪ್ರಸಾತ್ ಮನೋಹರ್ ವಿವರಿಸಿದ್ದಾರೆ.