ಬೆಂಗಳೂರು, ಏ.07 www.bengaluruwire.com : ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಲಿ (Summer Heat)ನ ತಾಪಕ್ಕೆ ಈಗಾಗಲೇ ಬಿಬಿಎಂಪಿ (BBMP) ಸುಪರ್ದಿಯಲ್ಲಿರುವ 183 ಕೆರೆಗಳ (Lakes) ಪೈಕಿ 53 ಕೆರೆಗಳಲ್ಲಿ ನೀರಿನ ಪಸೆ (53 Lakes Dried)ಯೇ ಇಲ್ಲದೆ ಸಂಪೂರ್ಣವಾಗಿ ಬರಿದಾಗಿದೆ.
ಪಾಲಿಕೆಯ ಅಧಿಕೃತ ಮೂಲಗಳ ಪ್ರಕಾರ ಏ.05ರ ಮಾಹಿತಿಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ 183 ಕೆರೆಗಳ ನೀರು ಹಿಡಿದಿಡುವ ಒಟ್ಟಾರೆ ಸಾಮರ್ಥ್ಯದ ಪ್ರಮಾಣ 31,505.48 ದಶಲಕ್ಷ ಲೀಟರ್ ಗಳಾಗಿದ್ದರೆ ಪ್ರಸ್ತುತ ಆ ಕೆರೆಗಳಲ್ಲಿ 10,980.01 ದ.ಲ.ಲೀಟರ್ ನೀರು ಮಾತ್ರ ಸಂಗ್ರಹವಿದೆ. ಅಂದರೆ ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯದ ಶೇ.34.85ರಷ್ಟು ಮಾತ್ರ ಜೀವ ಜಲವಿದೆ.

148 ಎಕರೆ ವಿಸ್ತೀರ್ಣದ ಹುಳಿಮಾವು ಕೆರೆ, 66 ಎಕರೆ ವಿಸ್ತೀರ್ಣದ ಸಿಂಗಪುರ ಕೆರೆ, 59 ಎಕರೆಯಷ್ಟು ವಿಶಾಲವಾದ ಹೊಸಕೆರೆಹಳ್ಳಿ ಕೆರೆ, ಉಲ್ಲಾಳ ಕೆರೆ ಸೇರಿದಂತೆ ಹಲವು ಕೆರೆಗಳು ಒಣಗಿವೆ. ಏಪ್ರಿಲ್ ಮೊದಲ ವಾರದಲ್ಲೇ ಈ ಪರಿ ಕೆರೆಯು ಬರಿದಾಗಿದ್ದರೆ, ಮೇ ತಿಂಗಳ ಅಂತ್ಯದ ವೇಳೆಗೆ ಕೆರೆಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕುಸಿತವಾಗಲಿದೆ. ನೀರಿನ ಸಂಗ್ರಹ ಕಡಿಮೆಯಾದ ಪರಿಣಾಮ ಜಲಮೂಲಗಳ ಅಸುಪಾಸಿನಲ್ಲಿರುವ ಪ್ರದೇಶಗಳ ನಗರದ ಅಂತರ್ಜಲ ಪ್ರಮಾಣ ಈಗಾಗಲೇ ಕಡಿಮೆಯಾಗಿದ್ದು ಮತ್ತಷ್ಟು ಇಳಿಕೆಯಾಗಲಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿನ 183 ಕೆರೆಗಳ ಪೈಕಿ ಬಿಡಬ್ಲ್ಯುಎಸ್ ಎಸ್ ಬಿ ಹಾಗೂ ಪಾಲಿಕೆಯು ವಿವಿಧ ಸಾಮರ್ಥ್ಯದ 28 ತ್ಯಾಜ್ಯ ನೀರು ಸಂಸ್ಕರಣಾ ಘಟಕ (Sewage treatment plant – STP) ಅಳವಡಿಸಿದ್ದರೆ, 12 ಕೆರೆಗಳಲ್ಲಿ ಎಸ್ ಟಿಪಿ ಅಳವಡಿಸಿರುವ ಹಾಗೂ ಅಳವಡಿಕೆ ಕಾರ್ಯ ನಡೆಯುತ್ತಿದೆ. ಉಳಿದಂತೆ ನೂರಾರು ಕೆರೆಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿ ಸುತ್ತಮುತ್ತಲ ಸ್ಥಳಗಳ ನೈಮರ್ಲ್ಯತೆಯನ್ನು ಹದಗೆಡಿಸಿದೆ. ಬೆಂಗಳೂರಿನ ಐತಿಹಾಸಿಕ ಕೆರೆ ಕೆಂಪಾಂಬುದಿಯಲ್ಲಿ ಅಳವಡಿಸಿರುವ ಎಸ್ ಟಿಪಿ ಕಾರ್ಯನಿರ್ವಹಿಸದೆ ಆ ಕೆರೆಯಲ್ಲಿ ಶುದ್ಧ ನೀರು ಸಂಗ್ರಹ ಎಂಬುದು ಮರೀಚಿಕೆಯಾಗಿದೆ.

ಬೆಂಗಳೂರಿನಲ್ಲಿ ವಲಯವಾರು ಕೆರೆಗಳ ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿವರ :
ಮಹದೇವಪುರ ವಲಯ :
ಮಹದೇವಪುರ ವಲಯದಲ್ಲಿ ಒಟ್ಟು 50 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 9493.35 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 2110.43 ದ.ಲ.ಲೀ ನೀರಷ್ಟೇ ಇದೆ. ಇವುಗಳ ಪೈಕಿ 19 ಕೆರೆಗಳು ಸಂಪೂರ್ಣ ಬರಿದಾಗಿದೆ.
ಯಲಹಂಕ ವಲಯ :
ಯಲಹಂಕ ವಲಯದಲ್ಲಿ ಒಟ್ಟು 27 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 9214.08 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 4276.61 ದ.ಲ.ಲೀ ನೀರಷ್ಟೇ ಇದೆ. ಇವುಗಳ ಪೈಕಿ 12 ಕೆರೆಗಳು ಸಂಪೂರ್ಣ ಬರಿದಾಗಿದೆ.
ಬೊಮ್ಮನಹಳ್ಳಿ ವಲಯ :
ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 44 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 4882 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 2725.10 ದ.ಲ.ಲೀ ನೀರಷ್ಟೇ ಇದೆ. ಇವುಗಳ ಪೈಕಿ 2 ಕೆರೆಗಳು ಸಂಪೂರ್ಣ ಬರಿದಾಗಿದೆ.
ರಾಜರಾಜೇಶ್ವರಿ ನಗರ ವಲಯ :
ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು 33 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 3032.31 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 393.59 ದ.ಲ.ಲೀ ನೀರಷ್ಟೇ ಇದೆ. ಇವುಗಳ ಪೈಕಿ 12 ಕೆರೆಗಳು ಸಂಪೂರ್ಣ ಬರಿದಾಗಿದೆ.
ದಾಸರಹಳ್ಳಿ ವಲಯ :
ದಾಸರಹಳ್ಳಿ ವಲಯದಲ್ಲಿ ಒಟ್ಟು 12 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 1740.31 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 140.62 ದ.ಲ.ಲೀ ನೀರಷ್ಟೇ ಇದೆ. ಇವುಗಳ ಪೈಕಿ 6 ಕೆರೆಗಳು ಸಂಪೂರ್ಣ ಬರಿದಾಗಿದೆ.
ದಕ್ಷಿಣ ವಲಯ :
ದಕ್ಷಿಣ ವಲಯದಲ್ಲಿ ಒಟ್ಟು 7 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 1339.26 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 911.56 ದ.ಲ.ಲೀ ನೀರಷ್ಟೇ ಇದೆ.
ಪೂರ್ವ ವಲಯ :
ಪೂರ್ವ ವಲಯದಲ್ಲಿ ಒಟ್ಟು 44 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 4882 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 2725.10 ದ.ಲ.ಲೀ ನೀರಷ್ಟೇ ಇದೆ. ಇವುಗಳ ಪೈಕಿ 2 ಕೆರೆಗಳು ಸಂಪೂರ್ಣ ಬರಿದಾಗಿದೆ.
ಪಶ್ಚಿಮ ವಲಯ :
ಪಶ್ಚಿಮ ವಲಯದಲ್ಲಿ ಒಟ್ಟು 2 ಕೆರೆಗಳಿದ್ದು ಅಲ್ಲಿನ ಕೆರೆಗಳ ನೀರು ಹಿಡಿದಿಡುವ ಸಾಮರ್ಥ್ಯ 453.12 ದಶಲಕ್ಷ ಲೀಟರ್ ಆಗಿದ್ದು ಆ ಪೈಕಿ 351.07 ದ.ಲ.ಲೀ ನೀರಿನ ಸಂಗ್ರಹವಿದೆ.

ನಗರದಲ್ಲಿನ ಕೆರೆಗಳ ನೀರಿನ ಮಟ್ಟ ಅರ್ಧಕ್ಕಿಂತ ಕಡಿಮೆ :
ಒಟ್ಟಾರೆ ಈ ಮೇಲಿನ ಅಂಕಿಸಂಖ್ಯೆಗಳನ್ನು ಗಮನಿಸಿದಾಗ 50 ಕೆರೆಗಳಿರುವ ಮಹದೇವಪುರ ವಲಯದಲ್ಲಿ 19 ಕೆರೆಗಳು ಸಂಪೂರ್ಣವಾಗಿ ಬತ್ತಿರುವುದಲ್ಲದೆ ಕೆರೆಗಳಲ್ಲಿ ನೀರಿನ ಸಂಗ್ರಹ ಶೇ.22ರಷ್ಟು ಮಾತ್ರವಿದೆ. ಇನ್ನು 44 ಕೆರೆಗಳಿರುವ ಬೊಮ್ಮನಹಳ್ಳಿ ಅರ್ಧಕ್ಕರ್ಧ ನೀರಿನ ಸಂಗ್ರಹವಿದೆ. 33 ಕೆರೆಗಳಿರುವ ರಾಜರಾಜೇಶ್ವರಿ ನಗರದಲ್ಲಿ ಒಟ್ಟಾರೆ ಕೆರೆಗಳಲ್ಲಿ ಶೇ.13 ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಆ ಪೈಕಿ 12 ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ. ಉಳಿದ ವಲಯಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ.
ಟ್ಯಾಂಕರ್ ನೀರಿಗೆ ದುಪ್ಪಟ್ಟು ಹಣ ನೀಡಿ ಖರೀದಿ :

ಇಡೀ ಬೆಂಗಳೂರಿನಲ್ಲಿನ ಅಂತರ್ಜಲ ಪ್ರಮಾಣ ಕುಸಿತದಿಂದ ನಗರದ ಹಲವು ಬೋರ್ ವೆಲ್ ಗಳು ಕೈಕೊಟ್ಟರೆ, ಕಾವೇರಿ ನೀರು ಪೂರೈಕೆ ಇರದ ಕಡೆ ಗುಣಮಟ್ಟವಿಲ್ಲದ ನೀರಿನ ಟ್ಯಾಂಕರ್ ಗೆ ಹಲವು ಪಟ್ಟು ಹೆಚ್ಚು ಹಣ ನೀಡಿ ಜನರು ನೀರು ಖರೀದಿಸುವಂತಾಗಿದೆ.
ಕೆರೆಯಲ್ಲಿ ಮಳೆ ನೀರು ಸಂಗ್ರಹ ಹೆಚ್ಚಳಕ್ಕೆ ಯೋಜನೆ ರೂಪಿಸುವ ಅಗತ್ಯವಿದೆ :
ಇನ್ನು ಕೆರೆಗಳ ನೀರಿನ ಸಂಗ್ರಹ ಚಿತ್ರಣ ಗಮನಿಸಿದರೆ, ಕೆರೆಗಳನ್ನು ಆಶ್ರಯಿಸಿರುವ ನವಿಲು, ಕೊಕ್ಕರೆ, ಗಿಳಿ, ಹದ್ದು ಸೇರಿದಂತೆ ನಾನಾ ರೀತಿಯ ಬಾನಾಡಿಗಳು, ಅಳಿಲು, ಆಮೆ, ಮೊಲ ಮತ್ತಿತರ ವನ್ಯಪ್ರಾಣಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ನಗರದಲ್ಲಿ ಸುರಿಯುವ ಮಳೆಯು ಸೂಕ್ತ ರೀತಿ ರಾಜಕಾಲುವೆಗಳ ಮೂಲಕ ಈ ಕೆರೆಗಳಲ್ಲಿ ಸಂಗ್ರಹಿಸಲು ಸೂಕ್ತ ಯೋಜನೆ ರೂಪಿಸಿದರೆ ನಗರದ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಳವಾದರೆ ಅಷ್ಟರ ಮಟ್ಟಿಗೆ ಅಂತರ್ಜಲ ಮಟ್ಟವೂ ಏರಿಕೆಯಾಗಲಿದೆ ಎಂದು ಭೂರ್ಗಭ ಶಾಸ್ತ್ರಜ್ಞರು, ಪರಿಸರ ತಜ್ಞರ ಅಭಿಪ್ರಾಯವಾಗಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.