ರಾಮೇಶ್ವರ, ಏ.06 www.bengaluruwire.com : ರಾಮನವಮಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ರಾಮೇಶ್ವರದಲ್ಲಿ ಭಾರತದ ಮೊದಲ ಲಂಬ ಎತ್ತುವ ಸಮುದ್ರ ಸೇತುವೆಯನ್ನು (Vertical Lift Sea Bridge) ಇಂದು ಉದ್ಘಾಟಿಸುವರು. ಪಂಬನ್ ರೈಲ್ವೆ ಸೇತುವೆ (Pamban Railway Bridge) ಎಂದು ಕರೆಯಲ್ಪಡುವ ಈ ರೈಲ್ವೆ ಸೇತುವೆಯನ್ನು 550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪುರಾಣಗಳಲ್ಲಿ ಉಲ್ಲೇಖಿತವಾದ ರಾಮ ಸೇತುವೆಯು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ರಾಮೇಶ್ವರವು ಹೊಂದಿದೆ. ರಾಮಾಯಣದ ಪ್ರಕಾರ, ರಾಮೇಶ್ವರದ ಸಮೀಪದ ಧನುಷ್ಕೋಟಿಯಿಂದ ರಾಮ ಸೇತುವೆಯ ನಿರ್ಮಾಣ ಪ್ರಾರಂಭವಾಯಿತು ಎಂಬ ನಂಬಿಕೆಯಿದೆ.
ರಾಮೇಶ್ವರವನ್ನು ಭಾರತದ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಈ ಹೊಸ ಸೇತುವೆಯನ್ನು 550 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2.08 ಕಿಲೋಮೀಟರ್ ಉದ್ದದ ಈ ಸೇತುವೆಯು 99 ಸ್ಪ್ಯಾನ್‌ಗಳನ್ನು ಹೊಂದಿದೆ ಮತ್ತು 72.5 ಮೀಟರ್ ಲಂಬ ಎತ್ತುವ ಸ್ಪ್ಯಾನ್ 17 ಮೀಟರ್‌ಗಳವರೆಗೆ ಏರುತ್ತದೆ. ಇದು ರೈಲು ಸೇವೆಗಳಿಗೆ ಅಡ್ಡಿಯಾಗದಂತೆ ಹಾಗೂ ದೊಡ್ಡ ಹಡಗುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಈ ಸೇತುವೆಯು ಸ್ಟೇನ್‌ಲೆಸ್ ಸ್ಟೀಲ್ (Stainless Steel) ಬಲವರ್ಧನೆಗಳು, ಉನ್ನತ ದರ್ಜೆಯ ರಕ್ಷಣಾತ್ಮಕ ಬಣ್ಣ ಮತ್ತು ಸುಧಾರಿತ ಬಾಳಿಕೆ ಮತ್ತು ಕಡಿಮೆ ನಿರ್ವಹಣೆಗಾಗಿ ಸಂಪೂರ್ಣವಾಗಿ ಬೆಸುಗೆ ಹಾಕಿದ ಕೀಲುಗಳನ್ನು ಒಳಗೊಂಡಿದೆ. ಭವಿಷ್ಯದ ಸಂಚಾರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಎರಡು ಜೋಡಿ ರೈಲು ಹಳಿಗಳನ್ನು ಹಾಕಲಾಗೀದೆ. ಅಲ್ಲದೇ ವಿಶೇಷ ಪಾಲಿಸಿಲೋಕ್ಸೇನ್ ಲೇಪನವು ತುಕ್ಕು ವಿರುದ್ಧ ಸೇತುವೆಯನ್ನು ರಕ್ಷಿಸುತ್ತದೆ. ಸವಾಲಿನ ಸಮುದ್ರ ಪರಿಸರದಲ್ಲಿ ದೀರ್ಘಕಾಲ ಬಾಳಿಕೆ ಬರುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಇದೇ ನೂತನ ಸೇತುವೆಯ ಪಕ್ಕದಲ್ಲಿ 1914 ರಲ್ಲಿ ಬ್ರಿಟಿಷ್ ಇಂಜಿನಿಯರ್‌ಗಳು ನಿರ್ಮಿಸಿದ ಮೂಲ ಪಂಬನ್ ಸೇತುವೆಯು ಷೆರ್ಜರ್ ರೋಲಿಂಗ್ ಲಿಫ್ಟ್ ಸ್ಪ್ಯಾನ್ (Scherzer rolling lift span) ಹೊಂದಿರುವ ಕ್ಯಾಂಟಿಲಿವರ್ ರಚನೆಯಾಗಿತ್ತು. ಒಂದು ಶತಮಾನಕ್ಕೂ ಹೆಚ್ಚು ಕಾಲ, ಇದು ರಾಮೇಶ್ವರ ದ್ವೀಪಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸುವ ಯಾತ್ರಿಕರು, ಪ್ರವಾಸಿಗರು ಮತ್ತು ವ್ಯಾಪಾರಿಗಳಿಗೆ ನಿರ್ಣಾಯಕ ಸಂಪರ್ಕವಾಗಿ ಕಾರ್ಯನಿರ್ವಹಿಸಿತು.

2019 ರಲ್ಲಿ, ಕೇಂದ್ರ ಸರ್ಕಾರವು ಆಧುನಿಕ ಬದಲಿ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿತು. ರೈಲ್ವೆ ಸಚಿವಾಲಯದ ಅಡಿಯಲ್ಲಿ ನವರತ್ನ ಪಿಎಸ್‌ಯು ಆಗಿರುವ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (Rail Vikas Nigam Limited- ಆರ್‌ವಿಎನ್‌ಎಲ್) ನಿರ್ವಹಿಸಿದ ಈ ಯೋಜನೆಯು ಪರಿಸರ ನಿರ್ಬಂಧಗಳು ಮತ್ತು ಲಾಜಿಸ್ಟಿಕಲ್ ಅಡೆತಡೆಗಳಿಂದ ಪಾಕ್ ಜಲಸಂಧಿಯ ಒರಟಾದ ನೀರು ಮತ್ತು ಬಲವಾದ ಗಾಳಿಯವರೆಗೆ ಗಮನಾರ್ಹ ಸವಾಲುಗಳನ್ನು ಎದುರಿಸುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಪ್ರಧಾನ ಮಂತ್ರಿಯವರು ಹೊಸ ಪಂಬನ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದ ನಂತರ, ರಾಮೇಶ್ವರಂ-ತಾಂಬರಂ (ಚೆನ್ನೈ) ಹೊಸ ರೈಲು ಸೇವೆಗೆ ಚಾಲನೆ ನೀಡುವರು. ನೂತನ ಸೇತುವೆಯ ಲಂಬ ಎತ್ತುವ ಸ್ಪ್ಯಾನ್ ಹಾದಿ ಮಾಡಿಕೊಟ್ಟ ನಂತರ ಕರಾವಳಿ ಕಾವಲು ಪಡೆಯ ಹಡಗು ಈ ಹಾದಿಯಲ್ಲಿ ಸಾಗಿ ಧ್ವಜಾರೋಹಣ ಮಾಡಲಾಗುತ್ತದೆ. ಆ ಮೂಲಕ ಸೇತುವೆಯ ಕಾರ್ಯಾಚರಣೆಗೆ ಮೋದಿ ಸಾಕ್ಷಿಯಾಗುತ್ತಾರೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಾಹ್ನ 12.45 ರ ಸುಮಾರಿಗೆ ರಾಮೇಶ್ವರದ ಪ್ರಸಿದ್ಧ ರಾಮನಾಥಸ್ವಾಮಿ ದೇವಸ್ಥಾನಕ್ಕೆ ದರ್ಶನ ಮತ್ತು ಪೂಜೆಗಾಗಿ ಭೇಟಿ ನೀಡಲಿದ್ದಾರೆ ಮತ್ತು ನಂತರ ಮಧ್ಯಾಹ್ನ 1.30 ರ ಸುಮಾರಿಗೆ ತಮಿಳುನಾಡಿನಲ್ಲಿ 8,300 ಕೋಟಿ ರೂಪಾಯಿ ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ಇವುಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಜಾಲತಾಣದಲ್ಲಿ ನೂತನ ಪಂಬನ್ ಸೇತುವೆಯ ವಿಡಿಯೋ ಹಂಚಿಕೊಂಡಿದ್ದಾರೆ.