ಬೆಂಗಳೂರು, ಏ.05 www.bengaluruwire.com : ರಾಜ್ಯದಲ್ಲಿ ಏ.1ರಿಂದ ಡೀಸೆಲ್ (Disel) ಮೇಲಿನ ಮಾರಾಟ ತೆರಿಗೆ (Sales Tax) ಏರಿಕೆಯಿಂದ ಡೀಸೆಲ್ ದರ ಏರಿಕೆಯಾಗಿದೆ. ಇದರ ವಿರುದ್ಧ ಲಾರೀ- ಟ್ರಕ್ ಮಾಲೀಕರು ತಿರುಗಿಬಿದ್ದಿದ್ದಾರೆ. ಏಪ್ರಿಲ್ 15ರ ಬೆಳಗ್ಗೆ 6ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ ನಿರ್ಧರಿಸಿದೆ.
ಹಾಲು- ಮೊಸರು, ವಿದ್ಯುತ್, ಬಸ್ ಪ್ರಯಾಣ ದರ ಸೇರಿದಂತೆ ಅಗತ್ಯ ಬೆಲೆ ಏರಿಕೆಯಿಂದ ಮೊದಲೇ ಬೇಸೆತ್ತಿದ್ದ ಜನರು ತತ್ತರಿಸುತ್ತಿರುವಂತೆಯೇ ಡೀಸೆಲ್ ಬೆಲೆ ಏರಿಕೆಯಿಂದ ಪರೋಕ್ಷವಾಗಿ ಹಲವು ವಸ್ತುಗಳ ದರ ಏರಿಕೆಯಾಗುವ ಸಾಧ್ಯತೆಯಿದೆ. ಇದಲ್ಲದೆ ಲಾರೀ ಮಾಲೀಕರಿಗೂ ಡೀಸೆಲ್ ದರ ಏರಿಕೆ ಬಿಸಿ ತಟ್ಟಿದೆ. ಹೀಗಾಗಿ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ನಗರದಲ್ಲಿ ಲಾರಿ ಮುಷ್ಕರದ ಕುರಿತಂತೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಎಲ್ಲಾ ರೀತಿಯ ಲಾರಿಗಳ ಸಂಚಾರ ಸ್ಥಗಿತಗೊಳಿಸಲಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಲಾರಿಗಳ ಸಂಚಾರ ಬಂದ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಡಿಸೇಲ್ ದರ ತಕ್ಷಣ ಇಳಿಸಬೇಕು, ಟೋಲ್ ದರ ಕಡಿಮೆ ಮಾಡಬೇಕು, ಗಡಿ ಚೆಕ್‌ಪೋಸ್ಟ್ ತೆರವು ಮಾಡಬೇಕು, ವಾಹನಗಳ ದೃಢತಾ ಪ್ರಮಾಣಪತ್ರ (Fitness Certificate) ಶುಲ್ಕ ಇಳಿಸಬೇಕು ಹಾಗೂ ಸರಕು ವಾಹನಗಳ ಮುಕ್ತ ಓಡಾಟಕ್ಕೆ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ. ತಮ್ಮ ಈ ಐದು ಬೇಡಿಕೆಗಳನ್ನು ಈಡೇರಿಸಲು ಏಪ್ರಿಲ್ 14ರವರೆಗೆ ಗಡುವು ನೀಡಲಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಏ.15 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು.

ನಮ್ಮ ಬೇಡಿಕೆ ಈಡೇರಿಸುವವರೆಗೂ ಲಾರಿಗಳ ಸಂಚಾರ ಬಂದ್ ಆಗಲಿದೆ. ಕೇವಲ ಲಾರಿಗಳಷ್ಟೇ ಅಲ್ಲ ಏರ್‌ಪೋರ್ಟ್ ಟ್ಯಾಕ್ಸಿಗಳು, ಓಲಾ, ಊಬರ್‌ಗಳಿಗೂ ಬಂದ್‌ಗೆ ಬೆಂಬಲಿಸಲು ಮನವಿ ಮಾಡಲಾಗಿದೆ. ಗಡಿಗಳಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಹೊರ ರಾಜ್ಯಗಳ ಲಾರಿ ಮತ್ತು ಟ್ರಕ್ ಗಳು ನಿಂತು ಬಂದ್ ಗೆ ಬೆಂಬಲ ನೀಡಲಿವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ.

ಮುಷ್ಕರ ಸ್ವರೂಪ ಹೇಗಿರುತ್ತೆ? :
ರಾಜ್ಯದಲ್ಲಿ ಒಟ್ಟು 6 ಲಕ್ಷ ಲಾರಿಗಳ ಸಂಚಾರ ನಿಲ್ಲಿಸಲಾಗುತ್ತೆ. ಜಲ್ಲಿ, ಮರಳು, ಗೂಡ್ಸ್ ವಾಹನಗಳು ಮುಷ್ಕರದ ವೇಳೆ ಓಡಾಡಲ್ಲ. ಎಪಿಎಂಸಿ ಲಾರಿಗಳು, 3 ಲಕ್ಷ ಗೂಡ್ಸ್ ವಾಹನಗಳ ಓಡಾಟ ಬಂದ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಡೀಸೆಲ್ ಬೆಲೆ ಏರಿಕೆ ಬಿಸಿ :
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡಿಸೆಲ್ ಬೆಲೆ 2 ರೂಪಾಯಿಯಷ್ಟು ಹೆಚ್ಚಳವಾಗಿದೆ. ಏಪ್ರಿಲ್ 1ರಿಂದಲೇ ದರ ಹೆಚ್ಚಳ ಜಾರಿಗೆ ಬಂದಿದೆ. ದರ ಹೆಚ್ಚಳದ ನಂತರ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 91.02 ರೂಪಾಯಿ ಆಗಿದೆ. ಒಂದೆಡೆ ಡೀಸೆಲ್ ದರ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೆ ಮತ್ತೊಂದೆಡೆ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.