ಬೆಂಗಳೂರು, ಏ.5 www.bengaluruwire.com : ಮೀಸಲಾತಿ ವಿರುದ್ಧ ಮಾತಾಡುತ್ತಿದ್ದವರೆಲ್ಲಾ ಈಗ ಮೀಸಲಾತಿ ಪಡೆದು ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಈಗ ಮೀಸಲಾತಿ ವಿರೋಧಿಸುವವರು ಯಾರೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶನಿವಾಋ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಪ್ರೇಮಿ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಅವರು ಸ್ಪಷ್ಟವಾದ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಇಡಬ್ಲ್ಯುಎಸ್ ಶೇ.10 ಮೀಸಲಾತಿಯಿಂದ ಎಲ್ಲರೂ ಫಲಾನುಭವಿಗಳಾಗಿದ್ದಾರೆ :

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರ್ಥಿಕವಾಗಿ ಹಿಂದುಳಿದ ವರ್ಗ (EWS) ಹೆಸರಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ ಬಳಿಕ ಎಲ್ಲರೂ ಮೀಸಲಾತಿ ಫಲಾನುಭವಿಗಳೇ ಆಗಿಬಿಟ್ಟಿದ್ದಾರೆ. ಸುಪ್ತ ಪ್ರತಿಭೆ ಹೊರಗೆ ತರುವ ಶಿಕ್ಷಣದಿಂದ ಯುವ ಸಮೂಹ ಸ್ವಾಭಿಮಾನಿಗಳಾಗಿ ಬೆಳೆಯಲು ಸಾಧ್ಯ. ನಮ್ಮ ರಾಜ್ಯದಲ್ಲಿ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಎಸ್ ಸಿ-ಟಿಎಸ್ ಪಿ (SCP-TSP) ಕಾಯ್ದೆ ಜಾರಿಯಲ್ಲಿದೆ. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವ ಬಿಜೆಪಿ ಅವರ ಆಡಳಿತದ ರಾಜ್ಯಗಳಲ್ಲಿ ಈ ಕಾಯ್ದೆ ತಂದೇ ಇಲ್ಲ ಏಕೆ? ಬರೀ ಭಾಷಣ ಮಾಡಿದರೆ ಸಾಕಾ, ಅದು ಕ್ರಿಯೆಯಲ್ಲಿ ಕಾಣಬಾರದಾ ಎಂದು ಪ್ರಶ್ನಿಸಿದರು.
ನಾವು ಜಾರಿ ಮಾಡಿರುವ ಐದೂ ಗ್ಯಾರಂಟಿಗಳೂ ಜನರ ಕೈಯಲ್ಲಿ ಹಣ ಇರಬೇಕು. ಕೊಳ್ಳುವ ಶಕ್ತಿ ಹೆಚ್ಚಾಗಬೇಕು ಎನ್ನುವ ನಮ್ಮ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸಿದೆ. ಜಾತಿ ಸೃಷ್ಟಿಸಿದವರು ನಾವಲ್ಲ. ಆದರೆ ಈ ಜಾತಿಯ ಅಸಮಾನತೆಗೆ ಬಲಿ ಆಗಿರುವವರು ನಾವು. ಜಾತಿ ಇರುವ ವರೆಗೂ ಸಮಾನ ಅವಕಾಶಗಳು ಸಿಗುವುದಿಲ್ಲ. ಏಕೆಂದರೆ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಎಂದರು.
ಬಾಬು ಜಗಜೀವನ್ ರಾಮ್ ಅವರು ಕೇಂದ್ರ ಸಚಿವರಾಗಿ ಹಸಿರು ಕ್ರಾಂತಿ ಮಾಡಿ ಎಲ್ಲರಿಗೂ ಆಹಾರ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಮಗೆಲ್ಲಾ ಹಬ್ಬದ ದಿನ ಮಾತ್ರ ಅನ್ನ ಸಿಗುತ್ತಿತ್ತು. ಈ ಪರಿಸ್ಥಿತಿ ಯಾರಿಗೂ ಬರಬಾರದು. ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ಅನ್ನ ಭಾಗ್ಯ ಜಾರಿ ಮಾಡಿದೆ ಎಂದು ವಿವರಿಸಿದರು.
ಜಗಜೀವನ್ ರಾಮ್ ಮತ್ತು ಅಂಬೇಡ್ಕರ್ ಇಬ್ಬರಿಗೂ ಸಮಾಜದ ಕಷ್ಟ ಗೊತ್ತಿತ್ತು. ಈ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವಾಗಿ ಸಂವಿಧಾನ ಬಂತು, ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಮತ್ತೊಬ್ಬ ಅಂಬೇಡ್ಕರ್, ಜಗ ಜೀವನ್ ರಾಮ್ ನಮಗೆ ಸಿಗುವುದಿಲ್ಲ. ಹೀಗಾಗಿ ಇವರು ಬಿಟ್ಟು ಹೋಗಿರುವ ಚಿಂತನೆ ಮತ್ತು ಕಾಳಜಿಗಳನ್ನು ಪಾಲಿಸಬೇಕು ಎಂದರು.
ಒಳ ಮೀಸಲಾತಿ ಜಾರಿ ಖಚಿತ :
ಒಳ ಮೀಸಲಾತಿ ಬಗ್ಗೆ ಅನುಮಾನ ಬೇಡ. ಜಾರಿ ಮಾಡೇ ಮಾಡುತ್ತೇವೆ. ನೀವು ಬೇಡ ಅಂದರೂ ನಾವು ಜಾರಿ ಮಾಡುತ್ತೇವೆ. ಸುಪ್ರೀಂಕೋರ್ಟ್ ಆದೇಶವನ್ನು ನಾವು ಖಚಿತವಾಗಿ ಪಾಲಿಸುತ್ತೇವೆ. ಜಸ್ಟೀಸ್ ನಾಗಮೋಹನ್ ದಾಸ್ ಅವರು ಎರಡು ತಿಂಗಳ ಕಾಲಾವಧಿ ಕೇಳಿದ್ದಾರೆ. ನಾವು ಕೊಟ್ಟಿದ್ದೇವೆ. ಬಳಿಕ ಯಾರಿಗೂ ಅನ್ಯಾಯ ಆಗದಂತೆ ಜಾರಿ ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.






















