ಬೆಂಗಳೂರು, ಮಾ.29 www.bengaluruwire.com : ನಗರದ ಜವಾಹರಲಾಲ್ ನೆಹರು ತಾರಾಲಯ (Jawaharlal Nehru Planetarium – ಜೆಎನ್‌ಪಿ) ತನ್ನ ಜನಪ್ರಿಯ ಸ್ಕೈ-ಥಿಯೇಟರ್ ಪ್ರದರ್ಶನದ ಶುಲ್ಕವನ್ನು ಏ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ.
ಹೊಸ ದರ ಪರಿಷ್ಕರಣೆಯು ಎಲ್ಲಾ ವಿಭಾಗಗಳಲ್ಲೂ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ನೆಹರು ತಾರಾಲಯದಲ್ಲಿ ನಡೆಯುತ್ತಿರುವ ವಿಜ್ಞಾನ ಶಿಕ್ಷಣ ಕಾರ್ಯಕ್ರಮಗಳಿಗೆ ಹೆಚ್ಚಿನ ಬಲ ಬರಲಿದೆ ಎಂದು ಬೆಂಗಳೂರು ನೆಹರು ತಾರಾಯಲಯದ ನಿರ್ದೇಶಕರಾದ ಡಾ.ಬಿ.ಆರ್.ಗುರುಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಕೈ-ಥಿಯೇಟರ್ ಪ್ರದರ್ಶನದ ಶುಲ್ಕದ ವಿವರ :
ವಯಸ್ಕರ ಟಿಕೆಟ್ ಬೆಲೆಗಳನ್ನು ಪ್ರತಿ ವ್ಯಕ್ತಿಗೆ ಎಪ್ಪತ್ತೈದು ರೂಪಾಯಿ (75₹)ಗಳಿಂದ ನೂರು ರೂಪಾಯಿ (100₹)ಗಳಿಗೆ ಹೆಚ್ಚಿಸಲಾಗಿದೆ. ಹದಿನಾರು ವರ್ಷದೊಳಗಿನ ಮಕ್ಕಳು ಈತನಕ ಐವತ್ತು ರೂಪಾಯಿಗಳನ್ನು ಪಾವತಿಸುತ್ತಿದ್ದರು, ಏ.1ರಿಂದ ಅರವತ್ತು ರೂಪಾಯಿಗಳನ್ನು ಪಾವತಿಸಬೇಕಾಗಿದೆ. ಸಂಘಟಿತ ಶಾಲಾ ಗುಂಪುಗಳಿಗೆ ಈತನಕ ಪ್ರತಿ ವಿದ್ಯಾರ್ಥಿಗೆ 40 ರೂ.ಗಳಿತ್ತು, ಅದನ್ನು ಈಗ ಐವತ್ತು ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಅಂದರೆ 10ರೂ. ಏರಿಕೆ ಮಾಡಲಾಗಿದೆ. ಈ ಹಿಂದೆ 2020ನೇ ಇಸವಿಯಲ್ಲಿ ಕೊನೆಯದಾಗಿ ಪ್ರವೇಶ ಶುಲ್ಕ ದರ ಪರಿಷ್ಕರಣೆ ಮಾಡಲಾಗಿತ್ತು.

ಇನ್ನೂರ ಹತ್ತು ಸೀಟುಗಳ ಬ್ಲಾಕ್ ಬುಕಿಂಗ್ ಮಾಡುವ ಶಾಲಾ ಗುಂಪುಗಳಿಗೆ ಪ್ರಸ್ತುತ 8,000 ₹ ಗಳಿಂದ 10,000₹ ಗಳನ್ನು ವಿಧಿಸಲಾಗುತ್ತದೆ. ಅಂದರೆ ಎರಡು ಸಾವಿರ ರೂಪಾಯಿಗಳ ಹೆಚ್ಚಳ ಮಾಡಲಾಗಿದೆ. ಆದರೆ ಇತರ ಗುಂಪುಗಳಿಗೆ 20,000₹ ವಿಧಿಸಲಾಗುತ್ತದೆ. ಇದು ಹಿಂದಿನ ದರಕ್ಕಿಂತ ಐದು ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಶನ್ (Bangalore Association for Science Education – BASE) ನಿರ್ವಹಿಸುವ ಈ ತಾರಾಲಯವು, ತನ್ನ ಪ್ರದರ್ಶನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮತ್ತು ಆಕರ್ಷಕ ಶೈಕ್ಷಣಿಕ ಅನುಭವಗಳನ್ನು ಒದಗಿಸುವುದನ್ನು ಮುಂದುವರಿಸುವ ಅಗತ್ಯತೆಗಾಗಿ ಈ ದರ ಪರಿಷ್ಕರಣೆ ಅಗತ್ಯವಾಗಿತ್ತು ಎಂದು ಶುಲ್ಕ ಏರಿಕೆಯನ್ನು ಸಮರ್ಥಿಸಿಕೊಂಡಿದೆ.
ಜೆಎನ್ ಪಿ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಉಳಿದಿದೆ. ದಶಕಗಳಿಂದ ನೆಹರು ತಾರಾಲಯವು, ಎಲ್ಲಾ ವಯಸ್ಸಿನ ಸಂದರ್ಶಕರಲ್ಲಿ ವೈಜ್ಞಾನಿಕ ಕುತೂಹಲವನ್ನು ಬೆಳೆಸಲು ಸಮರ್ಪಿತವಾದ ಸಂಸ್ಥೆಯಾಗಿ ಲಕ್ಷಾಂತರ ಬಾಹ್ಯಾಕಾಶ ಕುತೂಹಲಿಗಳ ಹಂಬಲವನ್ನು ತಣಿಸುತ್ತಲೇ ಬಂದಿದೆ.