ಬೆಂಗಳೂರು, ಮಾ.29 www.bengaluruwire.com : ಮಹತ್ವದ ಬೆಳವಣಿಗೆಯಲ್ಲಿ, ಔಷಧಿ ವಿತರಣೆ (Medicine Delivery)ಗಾಗಿ ಸ್ಕೈ ಏರ್ (SKY Air)ನ ವಾಣಿಜ್ಯ ಡ್ರೋನ್ (Commercial Drone) ಸೇವೆಯು ಗುರುಗ್ರಾಮ್ (Gurugram)ನಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಇದೀಗ ಈ ಸೇವೆಯು ಬೆಂಗಳೂರಿನಲ್ಲಿ ಆರಂಭವಾಗಿದೆ.
ನಗರದಲ್ಲಿ ವಾಹನ ದಟ್ಟಣೆಯಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಚರಿಸಲು ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ, ವಾಣಿಜ್ಯ ಡ್ರೋನ್ ಬಳಿಸಿ ಔಷಧಿ ಪೂರೈಸುವ ಸೇವೆ ಆರಂಭವಾಗಿದೆ. ಇದು ತುರ್ತು ಸಂದರ್ಭದಲ್ಲಿ ಅಗತ್ಯ ಔಷಧಿ, ವೈದ್ಯಕೀಯ ಪರಿಕರಗಳನ್ನು ಪೂರೈಸುವಲ್ಲಿ ಮಹತ್ವದ ಕಾರ್ಯವಾಗಿದೆ.

ಗುರುಗ್ರಾಮ್‌ನಲ್ಲಿ ಪ್ರಾರಂಭಿಸಲಾದ ಡ್ರೋನ್ ವಿತರಣಾ ಸೇವೆಯು ಕಳೆದ ವರ್ಷದಲ್ಲಿ 10 ಲಕ್ಷಗಿಂತಲೂ ಹೆಚ್ಚು ಡೆಲವರಿಗಳನ್ನು ಪೂರ್ಣಗೊಳಿಸಿದೆ. ಕೇವಲ 7 ನಿಮಿಷಗಳ ವಿತರಣಾ ಸಮಯದೊಂದಿಗೆ. ಸ್ಕೈ ಏರ್‌ನ ಸ್ವಾಮ್ಯದ ತಂತ್ರಜ್ಞಾನದ ಮೂಲಕ ಈ ಸಾಧನೆಯನ್ನು ಸಾಧಿಸಲಾಗಿದೆ. ಈ ಡ್ರೋನ್‌ಗಳು ಸೇನಾ ನೆಲೆಯನ್ನು ಹೊರತುಪಡಿಸಿ, ಅನುಮೋದಿತ ಮಾರ್ಗಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸುವ ಮೂಲಕ ನೆಲಮಟ್ಟದಿಂದ 120 ಮೀಟರ್ ಎತ್ತರದಲ್ಲಿ ಹಾರಲು ಅವಕಾಶವಿದೆ.
ವಾಣಿಜ್ಯ ಡ್ರೋನ್ ಹೇಗೆ ಕಾರ್ಯನಿರ್ವಹಿಸುತ್ತದೆ?:

ಸ್ಕೈ ಶಿಪ್ ಒನ್ ಎಂದು ಕರೆಯಲ್ಪಡುವ ಡ್ರೋನ್ ಅನ್ನು ಹೆಚ್ಚಿನ ಸಾಮರ್ಥ್ಯದ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರತಿ ಟ್ರಿಪ್‌ಗೆ 10 ಕೆಜಿ ವರೆಗೆ ಸಾಗಿಸಬಹುದು. ಅದರ ಗಮ್ಯಸ್ಥಾನವನ್ನು ತಲುಪಿದ ನಂತರ, ಈ ವಾಣಿಜ್ಯ ಡ್ರೋನ್, 20 ಮೀಟರ್ ಎತ್ತರದಿಂದ ವಸ್ತುಗಳನ್ನು ಇಳಿಸುತ್ತದೆ. ಈ ಕಾರ್ಯಕ್ಕಾಗಿ ಸ್ಕೈ ವಿಂಚ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ಯಾಕೇಜ್ ಅನ್ನು ಗೊತ್ತುಪಡಿಸಿದ ಸ್ಕೈ ಪಾಡ್ ಅಥವಾ ಡ್ರಾಪ್ ವಲಯಕ್ಕೆ ಎಚ್ಚರಿಕೆಯಿಂದ ಇಳಿಸುತ್ತದೆ ಎಂದು ಸ್ಕೈ ಏರ್ ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಕಿತ್ ಕುಮಾರ್ ಹೇಳಿದ್ದಾರೆ.

ಗುರುಗ್ರಾಮದ ನಂತರ ಬೆಂಗಳೂರಿಗೆ ವಿಸ್ತರಣೆ :
ಗುರುಗ್ರಾಮದಲ್ಲಿ ಸೇವೆಯ ಯಶಸ್ಸಿನೊಂದಿಗೆ, ಸ್ಕೈ ಏರ್ ಈಗ ತನ್ನ ಕಾರ್ಯಾಚರಣೆಯನ್ನು ಬೆಂಗಳೂರಿಗೆ ವಿಸ್ತರಿಸಿದೆ. ಕೋಣನಕುಂಟೆ ಮತ್ತು ಕನಕಪುರ ರಸ್ತೆ ಪ್ರದೇಶಗಳಲ್ಲಿ ಈಗಾಗಲೇ ಸೇವೆ ಲಭ್ಯವಿದೆ. ಸ್ಕೈ ಏರ್‌ನ ದಕ್ಷ ಡ್ರೋನ್ ತಂತ್ರಜ್ಞಾನದ ಮೂಲಕ ಈ ಪ್ರದೇಶಗಳ ನಿವಾಸಿಗಳು ತಮ್ಮ ಔಷಧಿ ವಿತರಣೆಯನ್ನು 7 ನಿಮಿಷಗಳಲ್ಲಿ ಪಡೆಯುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಈ ಸೌಲಭ್ಯವನ್ನು ಬನ್ನೇರುಘಟ್ಟ ಪ್ರದೇಶಕ್ಕೆ ವಿಸ್ತರಿಸಲಿದೆ. ಇದರ ಜೊತೆಗೆ ಆಹಾರವನ್ನೂ ಡ್ರೋನ್ ಮೂಲಕ ತಲುಪಿಸುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ ಎಂದು ಅಂಕಿತ್ ತಿಳಿಸಿದ್ದಾರೆ.
ಪರಿಸರ ಪ್ರಯೋಜನಗಳು:
ಸ್ಕೈ ಏರ್‌ನ ಡ್ರೋನ್ ವಿತರಣಾ ಸೇವೆಯು ಸಮಯವನ್ನು ಉಳಿಸುವುದಲ್ಲದೆ ಇಂಗಾಲದ ಹೊರಸೂಸುವಿಕೆ (Carbon emissions)ಯನ್ನು ಕಡಿಮೆ ಮಾಡುತ್ತದೆ. ಕಂಪನಿಯ ಪ್ರಕಾರ, ಪ್ರತಿ ಡ್ರೋನ್ ವಿತರಣೆಯು ಸಾಂಪ್ರದಾಯಿಕ ರಸ್ತೆ ಆಧಾರಿತ ವಿಧಾನಗಳಿಗೆ ಹೋಲಿಸಿದರೆ 520 ಗ್ರಾಂ ಇಂಗಾಲದ ಹೊರಸೂಸುವಿಕೆಯನ್ನು ಉಳಿಸುತ್ತದೆ.
ಸ್ಕೈ ಏರ್‌ನ ನವೀನ ಡ್ರೋನ್ ತಂತ್ರಜ್ಞಾನದೊಂದಿಗೆ, ಔಷಧ ವಿತರಣೆಯ ಭವಿಷ್ಯವು ಭರವಸೆಯಂತೆ ಕಾಣುತ್ತದೆ. ಕಂಪನಿಯು ತನ್ನ ಕಾರ್ಯಾಚರಣೆಯನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸುವುದನ್ನು ಮುಂದುವರಿಸುವುದರಿಂದ, ನಿವಾಸಿಗಳು ವೇಗವಾದ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಔಷಧ ವಿತರಣಾ ಸೇವೆಗಳನ್ನು ನಿರೀಕ್ಷಿಸಬಹುದು.