ಬೆಂಗಳೂರು, ಮಾ.29 www.bengaluruwire.com : ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ನಡೆಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಆಯವ್ಯಯ ಇಂದು ಬೆಳಗ್ಗೆ 11ಕ್ಕೆ ಮಂಡನೆಯಾಗುತ್ತಿದೆ. ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಬೆಂಗಳೂರು ವೈರ್ ನಲ್ಲಿ ನೋಡಬಹುದಾಗಿದೆ.
ನಗರದ ಸರ್.ಪುಟ್ಟಣ್ಣ ಚೆಟ್ಟಿ ಪುರಭವನ (Town Hall) ದಲ್ಲಿ ಆಡಳಿತಗಾರರು ಆದ ಉಮಾಶಂಕರ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರ ಉಪಸ್ಥಿತಿಯಲ್ಲಿ, ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಡಾ.ಹರೀಶ್ ಕುಮಾರ್ ಮಂಡಿಸುತ್ತಿದ್ದಾರೆ. ಈ ಬಾರಿ 19 ರಿಂದ 20,000 ಕೋಟಿ ರೂ. ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ.
ನಗರದ ಬಿಬಿಎಂಪಿ 2025-26ನೇ ಸಾಲಿನ ಆಯವ್ಯಯ ಅಂದಾಜು ಮಂಡನೆಯ ನಂತರ ಪಾಲಿಕೆಯ ವೆಬ್ ಸೈಟ್ https://bbmp.gov.in ನಲ್ಲಿ ಬಜೆಟ್ ಪ್ರತಿ ಲಭ್ಯವಾಗಲಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಕೇವಲ ಅಧಿಕಾರಿಗಳೇ 2025-26ನೇ ಸಾಲಿನ ಬಜೆಟ್ ಸೇರಿದಂತೆ ಸತತ ಐದನೇ ವರ್ಷ ಆಯವ್ಯಯ ಮಂಡಿಸುತ್ತಿದ್ದಾರೆ. ಪ್ರಸ್ತುತ ಆರ್ಥಿಕ (2024-25) ವರ್ಷದಲ್ಲಿ 12,369 ಕೋಟಿ ರೂ. ಬಜೆಟ್ ಮಂಡಿಸಿದ್ದ ಪಾಲಿಕೆಯಲ್ಲಿ ಬಳಿಕ ಸರ್ಕಾರ ಹೆಚ್ಚುವರಿಯಾಗಿ ಅನುದಾನ ಪ್ರಕಡಿಸಿದ್ದರಿಂದ 13,114 ಕೋಟಿ ರೂ. ಗಳಿಗೆ ವಿಸ್ತರಿಸಲಾಗಿತ್ತು.
2024-25ನೇ ಸಾಲಿನಲ್ಲಿ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದೇ ಬಂತು. ಆಯವ್ಯಯದಲ್ಲಿನ ಹೆಚ್ಚಿನ ಘೋಷಣೆಗಳು ಅನುಷ್ಠಾನವಾಗಿಲ್ಲ ಎಂಬ ದೂರುಗಳಿವೆ. 2023-24ನೇ ಸಾಲಿನಲ್ಲಿ ಒಟ್ಟು11,163 ಕೋಟಿ ರೂ. ಮೊತ್ತದ ಆಯವ್ಯಯವನ್ನು ಹಣಕಾಸು ವಿಭಾಗದ ಆಗಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು ಮಾರ್ಚ್ 2ರಂದು ಮಂಡಿಸಿದ್ದರು. 6.14 ಕೋಟಿ ರೂ. ಹಣ ಉಳಿತಾಯ ಬಜೆಟ್ ಅಗಲಿದೆ ಎಂದಿದ್ದರು.

ಆದರೆ, ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳು, ಕಾಮಗಾರಿಗಳು ಹಾಗೂ ಕಾರ್ಯಕ್ರಮಗಳು ಶೇ. 22-25ರಷ್ಟೂ ಅನುಷ್ಠಾನವಾಗಿರಲಿಲ್ಲ. ಹಲವು ಯೋಜನೆಗಳೂ ಆರ್ಥಿಕ ವರ್ಷ ಮುಕ್ತಾಯದ ಹಂತ ಸಮೀಪಿಸುತ್ತಿದ್ದರೂ ಜಾರಿಗೆ ಬಂದಿರಲಿಲ್ಲ.
