ಬೆಂಗಳೂರು, ಮಾ.28 www.bengaluruwire.com : ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಶುಕ್ರವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ದೂರದರ್ಶನದ ವಾರ್ತಾ ವಾಚಕರಾದ ಸಬೀಹಾ ಬಾನು ಹಾಗೂ ಫೊಟೋ ಜರ್ನಲಿಸ್ಟ್ ಪೂರ್ಣಿಮಾ ರವಿ, ಸಫಾಯಿ ಕರ್ಮಚಾರಿಗಳ ಹೋರಾಟಗಾರ್ತಿ ಪದ್ಮಾ ಕೋಲಾರ ಅವರಿಗೆ ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಮಹಿಳೆಯರ ಮೇಲೆ ದೌರ್ಜನ್ಯ, ಕೌಟುಂಬಿಕ ಕಲಹಗಳಲ್ಲಿ ಸಾಕಷ್ಟು ಶೋಷಣೆ ಒಳಗಾಗುತ್ತಿರುವವರ ಬಗ್ಗೆ ನಮಗೆ ಪರಿಚಯ ಇಲ್ಲದವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲೂ ಪುರುಷರ ವಿಕೃತಿ ಕಾಮೆಂಟ್ ಗಳಲ್ಲಿ ವ್ಯಕ್ತವಾಗಿದೆ. ಇದನ್ನು ಗಮನಿಸಿದರೆ ಸಮಾಜ ಎಷ್ಟು ಕಲುಷಿತವಾಗಿದೆ ಎಂಬ ಬಗ್ಗೆ ಭಯವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಕ್ರೌರ್ಯವನ್ನು, ಹೆಣ್ಣುಮಕ್ಕಳಿಗೆ ಮಾನಸಿಕ ಹಿಂಸೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರುಗಳೇ ದಾಖಲಾಗುವುದಿಲ್ಲ ಇವುಗಳೆಲ್ಲದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ಸಂವಿಧಾನದ ವಿಧಿ 32 ಸಂವಿಧಾನದ ಆತ್ಮ, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ರಕ್ಷಣೆ ಈ ವಿಧಿಯಡಿ ನೀಡಲಾಗಿದೆ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ಕಡೆ ಹೇಳುತ್ತಾರೆ. ಈ ವಿಧಿಯೇನಾದರೂ ತೆಗೆದು ಹಾಕಿದರೇ ಸಂವಿಧಾನವನ್ನೇ ಬುಡಮೇಲು ಮಾಡಿದಂತೆ ಎಂದು ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸಲು ಇತ್ತೀಚಿನ ಕೆಲವು ಘಟನೆಗಳನ್ನು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್, ಈ ಸಮಾಜದಲ್ಲಿ ಪುರುಷ- ಮಹಿಳೆಯರ ಸಮಾನತೆ ಎಂಬುದು ಸೃಷ್ಟಿಯೇ ನೀಡಿದೆ. ಸಮ ಸಮಾಜದ ಅಗತ್ಯತೆಯ ಕನಸನ್ನು ಬಸವಣ್ಣ ಕಂಡಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆಯ ಹಕ್ಕನ್ನು ನೀಡಿದ್ದಾರೆ. ಮಹಿಳೆ ಎಂಬುದೇ ಘನತೆ. ಸಮಾಜದಲ್ಲ ಇದರ ಅವಶ್ಯಕತೆಯಿದೆ. ಈಗಿನ ದಿನಗಳಲ್ಲಿ ಹೋರಾಟದ ಮೂಲಕ ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಮಾಧ್ಯಮಗಳಿಗೆ ಬರುವ ಸ್ತ್ರೀಯರ ಸಂಖ್ಯೆ ಕಡಿಮೆಯಿದೆ. ಈ ಸುದ್ದಿಮನೆಗಳಲ್ಲಿ ಮಹಿಳೆಯರು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಪತ್ರಕರ್ತೆಯರ ಸಂಘದ ಕಾರ್ಯನಿರ್ವಹಣೆಗಾಗಿ ಸರ್ಕಾರದಿಂದ ಜಾಗ ಒದಗಿಸಲು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ಕೆ.ವಿ.ಪ್ರಭಾಕರ್ ಸೂಕ್ತ ಕ್ರಮ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಶಿವಾನಂದ ತಗಡೂರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ಕೆ.ವಿ.ಪ್ರಭಾಕರ್ ಮಾತನಾಡುತ್ತಾ, ಕರ್ನಾಟಕ ಪತ್ರಕರ್ತೆಯರ ಸಂಘದ ಕಾರ್ಯನಿರ್ವಹಣೆಗಾಗಿ ಸರ್ಕಾರದಿಂದ ಜಾಗ ಒದಗಿಸಲು ಶಿವಾನಂದ ತಗಡೂರ್ ಅವರು ಕೋರಿದ್ದಾರೆ, ಈ ಬಗ್ಗೆ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ. ವಾರ್ತಾ ವಾಚನಕ್ಕೆ ಮಹಿಳೆಯರು ಸುಂದರರಾಗಿರಬೇಕು ಎಂದು ಷರತ್ತು ಹಾಕುತ್ತಾರೆ. ಪುರುಷರಿಗೆ ಆ ಷರತ್ತು ಹಾಕುವುದಿಲ್ಲ ಯಾಕೆ? ಎಂದು ಪ್ರಶ್ನಸುತ್ತಾ ವಾರ್ತಾ ವಾಚಕರಿಗೆ ಭಾಷಾ ಶುದ್ಧಿ, ಸ್ಪಷ್ಟವಾಗಿ ಮಾತನಾಡಬೇಕು.
ಮಾಧ್ಯಮಗಳಲ್ಲಿ ನಿರ್ಣಾಯಕ ಹುದ್ದೆಗಳಲ್ಲಿ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪರ್ಯಾಯ ಮಾಧ್ಯಮಗಳಾದ ಯೂಟ್ಯೂಬ್, ಫೇಸ್ ಬುಕ್ ಗಳಲ್ಲಿ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಪತ್ರಕರ್ತೆಯರ ಸಂಘದಿಂದ ಪ್ರತಿವರ್ಷ ಎರಡು ಪ್ರಶಸ್ತಿಯನ್ನು ಸಾಧಕಿಯರಿಗೆ ಸ್ಥಾಪನೆ ಮಾಡಿ. ಇದಕ್ಕೆ ಸರ್ಕಾರದ ಕಡೆಯಿಂದ ಅನುದಾನ ಕೊಡಿಸುತ್ತೇನೆ. ಕಡಿಮೆ ಸಂಖ್ಯೆಯಲ್ಲಿ ಹಿರಿಯ ಮಹಿಳಾ ಪತ್ರಕರ್ತರಿಗೆ ಸುಲಭವಾಗಿ ಪಿಂಚಣಿ ಲಭ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಪ್ರಭಾಕರ್ ಭರವಸೆ ನೀಡಿದರು.
ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ, ಹಿರಿಯ ಪತ್ರಕರ್ತರಾದ ಈಶ್ವರ್ ದೈತೋಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.