ಬೆಂಗಳೂರು, ಮಾ.28 www.bengaluruwire.com : ವೈದ್ಯಕೀಯ ಚಿಕಿತ್ಸೆಗೆ ಮೇಯರ್ ಅನುದಾನ, ವಿವಿಧ ರೀತಿಯ ಮನೆ ಕಂದಾಯ ಸಮಸ್ಯೆ, ನೌಕರರ ಉದ್ಯೋಗಕ್ಕೆ ಸಂಬಂಧಿಸಿದ ಅಹವಾಲು….ಹೀಗೆ ಯಾರೇ ತಮಗೆ ಸಮಸ್ಯೆ ಎಂದು ಬಂದರೂ ಪಾಲಿಕೆ ಕಚೇರಿಯಲ್ಲಿ ಸಮಾಧಾನದಿಂದ ಅವರನ್ನು ಕೂಡಿಸಿ, ಅವರ ಅಳಲನ್ನು ಆಲಿಸಿ ಅವರಿಗೆ ಸಂತೃಪ್ತಿಯಾಗುವಂತಹ ಪರಿಹಾರ ಒದಗಿಸುವ ಅವರ ನಿರಪೇಕ್ಷೆಯಿಂದ ಮಾಡುತ್ತಿದ್ದ ಆ ಕಾಯಕ ಒಂದೆರಡು ದಿನಕ್ಕೆ ಸೀಮಿತವಾಗಿರಲಿಲ್ಲ…. ನಿತ್ಯ ನಿರಂತರವಾಗಿತ್ತು …..!!
ತಮ್ಮ 30 ವರ್ಷಗಳ ಕಾಯಕದಲ್ಲಿ ಸಹದ್ಯೋಗಿಗಳು, ಮೇಲಾಧಿಕಾರಿಗಳು, ಸಾರ್ವಜನಿಕರು ಹೀಗೆ ಸಾವಿರಾರು ಜನರ ಪ್ರೀತಿ, ಗೌರವವನ್ನು ಸಂಪಾದಿಸಿದ ಬಿಬಿಎಂಪಿಯ ಆಡಳಿಗಾರರ ಆಪ್ತಕಾರ್ಯದರ್ಶಿ ಹಾಗೂ ಸಹಾಯಕ ಕಂದಾಯ ಅಧಿಕಾರಿ ಜಿ.ಎಲ್.ನಾರಾಯಣಸ್ವಾಮಿ ಇದೇ ಮಾ.29 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ. ಈ ವಿಷಯವೇ ಅವರ ಅಪಾರ ಸಹದ್ಯೋಗಿಗಳು, ಇವರಿಂದ ಸಹಾಯ ಪಡೆದ ನೂರಾರು ಮಂದಿಗೆ ಸಾಕಷ್ಟು ಬೇಸರ ಮೂಡಿಸಿದೆ. ನಮ್ಮೊಡನೆ ಸದಾ ಹಸನ್ಮುಖರಾಗಿ ಕೆಲಸ ಮಾಡಿಕೊಂಡಿದ್ದ ನಾರಾಯಣಸ್ವಾಮಿ ರಿಟೈರ್ ಆಗುತ್ತಿದ್ದಾರೆ ಎಂಬುದು ಜೀರ್ಣಿಸಿಕೊಳ್ಳಲಾಗುತ್ತಿಲ್ಲ.
ನಿವೃತ್ತಿಗೆ ಒಂದು ವಾರ ಮುಂಚಿನಿಂದಲೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಅವರ ಚೇಂಬರ್ ಗೆ ಸಾಕಷ್ಟು ಮಂದಿ ಆಗಮಿಸಿ ನಾರಾಯಣಸ್ವಾಮಿ ಅವರನ್ನು ಹಾರ, ಶಾಲು ಹಾಕಿ, ಹೂಗುಚ್ಛ ನೀಡಿ ಸನ್ಮಾನಿಸುತ್ತಿರುವುದನ್ನು ಗಮನಿಸಿದರೆ ಇವರ ಜೀವನಪ್ರೀತಿ, ಮಾನವತೆ ಹಾಗೂ ಪರೋಪಕಾರ ಗುಣವನ್ನು ಮೆಚ್ಚಿ ಜನರು ಇವರನ್ನು ಅಭಿನಂದಿಸುತ್ತಿರುವುದು ಸಾಕ್ಷಿಯಾಗಿದೆ.
30 ವರ್ಷಗಳಲ್ಲಿ 29 ಬಾರಿ ವರ್ಗಾವಣೆ :


ತಮ್ಮ ಸುಧೀರ್ಘ 30 ವರ್ಷಗಳ ಸೇವಾವಧಿಯಲ್ಲಿ 29 ಬಾರಿ ವರ್ಗಾವಣೆಯಾಗಿದ್ದಾರೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. 2001-02ರಲ್ಲಿ ಮೇಯರ್ ಚಂದ್ರಶೇಖರ್ ಅವರಿಂದ ಮೊದಲ್ಗೊಂಡು ಪದ್ಮಾವತಿ ತನಕ ಐವರು ಮೇಯರ್ ಗಳಿಗೆ ಆಪ್ತ ಸಹಾಯಕರಾಗಿ, ಆಪ್ತ ಕಾರ್ಯದರ್ಶಿಯಾಗಿ, ಇಬ್ಬರು ಆಡಳಿತಾಧಿಕಾರಿಗಳು, ಇಬ್ಬರು ಆಯುಕ್ತರು ಹಾಗೂ ಇಬ್ಬರು ಆಡಳಿತ ಪಕ್ಷದ ನಾಯಕರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿ ನಗರ ಆಡಳಿತದಲ್ಲಿ ನಾರಾಯಣಸ್ವಾಮಿ ಅಪಾರ ಅನುಭವ ಗಳಿಸಿದ್ದಾರೆ. ಹೀಗಾಗಿಯೇ ಕೌನ್ಸಿಲ್ ವಿಷಯದಲ್ಲಿ ಮೇಯರ್ ಗಳು, ಆಯುಕ್ತರು, ಆಡಳಿತಾಧಿಕಾರಿಗಳು ಜನಪರ ನಿರ್ಣಯ ಕೈಗೊಳ್ಳುವಲ್ಲಿ ನಾರಾಯಣಸ್ವಾಮಿ ಅವರ ಸಲಹೆ, ಕರಾರುವಕ್ ಸಮರ್ಥನೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಗರದ ಲಕ್ಷಾಂತರ ನಾಗರೀಕರ ಮೇಲೆ ಪರಿಣಾಮ ಬೀರಿದೆ.

ಟೈಪಿಸ್ಟ್ ಹುದ್ದೆಯಿಂದ ಮೇಯರ್ ಪಿಎಸ್ ತನಕ :
1995ರ ಏಪ್ರಿಲ್ ನಲ್ಲಿ ಆಗಿನ ಬೆಂಗಳೂರು ನಗರ ಪಾಲಿಕೆಯಲ್ಲಿ ಟೈಪಿಸ್ಟ್ ಹುದ್ದೆಗೆ ಆಯ್ಕೆಯಾಗಿ ಮಲ್ಲೇಶ್ವರದ ಕಂದಾಯ ವಿಭಾಗದಲ್ಲಿ ಸೇವೆ ಆರಂಭಿಸಿ, ತಮ್ಮ ಚತುರತೆ, ಕೆಲಸದ ಮೇಲಿನ ಶೃದ್ಧೆ, ಸಾರ್ವಜನಿಕ ಸೇವೆ ಮೇಲಿನ ಪ್ರೀತಿಯಿಂದಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದರು.
ಅದುವರೆಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವತ್ತಿನ ಮಾಲೀಕರಿಂದ ಕಂದಾಯ ಸಂಗ್ರಹಕ್ಕೆ ನಗರದಲ್ಲಿ ಸೂಕ್ತ ಮಾನದಂಡವಾಗಲಿ, ಮಾರ್ಗಸೂಚಿಯಾಗಲಿ ಇರಲಿಲ್ಲ. ಇದರಿಂದ ಪಾಲಿಕೆ ಕಂದಾಯ ಸಂಗ್ರಹದಲ್ಲಿ ತಾರತಮ್ಯ ಕಂಡುಬರುತ್ತಿತ್ತು. ಅಲ್ಲದೇ ಕಂದಾಯ ಸಂಗ್ರಹದಲ್ಲೂ ಸಮಸ್ಯೆ ಉಂಟಾಗುತ್ತಾ ಆರ್ಥಿಕ ಸಂಪನ್ಮೂಲ ಕಡಿಮೆಯಾಗಿತ್ತು.
ರಾಜಧಾನಿಯಲ್ಲಿ SAS ಏಕರೂಪ ತೆರಿಗೆ ಪದ್ಧತಿ ಜಾರಿಗೆ ತಂದ ರುವಾರಿ :

2000-2001ರ ಇಸವಿಯಲ್ಲಿ ನಗರದಾದ್ಯಂತ ಸ್ವಯಂಘೋಷಣಾ ಆಸ್ತಿ ತೆರಿಗೆ ಪದ್ಧತಿ (SAS) ವ್ಯವಸ್ಥೆಯಡಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಮಾನದಂಡ ರೂಪಿಸಿ ಏಕರೂಪ ದರವನ್ನು ನಿಗದಿಪಡಿಸಿ ಅದನ್ನು ಅನುಷ್ಠಾನ ಮಾಡುವಲ್ಲಿ ನಾರಾಯಣಸ್ವಾಮಿ ಅವರ ಕೊಡುಗೆ ಪ್ರಮುಖವಾದದ್ದು. ಎಸ್ ಎಎಸ್ ಪದ್ಧತಿ ಅಳವಡಿಕೆಯಿಂದಾಗಿ ಬಿಬಿಎಂಪಿಯ ಕಂದಾಯ ಆದಾಯ ನೋಡು ನೋಡುತ್ತಿದ್ದಂತೆ ದ್ವಿಗುಣಗೊಂಡಿತು. ಇದರಿಂದಾಗಿ ಆಡಳಿತ ಯಂತ್ರ ಚುರುಕಾಯಿತು. ಈ ಮಹತ್ತರ ಕಾರ್ಯ ಕೈಗೊಂಡ ನಾರಾಯಣಸ್ವಾಮಿ ಗಣನೀಯ ಸೇವೆಯನ್ನು ಪರಿಗಣಿಸಿ ಪಾಲಿಕೆಯ ಅಂದಿನ ಆಯುಕ್ತರಾದ ಅಶೋಕ್ ದಳವಾಯಿ ಅವರು ಇವರಿಗೆ ನಗರದ ಪ್ರತಿಷ್ಠಿತ ಪ್ರಶಸ್ತಿಯಾದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದರು.
ನಗರದಲ್ಲಿ ಪಾರ್ಕಿಂಗ್ ಶುಲ್ಕ ರದ್ಧತಿಗೆ ಕಾರಣಕರ್ತರು :
2004-05ನೇ ಸಾಲಿನಲ್ಲಿ ಆರ್.ನಾರಾಯಣಸ್ವಾಮಿ ಬಿಎಂಪಿಯ ಮೇಯರ್ ಆಗಿದ್ದರು. ಆಗ ನಗರದಾದ್ಯಂತ ಅನಧಿಕೃತ ಪಾರ್ಕಿಂಗ್ ಶುಲ್ಕ ಸಂಗ್ರಹ ದೊಡ್ಡ ಸಮಸ್ಯೆಯಾಗಿ ಲಕ್ಷಾಂತರ ವಾಹನ ಮಾಲೀಕರಿಗೆ ತೊಂದರೆಯಾಗಿತ್ತು. ಆಗ ಮೇಯರ್ ಆಪ್ತ ಸಹಾಯಕರಾಗಿದ್ದ ಜಿ.ಎಲ್.ನಾರಾಯಣಸ್ವಾಮಿ ನಗರದಲ್ಲಿ ಪಾರ್ಕಿಂಗ್ ಶುಲ್ಕ ರದ್ಧತಿ ಮಾಡುವಂತೆ ನೀಡಿದ ಸಲಹೆಯನ್ನು ನಗರ ಪಾಲಿಕೆ ಯಥಾವತ್ ಜಾರಿ ಮಾಡಿತ್ತು. ಈ ವಿಷಯ ರಾಷ್ಟ್ರೀಯ ಸುದ್ದಿಯಾಗಿ, ನಗರದ ನಾಗರೀಕರಿಂದ ಈ ನಿರ್ಧಾರಕ್ಕೆ ಅಭೂತಪೂರ್ವ ಸ್ವಾಗತ, ಶ್ಲಾಘನೆ ವ್ಯಕ್ತವಾಗಿತ್ತು.
ಕೋವಿಡ್ ಸೋಂಕು ಲೆಕ್ಕಿಸದೇ ಜನರ ಮನೆಗಳಿಗೆ ಆಹಾರ ಕಿಟ್ ವಿತರಣೆ :

2020 ಹಾಗೂ 2021ರಲ್ಲಿ ಕೋವಿಡ್ ಸೋಂಕು ಬಂದು ಇಡೀ ಜಗತ್ತಿಗೆ ಜಗತ್ತೇ ನಲುಗಿ ಹೋಗಿತ್ತು. ಲಕ್ಷಾಂತರ ಜನರನ್ನು ಆಪೋಶನ ತೆಗೆದುಕೊಂಡ ಈ ಸಂದರ್ಭದಲ್ಲಿ ಎಲ್ಲೆಲ್ಲೂ ಜೀವಭಯ, ಪ್ರಾಣಭಯ ಕಾಡುತ್ತಿತ್ತು. ನೆರೆಹೊರೆಯವರು ಅಕ್ಕಪಕ್ಕದ ಮನೆಗೆ ಹೋಗುವುದಿರಲಿ, ದೂರದಿಂದ ಮಾತನಾಡಿಸಲು ಕಷ್ಟವಾಗಿದ್ದಂತಹ ಪರಿಸ್ಥಿತಿ…..!! ಇಂತಹ ಸಂದರ್ಭದಲ್ಲಿ ಕೋವಿಡ್ ಸೋಂಕು ನಿಯಂತ್ರಣ, ನಿರ್ವಹಣೆ ಹಾಗೂ ಜಾಗೃತಿ ಕಾರ್ಯವು ಅತ್ಯಂತ ಅಗತ್ಯವಾಗಿತ್ತು. ನಾರಾಯಣ ಸ್ವಾಮಿ ಎಷ್ಟೋ ಸಂದರ್ಭದಲ್ಲಿ ಕೋವಿಡ್ ಬಂದು ತಮ್ಮ ತಮ್ಮ ಮನೆಗಳಲ್ಲೇ, ಗುಡಿಸಲುಗಳಲ್ಲೇ ಕ್ವಾರಂಟೈನ್ ಆದ ಸಾವಿರಾರು ಮನೆಗಳಿಗೆ, ಕೊಳಗೇರಿಗಳಿಗೆ, ಅಪಾರ್ಟ್ ಮೆಂಟ್ ಗಳಿಗೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವತಃ ತೆರಳಿ ರೋಗಿಗಳಿಗೆ ಅಗತ್ಯವಾದ ಔಷಧಿ, ಅನ್ನ-ಆಹಾರ, ದಿನಸಿ ಪೂರೈಸಿದ್ದಲ್ಲದೆ, ಅಗತ್ಯವಿದ್ದವರಿಗೆ ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿದ್ದಾರೆ. ಆನಂತರ ತಾವೂ ಸೋಂಕಿನಿಂದ ಬಳಲಿ ಕ್ವಾರಂಟೈನ್ ಆಗಿದ್ದರು.
ಮಾದರಿ ಚುನಾವಣೆ ಕೆಲಸಗಳಿಗೆ ಪ್ರಶಸ್ತಿ :

2018ರ ಇಸವಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿಗೆ ಪಾರದರ್ಶಕ ಹಾಗೂ ಸುಗಮವಾಗಿ ಚುನಾವಣೆ ನಡೆಸಲು ಅಗತ್ಯವಾದ ಮಾದರಿ ಕೆಲಸ ಕಾರ್ಯಗಳನ್ನು ಮಾಡಿದ್ದಕ್ಕಾಗಿ ಸಹಾಯಕ ಚುನಾವಣಾಧಿಕಾರಿಯಾಗಿ ಕೆಲಸ ಮಾಡಿದ ನಾರಾಯಣಸ್ವಾಮಿ ಅವರಿಗೆ ಚುನಾವಣಾ ಆಯೋಗದಿಂದ ಉತ್ತಮ ಸೇವಾ ಪ್ರಶಸ್ತಿ ಲಭಿಸಿತ್ತು.
“ಜನಸೇವೆ ಮಾಡಿದ ಸಂತೃಪ್ತಿ ಸದಾ ಇದೆ” :

ಹೀಗೆ ತಮ್ಮ ವೃತ್ತಿ ಜೀವನದ ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ದುಡಿದ ನಾರಾಯಣಸ್ವಾಮಿ ನಿವೃತ್ತಿ ಹೊಂದುತ್ತಿದ್ದಾರೆ. ತಾವು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರು ವೈರ್ ಜೊತೆ ಮಾತನಾಡುತ್ತಾ, “ಕಳೆದ 30 ವರ್ಷಗಳಿಂದ ಸ್ಥಳೀಯಾಡಳಿತ ಸಂಸ್ಥೆಯಾಗಿರುವ ಬಿಬಿಎಂಪಿಯಲ್ಲಿ ಕಂದಾಯ, ಆಸ್ತಿಪಾಸ್ತಿ, ರಸ್ತೆ ಸಮಸ್ಯೆ, ಬೃಹತ್ ಯೋಜನೆ, ವೈದ್ಯಕೀಯ ಸಹಾಯ, ಬಡವರಿಗೆ ಒಂಟಿಮನೆ ಯೋಜನೆ, ತಳ್ಳುವ ಗಾಡಿ, ಕೆರೆ-ರಾಜಕಾಲುವೆ ಹೀಗೆ ನಾನಾ ಸಮಸ್ಯೆ, ಸವಾಲುಗಳಿಗೆ, ಸಹಾಯ ಕೇಳಿ ಬಂದವರಿಗೆ ನನ್ನ ಕೈಲಾದ ಮಟ್ಟಿಗೆ ಜನ ಸೇವೆ ಮಾಡಿದ್ದೇನೆ. ಪರಿಹಾರ ದೊರೆತ ಸಾವಿರಾರು ಜನರು ಖುಷಿಯಿಂದ ತಮಗೆ ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆ ಸಾರ್ವಜನಿಕ ಸೇವೆ ಮಾಡಿದ ಸಂತೃಪ್ತಿಯಿದೆ” ಎಂದು ನಗುಮೊಗದಿಂದಲೇ ಹೇಳಿದರು.