ನವದೆಹಲಿ, ಮಾ.26 www.bengaluruwire.com : ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸಿದ ಕಾರಣಕ್ಕೆ 24 ತರಬೇತಿ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (Central Consumer Protection Authority – CCPA) ₹ 77.60 ಲಕ್ಷ ದಂಡ ವಿಧಿಸಿದ್ದಲ್ಲದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (National Consumer Helpline) ಮೂಲಕ ಶಿಕ್ಷಣ ಕ್ಷೇತ್ರದ 600ಕ್ಕೂ ಅಭ್ಯರ್ಥಿಗಳಿಗೆ ₹ 1.56 ಕೋಟಿ ಮರುಪಾವತಿ ಮಾಡಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.
ನಾಗರಿಕ ಸೇವೆ, ಎಂಜಿನಿಯರಿಂಗ್ ಕೋರ್ಸ್ ಮತ್ತಿತರ ಶಿಕ್ಷಣಕ್ಕೆ ತರಬೇತಿ ಕೇಂದ್ರಗಳಲ್ಲಿ ದಾಖಲಾಗಿದ್ದ ಅಭ್ಯರ್ಥಿಗಳು ನಿಯಮ, ಷರತ್ತುಗಳನ್ನು ಅನುಸರಿಸಿದರೂ ಮರುಪಾವತಿ ನಿರಾಕರಿಸಲಾಗಿದೆ ಎಂದು ಅಭ್ಯರ್ಥಿಗಳು ಗ್ರಾಹಕ ರಕ್ಷಣಾ ಪ್ರಾಧಿಕಾರದ ಗಮನ ಸೆಳೆದಿದ್ದರು. ಅಗತ್ಯ ಸೇವೆ ಪೂರೈಸದ, ತಡವಾಗಿ ತರಗತಿ ಆರಂಭಿಸಿದ ಹಾಗೂ ರದ್ದಾದ ಕೋರ್ಸ್‌ಗಳ ಸಂಬಂಧ ಪರಿಶೀಲನೆ ನಡೆಸಿ ಅಭ್ಯರ್ಥಿಗಳಿಗೆ ಪರಿಹಾರ ಕಲ್ಪಿಸಲಾಗಿದೆ.
ಗ್ರಾಹಕ ಆಯೋಗದ ಪೀಠಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಉಪಕರಣ:
ಗ್ರಾಹಕ ವ್ಯವಹಾರಗಳ ಇಲಾಖೆ ಗ್ರಾಹಕರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಪ್ರಗತಿಪರ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾನ್ಫೊನೆಟ್ (Computerization and Computer Networking of Consumer Fora in Country- CONFONET) ಯೋಜನೆಯಡಿ ವಿಡಿಯೊ ಕಾನ್ಫರೆನ್ಸಿಂಗ್ ಮೋಡ್ ಮೂಲಕ ವಿಚಾರಣೆ ನಡೆಸಲು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ (National Consumer Disputes Redressal Commission – NCDRC) 10 ಪೀಠಗಳು ಮತ್ತು ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗಗಳ (State Consumer Dispute Redressal Authority- SCDRCs) 35 ಪೀಠಗಳಲ್ಲಿ ವಿಸಿ ಉಪಕರಣಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಗ್ರಾಹಕ ಆಯೋಗಗಳಲ್ಲಿ ಈಗ ತೀರ್ಪು ಪ್ರಕ್ರಿಯೆಯ ಸರಳೀಕೃತವಾಗಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರದ್ದುಪಡಿಸಿ 2019ರ ಹೊಸ ಕಾಯ್ದೆ ಜಾರಿ:

ಜಾಗತೀಕರಣ, ತಂತ್ರಜ್ಞಾನ, ಇ-ವಾಣಿಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರ ರಕ್ಷಣೆಗಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಅನ್ನು ರದ್ದುಪಡಿಸಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಗ್ರಾಹಕರು ಆನ್‌ಲೈನ್‌ನಲ್ಲಿ ದೂರು ಸಲ್ಲಿಕೆ, ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸಿಂಗ್, 21 ದಿನಗಳಲ್ಲಿ ದೂರುಗಳ ಸ್ವೀಕಾರ ಮತ್ತು ತ್ವರಿತ ಪರಿಹಾರ ಸಾಧ್ಯವಾಗುತ್ತಿದೆ.
17 ಭಾಷೆಗಳಲ್ಲಿ ಕುಂದು ಕೊರತೆ ಪರಿಹಾರಕ್ಕೆ ಒಂದೇ ವೇದಿಕೆ:
ಗ್ರಾಹಕ ವ್ಯವಹಾರಗಳ ಇಲಾಖೆ ದೇಶಾದ್ಯಂತ ಗ್ರಾಹಕರಿಗೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಸೌಲಭ್ಯ ಒದಗಿಸಿದೆ. ಮೊಕದ್ದಮೆ ಪೂರ್ವ ಹಂತದಲ್ಲಿ ಕುಂದುಕೊರತೆ ಪರಿಹಾರಕ್ಕಾಗಿ ಒಂದೇ ವೇದಿಕೆ ಕಲ್ಪಿಸಿದೆ. ಕನ್ನಡ, ಹಿಂದಿ, ಇಂಗ್ಲಿಷ್, ಕಾಶ್ಮೀರಿ, ಪಂಜಾಬಿ, ನೇಪಾಳಿ, ಗುಜರಾತಿ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಮೈಥಿಲಿ, ಸಂಥಾಲಿ, ಬಂಗಾಳಿ, ಒಡಿಯಾ, ಅಸ್ಸಾಮಿ ಮತ್ತು ಮಣಿಪುರಿ ಸೇರಿದಂತೆ 17 ಭಾಷೆಗಳಲ್ಲಿ ಗ್ರಾಹಕರು ಟೋಲ್-ಫ್ರೀ ಸಂಖ್ಯೆ 1915 ಮೂಲಕ ನೋಂದಾಯಿಸಬಹುದು. ಅಲ್ಲದೇ, ಇಂಟಿಗ್ರೇಟೆಡ್ ಗ್ರೀವಿಯನ್ಸ್ ರಿಡ್ರೆಸಲ್ ಮೆಕ್ಯಾನಿಸಂ (INGRAM), ಓಮ್ನಿ-ಚಾನೆಲ್ ಐಟಿ-ಶಕ್ತಗೊಂಡ ಕೇಂದ್ರ ಪೋರ್ಟಲ್, ವಿವಿಧ ಚಾನೆಲ್‌ಗಳ ಮೂಲಕವೂ ನೋಂದಾಯಿಸಬಹುದು.ಗ
WhatsApp (8800001915), SMS (8800001915), ಇಮೇಲ್ (nch-ca[at]gov[dot]in), NCH ಅಪ್ಲಿಕೇಶನ್, ವೆಬ್ ಪೋರ್ಟಲ್ (consumerhelpline.gov.in) ಮತ್ತು ಉಮಾಂಗ್ ಅಪ್ಲಿಕೇಶನ್ ಸಹ ಗ್ರಾಹಕರ ಅನುಕೂಲಕ್ಕಾಗಿ NCH ಜೊತೆ ಸ್ವಯಂ ಪ್ರೇರಣೆಯಿಂದ ಪಾಲುದಾರಿಕೆ ಹೊಂದಿರುವ 1049 ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.
ಸುರಕ್ಷತಾ ಪ್ರತಿಜ್ಞೆಗೆ ಸಹಿ:
ಗ್ರಾಹಕ ವ್ಯವಹಾರಗಳ ಇಲಾಖೆ, ಆನ್‌ಲೈನ್‌ನಲ್ಲಿ ಮಾರಾಟವಾಗುವ ಸರಕುಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮತ್ತು ಗ್ರಾಹಕರ ಹಕ್ಕುಗಳನ್ನು ಗೌರವಿಸಲು ಇ-ಕಾಮರ್ಸ್ ವೇದಿಕೆಗಳ ಸ್ವಯಂ ಪ್ರೇರಿತ ಸಾರ್ವಜನಿಕ ಬದ್ಧತೆಯ “ಸುರಕ್ಷತಾ ಪ್ರತಿಜ್ಞೆ”ಯನ್ನು ಅಂತಿಮಗೊಳಿಸಿದೆ. ರಿಲಯನ್ಸ್ ರಿಟೇಲ್ ಗ್ರೂಪ್, ಟಾಟಾ ಸನ್ಸ್ ಗ್ರೂಪ್, ಜೊಮಾಟೊ, ಓಲಾ, ಸ್ವಿಗ್ಗಿ ಸೇರಿದಂತೆ 13 ಪ್ರಮುಖ ಇ-ಕಾಮರ್ಸ್ ಕಂಪನಿಗಳು ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಲು ಸುರಕ್ಷತಾ ಪ್ರತಿಜ್ಞೆಗೆ ಸಹಿ ಹಾಕಿವೆ.
ಸಿಸಿಪಿಎ ಇ-ಕಾಮರ್ಸ್ ವಲಯದಲ್ಲಿ ಗುರುತಿಸಲಾದ 13 ನಿರ್ದಿಷ್ಟ ಡಾರ್ಕ್ ಪ್ಯಾಟರ್ನ್‌ಗಳನ್ನು ಪಟ್ಟಿ ಮಾಡಿ ಅವುಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿ 2023 ಅನ್ನು ಬಿಡುಗಡೆ ಮಾಡಿದೆ. ಗ್ರಾಹಕರ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸಿಸಿಪಿಎ, ಗ್ರೀನ್‌ವಾಶಿಂಗ್ ಮತ್ತು ದಾರಿ ತಪ್ಪಿಸುವ ಪರಿಸರ ಹಕ್ಕುಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗಸೂಚಿ 2024 ಜಾರಿಗೆ ತಂದಿದೆ. ತರಬೇತಿ ವಲಯದಲ್ಲಿ ದಾರಿ ತಪ್ಪಿಸುವ ಜಾಹೀರಾತು ತಡೆಗಟ್ಟಲೂ ಕ್ರಮ ಕೈಗೊಂಡಿದೆ.
ಬಿಐಎಸ್ ಮಾನದಂಡ ಪೂರೈಸದ ಪ್ರೆಶರ್ ಕುಕ್ಕರ್ ಮಾರಾಟದ ವಿರುದ್ಧ ಕ್ರಮ:
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ವಿವಿಧ ಘಟಕಗಳ ವಿರುದ್ಧ ಸಿಸಿಪಿಎ ಈಗಾಗಲೇ ಕ್ರಮ ಕೈಗೊಂಡಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡ್ಡಾಯ ಬಿಐಎಸ್ (BIS) ಮಾನದಂಡಗಳನ್ನು ಪೂರೈಸದ ದೇಶೀಯ ಪ್ರೆಶರ್ ಕುಕ್ಕರ್‌ಗಳ ಮಾರಾಟದ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ಕಂಪನಿಗಳಿಂದ ₹ 1,454 ಕೋಟಿ ಮರುಪಾವತಿ :
ಕೋವಿಡ್-19 ಲಾಕ್‌ಡೌನ್ ವೇಳೆ ವಿಮಾನ ಸಂಚಾರ ರದ್ದಾದ ಪ್ರಯುಕ್ತ ಕಂಪನಿಗಳು CCPA ನಿರ್ದೇಶನದಂತೆ ಗ್ರಾಹಕರಿಗೆ ₹ 1,454 ಕೋಟಿ ಮರುಪಾವತಿಸಿವೆ. ವಿಮಾನ ಕಂಪನಿಗಳು ತಮ್ಮ ವೆಬ್‌ಸೈಟ್ ನವೀಕರಿಸಬೇಕೆಂದು ಸಿಸಿಪಿಎ ಆದೇಶಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.