ಚಿಕ್ಕಬಳ್ಳಾಪುರ, ಮಾ.25 www.bengaluruwire.com : ಗೂಗಲ್ (Google)ನಲ್ಲಿ ತಪ್ಪಾಗಿ ಬಳಕೆಯಾಗುತ್ತಿರುವ ಕರ್ನಾಟಕದ ಗ್ರಾಮಗಳ (Karnataka Villages) ಹೆಸರು ಸರಿಪಡಿಸಲು ಯೋಜನೆ ರೂಪಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಗೂಗಲ್‌ನಲ್ಲಿ ಗ್ರಾಮಗಳ ಹೆಸರು ತಪ್ಪಾಗಿ ಉಚ್ಚಾರಣೆಯಾಗುತ್ತಿವೆ. ಹೆದ್ದಾರಿ ನಾಮಫಲಕಗಳಲ್ಲೂ ಗ್ರಾಮಗಳ ಹೆಸರನ್ನು ತಪ್ಪಾಗಿ ಬರೆಯಲಾಗುತ್ತಿದೆ. ಎಪ್ಪತ್ತರಡು ಸಾವಿರಕ್ಕೂ ಹೆಚ್ಚು ಗ್ರಾಮಗಳ ಹೆಸರು ಸಂಗ್ರಹಿಸಿ, ಧ್ವನಿ ಮುದ್ರಣ ಸಹ ಮಾಡಿದೆ. ಧ್ವನಿ ಮುದ್ರಣದಲ್ಲಿ ಗ್ರಾಮಗಳ ಸ್ಪಷ್ಟ ಉಚ್ಚಾರಣೆ ಇದೆ ಎಂದು ಅವರು ಹೇಳಿದ್ದಾರೆ.
ಈಗ ರಸ್ತೆ ಮಾರ್ಗಗಳನ್ನು ತಿಳಿಯಲು ಬಹಳಷ್ಟು ಮಂದಿ ಗೂಗಲ್ ಮ್ಯಾಪ್ (Google Map) ಬಳಕೆ ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದ ತಪ್ಪಾಗಿರುವ ಗ್ರಾಮಗಳ ಹೆಸರು ಸರಿಪಡಿಸಲಾಗುತ್ತದೆ.

‘ಇದೊಂದು ಸವಾಲಿನ ಹಾಗೂ ದೊಡ್ಡ ಜವಾಬ್ದಾರಿ ಕೆಲಸ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗೂಗಲ್ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ತಪ್ಪುಗಳನ್ನು ಸರಿಪಡಿಸಲು ಯೋಜನೆ ರೂಪಿಸುತ್ತದೆ. ರಾಜ್ಯ ವ್ಯಾಪ್ತಿಯ ಹೆದ್ದಾರಿಗಳಲ್ಲಿ ನಾಮಫಲಕ ಹಾಕುವ ಗುತ್ತಿಗೆ ಪಡೆಯುವವರು ಸಾಮಾನ್ಯವಾಗಿ ತೆಲುಗು ಮತ್ತು ತಮಿಳು ಭಾಷಿಕರಾಗಿರುತ್ತಾರೆ. ಕಂಪ್ಯೂಟರ್‌ನಲ್ಲಿ ಆ ಊರಿನ ಹೆಸರು ಪಡೆದು ಫಲಕಕ್ಕೆ ಹಾಕುವನಿಗೆ ಅದು ಚಿತ್ರ ಮಾತ್ರವಾಗಿ ಕಾಣುತ್ತದೆ ಅಷ್ಟೇ’ ಎಂದು ಹೇಳಿದರು.

ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸ್ಪಷ್ಟವಾದ ಕನ್ನಡ ಭಾಷೆ ಬಳಕೆಯ ದೃಷ್ಟಿಯಿಂದ ಈ ಸಮಸ್ಯೆ ಸರಿಪಡಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
