ಬೆಂಗಳೂರು, ಮಾ.24 www.bengaluruwire.com : ಬೆಸ್ಕಾಂ ಕರೆದಿರುವ ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಯಾವುದೇ ಹಗರಣವಾಗಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ಕೆಇಆರ್ ಸಿ ನಿಯಮಾವಳಿ ಅನ್ವಯ ಟೆಂಡರ್ ಕರೆಯಲಾಗಿದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತಾ ಸ್ಪಷ್ಟಪಡಿಸಿದ್ದಾರೆ.
ಬೆಸ್ಕಾಂ ಕೇಂದ್ರ ಕಚೇರಿ ಬೆಳಕು ಭವನದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ 7 ಸಾವಿರ ಕೋಟಿ ರೂ. ಹಗರಣದ ಬಗ್ಗೆ ವಿಪಕ್ಷ ಬಿಜೆಪಿಯ ಮುಖಂಡರ ಗಂಭೀರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರದ ನಿರ್ದೇಶದ ಅನ್ವಯ ದೇಶಾದ್ಯಂತ ಈಗಾಗಲೇ 28 ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮಾತ್ರ ಇನ್ನೂ ಸಾರ್ಟ್ ಮೀಟರ್ ಅಳವಡಿಕೆಯಾಗಿಲ್ಲ.
ನಮ್ಮ ರಾಜ್ಯದಲ್ಲಿ ಕೆಇಆರ್ ಸಿ ನಿಯಮಗಳ ಅನ್ವಯ ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ಸ್ಮಾರ್ಟ್ ಮೀಟರ್ ಮಾರಾಟ ಹಾಗೂ ತಂತ್ರಜ್ಞಾನ ನಿರ್ವಹಣೆಯನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿ ಹಗರಣವಾಗಿಲ್ಲ. ಈ ಸಂಬಂಧ ಕೇಳಿ ಬರುತ್ತಿರುವ ವಿಷಯ ಕೇವಲ ಊಹಾಪೋಹಗಳು ಎಂದು ಹೇಳಿದರು.
ರಾಜ್ಯದಲ್ಲಿ ವಾರ್ಷಿಕವಾಗಿ ಶೇ.2 ರಿಂದ 3 ತನಕ ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುತ್ತಾರೆ. ಹೀಗಾಗಿ ಬಳಕೆದಾರರೇ ಸ್ಮಾರ್ಟ್ ಮೀಟರ್ ಖರೀದಿ ಮಾಡಬೇಕು. ಈ ಮೀಟರ್ ಗೆ ಎಸ್ಕಾಂ ಅತ್ಯಾಧುನಿಕ ಸೇವೆ ನೀಡುತ್ತದೆ. ಸ್ಮಾರ್ಟ್ ಮೀಟರ್ ಯೋಜನೆ ಗುತ್ತಿಗೆ ಪಡೆದ ಸಂಸ್ಥೆ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಅನ್ನು ಸ್ಮಾರ್ಟ್ ಮೀಟರ್ ಜೊತೆ ಸಂಯೋಜನೆಗೊಳಿಸುತ್ತದೆ ಗೌರವಗುಪ್ತಾ ಹೇಳಿದರು.

ಬೇರೆ ರಾಜ್ಯಗಳಲ್ಲಿ 24 ತಿಂಗಳಲ್ಲಿ ಒಂದು ಬಾರಿಗೆ ಬಲ್ಕ್ ರಿಪ್ಲೇಸ್ ಮೆಂಟ್ ಮಾಡ್ತಿರೋದ್ರಿಂದ ಕೇಂದ್ರ ಸರ್ಕಾರ ಶೇ.15 ರಷ್ಟು ಸಬ್ಸೀಡಿ ಅವರಿಗೆ ನೀಡುತ್ತಿದೆ. ಹೀಗಾಗಿ ಮೀಟರ್ ಬೆಲೆ ಕಡಿಮೆಯಿರುತ್ತೆ. ನಮ್ಮಲ್ಲಿ ಹಂತ ಹಂತವಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಹೀಗಾಗಿ ಸ್ಮಾರ್ಟ್ ಮೀಟರ್ ಖರೀದಿಗೆ ಕೇಂದ್ರ ಸರ್ಕಾರದ ಸಬ್ಸೀಡಿ ಲಭ್ಯವಾಗದ ಕಾರಣ ಮೀಟರ್ ಬೆಲೆ ಹೆಚ್ಚಾಗಿದೆ.

ಸ್ಮಾರ್ಟ್ ಮೀಟರ್, ಮೀಟರ್ ಅಳವಡಿಕೆ, ಸರ್ವರ್ ಜೊತೆ ಸಂಯೋಜನೆ, ನಿರ್ವಹಣೆ, ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಮೀಟರ್ ಸೇರಿ 116 ರೂ. ಪ್ರತಿ ತಿಂಗಳಿಗೆ ಶುಲ್ಕವಾಗುತ್ತೆ. ಅದರಲ್ಲಿ ಪ್ರತಿ ತಿಂಗಳ ಸ್ಮಾರ್ಟ್ ಮೀಟರ್ ಬೆಲೆ 75 ರೂ. ಇದೆ. ಈ ಮೀಟರ್ 10 ವರ್ಷ ಬಾಳಿಕೆ ಬರುತ್ತೆ. ಈ ಸ್ಮಾರ್ಟ್ ಮೀಟರ್ ಒಟ್ಟಾರೆ ಬೆಲೆ 5,000 ರೂ. ಇದನ್ನು ತಾತ್ಕಾಲಿಕ ಹಾಗೂ ಹೊಸ ಸಂಪರ್ಕ ವಿದ್ಯುತ್ ಸಂಪರ್ಕ ಪಡೆಯುವವರು ಭರಿಸಬೇಕಿದೆ. ಈಗಾಗಲೇ ರಾಜ್ಯದಲ್ಲಿರುವ ವಿದ್ಯುತ್ ಗ್ರಾಹಕರು ಹಾಕಿರುವ ವಿದ್ಯುತ್ ಮೀಟರ್ ಹಾಗೇ ಮುಂದುವರೆಯಲಿದೆ ಎಂದು ಗೌರವ ಗುಪ್ತಾ ಎಂದರು.
ಸ್ಮಾರ್ಟ್ ಮೀಟರ್ ಅವಶ್ಯಕತೆ, ತಾಂತ್ರಿಕತೆ :
ಈ ಬಗ್ಗೆ ಮಾಧ್ಯಮದವರು ಮತ್ತಷ್ಟು ಸ್ಪಷ್ಟನೆ ಬಯಸಿದಾಗ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಸ್ಮಾರ್ಟ್ ಮೀಟರ್ ಕುರಿತಂತೆ, ಅದರ ಅದರ ಅಳವಡಿಕೆ, ತಂತ್ರಜ್ಞಾನ ವೈಶಿಷ್ಟ್ಯತೆ, ಬೆಳಗಿನ ಹೊತ್ತಿನ ವಿದ್ಯುತ್ ಬಳಕೆಗೆ ಕಡಿಮೆ ದರ ಹಾಗೂ ರಾತ್ರಿ ಬಳಕೆಯ ವಿದ್ಯುತ್ ಗೆ ಹೆಚ್ಚಿನ ದರ ವಿಧಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಮೀಟರ್ ಅಗತ್ಯತೆಯ ಬಗ್ಗೆ ತಿಳಿಸಿದರು.
ಮೂರು ವರ್ಷ ಹಿಂದೆಯೇ ಕೇಂದ್ರ ಸರ್ಕಾರ ಪರಿಷ್ಕೃತ ವಿತರಣಾ ವಲಯ ಯೋಜನೆ (Revamped Distribution Sector Scheme – RDSS) ಯೋಜನೆಯಡಿ ಎಲ್ಲಾ ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ ಮೀಟರ್ ಬದಲಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಹೇಳಿತ್ತು. ಸ್ಮಾರ್ಟ್ ಮೀಟರ್ ನಲ್ಲಿ ಕಮ್ಯುನಿಕೇಶನ್ ವ್ಯವಸ್ಥೆ ಮೊಬೈಲ್ ರೀತಿ ಕಾರ್ಯನಿರ್ವಹಿಸುತ್ತೆ.
ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ವರ್ಗಗಳಲ್ಲಿ ಹಣ ಟಾಪಪ್ ಮಾಡಿ ವಿದ್ಯುತ್ ಪಡೆಯಬಹುದು. ರಾತ್ರಿ ಹಾಗೂ ಬೆಳಗಿನ ಹೊತ್ತಿನ ವಿದ್ಯುತ್ ದರವು ಮೂರು ರೂ. ನಷ್ಟು ವ್ಯತ್ಯಾಸವಿರುತ್ತೆ. ನಮ್ಮಲ್ಲಿ ಸ್ಮಾರ್ಟ್ ಮೀಟರ್ ವ್ಯವಸ್ಥೆಯನ್ನು ಹಂತ ಹಂತವಾಗಿ ಯೋಜನೆಯನ್ನು ಅನುಷ್ಠಾನ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಪಂಕಜ್ ಕುಮಾರ್ ಪಾಂಡೆ ಹೇಳಿದರು.
ಸ್ಮಾರ್ಟ್ ಮೀಟರ್ ಟೆಂಡರ್ ರಾಜಶ್ರೀ ಎಂಟರ್ ಪ್ರೈಸಸ್ ಜೊತೆ ಜಂಟಿ ಸಹಯೋಗದ ಬಿಸಿಐಟಿ ದೇಶದ ಇತರ 16 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. 20-01-2025 ರಂದು ಕೆಲಸ ಬ್ಯಾರಿಂಗ್ ಪಿರಿಯಡ್ ಮುಗಿದ ಮೇಲೆ ರಾಜ್ಯದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇಲ್ಲಿ ಯಾವುದೇ ನಿಯಮಾವಳಿ ಉಲ್ಲಂಘಿಸಲಾಗಿಲ್ಲ ಎಂದರು.
ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆ ಬಗ್ಗೆ ಬೆಸ್ಕಾಂ ಎಂಡಿ ಹೇಳಿದ್ದೇನು?:
ಇನ್ನು ಬೆಸ್ಕಾಂ ಕರೆದಿರುವ ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎಂದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್, ಬೇರೆ ರಾಜ್ಯಗಳಲ್ಲಿ ಈ ರೀತಿಯ ಸ್ಮಾರ್ಟ್ ಮೀಟರ್ 4,500 ರಿಂದ 6,000 ರೂ. ತನಕ ಇದೆ. ಬೆಸ್ಕಾಂ ಸೆಪ್ಟೆಂಬರ್ ನಲ್ಲಿ ಮಂಡಳಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ನಿರ್ಧಾರ ಮಾಡಲಾಯಿತು. ಆನಂತರ 10 ಕಂಪನಿಗಳು ಪ್ರೀ ಬಿಡ್ಡಿಂಗ್ ಟೆಂಡರ್ ದಾಖಲೆ ಬಗ್ಗೆ ಸ್ಪಷ್ಟೀಕರಣ ಕೇಳಿದ್ದರು. ಆನಂತರ ಬೆಸ್ಕಾಂ ಟೆಂಡರ್ ಕರೆದಾಗ ರಾಜಶ್ರೀ ಎಂಟರ್ ಪ್ರೈಸಸ್, ಬಿ.ಆರ್.ಪಾಟೀಲ್ ಹಾಗೂ ಸಹ್ಯಾದ್ರಿ ಸಂಸ್ಥೆಯು ಭಾಗವಹಿಸಿತ್ತು. ಅಂತಿಮವಾಗಿ ರಾಜಶ್ರೀ ಎಂಟರ್ ಪ್ರೈಸಸ್ ಅತಿ ಕಡಿಮೆ ದರ (L1) ಕೋಟ್ ಮಾಡಿದ್ದರೆ, ಬಿ.ಆರ್.ಪಾಟೀಲ್ ಎರಡನೇ ಅತಿ ಕಡಿಮೆ ದರ (L2), ಕೋಟ್ ಮಾಡಿತ್ತು. ಸಹ್ಯಾದ್ರಿ ಅಂತಿಮ ಟೆಂಡರ್ ನಲ್ಲಿ ಅರ್ಹತೆ ಪಡೆಯಲಿಲ್ಲ.
ಐದು ವರ್ಷಗಳ ಕಾಲ ಮಾನವ ಸಂಪನ್ಮೂಲ, ಸಾರಿಗೆ ಸೇರಿದಂತೆ ಇತರ ಖರ್ಚು ಇರುತ್ತವೆ. ಅದರಲ್ಲಿ ಅತಿ ಕಡಿಮೆ ದರ ಕೋಟ್ ಮಾಡಿದ ರಾಜಶ್ರೀ ಎಂಟರ್ ಪ್ರೈಸಸ್ ಗೆ ಟೆಂಡರ್ ಕೊಟ್ಟಿದೆ. ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಅವರು ಸಮರ್ಥಿಸಿಕೊಂಡರು.
ರಾಜ್ಯದ ವಿದ್ಯುತ್ ಪರಿಸ್ಥಿತಿ :
ಈ ಬಾರಿ ಉತ್ತಮ ಮಳೆಯಿಂದಾಗಿ ಬೆಳೆ ಬೆಳೆಯುವ ಪ್ರದೇಶ ಹೆಚ್ಚಾಗಿರುವುದರಿಂದ ವಿದ್ಯುತ್ ಬೇಡಿಕೆ ಈ ವರ್ಷ ಹೆಚ್ಚಾಗಿದೆ. ಇದಕ್ಕಾಗಿ ಸಾಕಷ್ಟು ಮೊದಲೇ ಅಂದಾಜು ಮಾಡಿ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವಗುಪ್ತಾ ಹೇಳಿದರು.
ಸೌರ ವಿದ್ಯುತ್ ಸಂಗ್ರಹ ಮಾಡುವುದು ಬಹಳ ಸವಾಲಾಗಿದೆ. ಸೌರ ವಿದ್ಯುತ್ ಬ್ಯಾಟರಿ ಸಂಗ್ರಹ ಸಂಬಂಧ ಮೂಲಭೂತ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರವು ಸಹಾಯಧನವನ್ನು ರಾಜ್ಯಕ್ಕೆ ನೀಡಿದೆ. ಶರಾವತಿ ಪಂಪ್ಡ್ ವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಬಲಪಡಿಸಲು ಕುಸುಮ್-ಸಿ ಯೋಜನೆಯಡಿ ಉಪವಿಭಾಗ ಮಟ್ಟದಲ್ಲಿ ರೈತರ ಜಮೀನಿಗೆ ಸೌರ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಬೆಳಗಿನ ಹೊತ್ತು ಗುಣಮಟ್ಟದ ಸೌರ ವಿದ್ಯುತ್ ಪೂರೈಸಿದರೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಸೌರ ವಿದ್ಯುತ್ 9211 ಮೆ.ವ್ಯಾ ಸ್ಥಾಪಿತ ಸಾಮರ್ಥ್ಯ. ಪೀಕ್ ಅವಧಿಯಲ್ಲಿ ಪ್ರತಿದಿನ 6800 ಮೆ.ವ್ಯಾ ಉತ್ಪಾದನೆಯಾಗುತ್ತಿದೆ. 6627 ಮೆ.ವ್ಯಾ ಪವನ ವಿದ್ಯುತ್ ಸ್ಥಾಪಿತ ಸಾಮರ್ಥ್ಯದ ಪೈಕಿ 1500 ಮೆ.ವ್ಯಾ ತನಕ ಉತ್ಪಾದನೆಯಾಗುತ್ತಿದೆ. ರಾಯಚೂರು, ಯಮರಸ್ ಹಾಗೂ ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರದಲ್ಲಿ ಸರಾಸರಿ 15 ದಿನಗಳ ಕಲ್ಲಿದ್ದಲು ಸಂಗ್ರಹವಿದೆ. ಇತ್ತೀಚಿನ ದಿನಗಳಲ್ಲಿ 6 ರ್ಯಾಕ್ಸ್ (Racks) ನಿಂದ 14 ರೈಲು ರ್ಯಾಕ್ಸ್ ಕಲ್ಲಿದ್ದಲು ರಾಜ್ಯಕ್ಕೆ ಬರುತ್ತಿದೆ ಎಂದು ಗೌರವಗುಪ್ತಾ ಮಾಹಿತಿ ನೀಡಿದ್ದಾರೆ ಎಂದರು.
ಪಂಕಜ್ ಕುಮಾರ್ ಪಾಂಡೆ ವಿದ್ಯುತ್ ಬೇಡಿಕೆ ಬಗ್ಗೆ ಹೇಳಿದ್ದೇನು?:

2023-24, ಕಳೆದ ವರ್ಷ 17,220 ಮೆ.ವ್ಯಾ ಇತ್ತು. ಇದಕ್ಕೆ ಹೋಲಿಸಿದ್ರೆ 2024-25ರಲ್ಲಿ 18,500 ಮೆ.ವ್ಯಾ ಆಗಲಿದೆ. ಅಂದರೆ 1,280 ಪೀಕ್ ಬೇಡಿಕೆ ಜಾಸ್ತಿಯಾಗಿದೆ. ಈ ಜನವರಿ 17,691 ಮೆ.ವ್ಯಾ ವಿದ್ಯುತ್ ಬೇಡಿಕೆಯಿತ್ತು, ಫೆಬ್ರವರಿಯಲ್ಲಿ 18,350 ಮೆ.ವ್ಯಾ ಏರಿದೆ. ಇನ್ನು ಮಾರ್ಚ್ ನಲ್ಲಿ 18,395 ಮೆ.ವ್ಯಾ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೃಷಿಕರು ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಒಂದೇ ಸಮನೆ ವಿದ್ಯುತ್ ಬೇಡಿಕೆ ಜಾಸ್ತಿಯಾಗಿದೆ.
ತುಮಕೂರು, ಮಂಡ್ಯ, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಹೆಚ್ಚಿನ ಬೆಳೆ ಬೆಳೆಯಲು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಬೆಳೆ ಬೆಳೆಯುವ ಪ್ರದೇಶ ಹೆಚ್ಚಾಗಿರುವುದು ಉಪಗ್ರಹ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ
ವಿದ್ಯುತ್ ಸಂಗ್ರಹ ವ್ಯವಸ್ಥೆ :
ಉತ್ತರಪ್ರದೇಶದಿಂದ ಡಿಸೆಂಬರ್ 2024ರಿಂದ ಮೇ 2025 ರ ತನಕ 100-1400 ಮೆ.ವ್ಯಾ ಹಾಗೂ ಪಂಜಾಬ್ ರಾಜ್ಯದ ಜೊತೆ ಜನವರಿ 2025 ರಿಂದ ಏಪ್ರಿಲ್ 2025 ರ ತನಕ ದಿನಂಪ್ರತಿ 200 ರಿಂದ 531 ಮೆ.ವ್ಯಾ ವಿದ್ಯುತ್ ಸಂಗ್ರಹ ವ್ಯವಸ್ಥೆ ಮಾಡಿಕೊಂಡಿದ್ದೇವೆ.
ಚಿತ್ರದುರ್ಗ,ದಾವಣಗೆರೆಯಲ್ಲಿ ವಿದ್ಯುತ್ ಪೂರೈಕೆ ಕೊರತೆಯಿದೆ. ರಾಜ್ಯದಲ್ಲಿ ದಿನದ 7 ಗಂಟೆ 3 ಫೇಸ್ ವಿದ್ಯುತ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಸೌರ ವಿದ್ಯುತ್ ಹಾಗೂ ಪವನ ವಿದ್ಯುತ್ ಗಳ ಬ್ಯಾಟರಿಯಲ್ಲಿ 1000 ಮೆ.ವ್ಯಾ ಗಂಟೆಗಳ ಕಾಲ ವಿದ್ಯುತ್ ಸಂಗ್ರಹಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ರಾಜ್ಯಕ್ಕೆ ಬಹಳ ಅನುಕೂಲವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಪಿಸಿಕೆಎಲ್ ಎಂಡಿ ಸ್ನೇಹಲ್ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ರನ್ಯಾರಾವ್ ಪ್ರೊಟೊಕಾಲ್ ದುರ್ಬಳಕೆ ಪ್ರಕರಣ ತನಿಕಾ ವರದಿ ಸಂಜೆಯೊಳಗೆ ಸರ್ಕಾರಕ್ಕೆ ಸಲ್ಲಿಕೆ :
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಆಕೆಯ ಮಲತಂದೆ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಭಾಗಿಯಾದ ಹಾಗೂ ಪ್ರೊಟೋಕಾಲ್ ದುರ್ಬಳಕೆ ಬಗ್ಗೆ ತನಿಖೆ ನಡೆಸಿ, ಸವಿಸ್ತಾರವಾಗಿ ತನಿಖೆ ನಡೆಸಿ ಸವಿಸ್ತಾರವಾಗಿ ಮಾಹಿತಿ ಕಲೆ ಹಾಕಿದ್ದು, ಈ ಬಗ್ಗೆ ನಾನು ಯಾವುದನ್ನೂ ಬಹಿರಂಗವಾಗಿ ಹೇಳುವುದಿಲ್ಲ. ಹಾಗೆ ಹೇಳೋಕೆ ಆಗಲ್ಲ. ಕೆಲವು ಸಾಕ್ಷ್ಯಗಳ ಬಗ್ಗೆಯೂ ತನಿಖೆವೇಳೆ ಮಾಹಿತಿ ಸಿಕ್ಕಿದೆ. ಇಂದು ಸಂಜೆಯೊಳಗೆ ತನಿಖೆಯ ಸಂಪೂರ್ಣ ವರದಿ ಸಲ್ಲಿಕೆ ಮಾಡುತ್ತೇನೆ ಎಂದು ತನಿಖೆಗೆ ಸರ್ಕಾರ ನೇಮಿಸಿದ್ದ ತನಿಖಾಧಿಕಾರಿ ಗೌರವ್ ಗುಪ್ತಾ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.