ಬೆಂಗಳೂರು, ಮಾ.20 www.bengaluruwire.com : ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ (BBMP) ಪುರಪಿತೃಗಳಿಲ್ಲದೇ ಸತತ ಐದನೇ ಬಾರಿಗೆ ಅಧಿಕಾರಿಗಳಿಂದ 2025-26ನೇ ಸಾಲಿನ ಪಾಲಿಕೆ ಬಜೆಟ್ ಮಂಡಿಸಲು ಸಿದ್ಧತೆಗಳು ಭರದಿಂದ ಸಾಗಿದೆ. ಈ ಬಾರಿ 19,000 ಕೋಟಿ ರೂ. ಗಡಿ ದಾಟುವ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ.
ಇದೇ ಮಾರ್ಚ್ 24ರಂದು ಬೆಂಗಳೂರಿನ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಾಲಿಕೆ ಮುಖ್ಯ ಆಯುಕ್ತರು, ಹಣಕಾಸು ವಿಶೇಷ ಆಯುಕ್ತರು ಸಭೆ ನಡೆಸಲಿದ್ದಾರೆ. ಮಾ.27ರಂದು ಪಾಲಿಕೆ ಬಜೆಟ್ ಮಂಡನೆಗೆ ದಿನಾಂಕ ನಿಗಧಿಯಾಗಿದೆ. 2024-25ನೇ ಸಾಲಿನ ಆರ್ಥಿಕ ವರ್ಷ ಮಾ.31ರಂದು ಮುಗಿಯಲಿದ್ದು, ಅದರ ಒಳಗೆ ಪಾಲಿಕೆ ಬಜೆಟ್ ಗೆ ರಾಜ್ಯ ಸರ್ಕಾರದ ಒಪ್ಪಿಗೆ ಬೀಳಬೇಕಿದೆ. ಪ್ರತಿ ಬಾರಿ ವರ್ಷದಿಂದ ವರ್ಷಕ್ಕೆ ಶೇ.5 ರಿಂದ 8ರಷ್ಟು ಏರಿಕೆಯಾಗುತ್ತಿದ್ದ ಪಾಲಿಕೆ ಬಜೆಟ್ ಗಾತ್ರ ಈ ಬಾರಿ ಶೇ.40ರ ಗಡಿ ದಾಟುವುದೆಂದು ಪಾಲಿಕೆ ಮೂಲಗಳು ತಿಳಿಸಿವೆ.
ಕಳೆದ ಬಾರಿ (2024-25 ನೇ ಸಾಲಿನಲ್ಲಿ) 12,369 ಕೋಟಿ ರೂ. ಬಜೆಟ್ ಮಂಡಿಸಿದ್ದ ಪಾಲಿಕೆಯಲ್ಲಿ ಬಳಿಕ ಸರ್ಕಾರ ಹೆಚ್ಚುವರಿಯಾಗಿ ಅನುದಾನ ಪ್ರಕಡಿಸಿದ್ದರಿಂದ 13,114 ಕೋಟಿ ರೂ. ಗಳಿಗೆ ವಿಸ್ತರಿಸಲಾಗಿತ್ತು. ಈ ಬಾರಿ ಬಿಬಿಎಂಪಿಯ ಆಯವ್ಯಯ ಗಾತ್ರ 19,000 ದಿಂದ 20,000 ಕೋಟಿ ರೂ. ಆಗುವ ಸಾಧ್ಯತೆಯಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7ರಂದು ಮಂಡಿಸಿದ ಬಜೆಟ್ ನಲ್ಲಿ ಬೆಂಗಳೂರು ನಗರದ ಮೂಲಸೌಲಭ್ಯಗಳ ಅಭಿವೃದ್ಧಿಗೆ ಪ್ರತಿವರ್ಷ ಪಾಲಿಕೆಗೆ ನೀಡುತ್ತಿದ್ಧ ಅನುದಾನವನ್ನು ಈ ಬಾರಿ 7,000 ಕೋಟಿ ರೂ. ಗೆ ಹೆಚ್ಚಿಸಿರುವುದು, ಆರ್ಥಿಕ ಸಂಪನ್ಮೂಲದಿಂದ ಬಸವಳಿದ ಬಿಬಿಎಂಪಿಗೆ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಂತಾಗಿದೆ.
ಬಿಬಿಎಂಪಿ ಕಾರ್ಯನಿರ್ವಹಣಾ ವರದಿ ಮಂಡನೆ :

ನಗರದ ನಾಗರೀಕರಿಗೆ ಯಾವುದೇ ಹೊಸ ಹೊರೆಯನ್ನು ಹಾಕದೆ ಪಾಲಿಕೆ ವರಮಾನ ಹೆಚ್ಚಿಸಲು ಪಾಲಿಕೆಯ ಜಾಹೀರಾತು ಉಪ-ವಿಧಿಗಳು 2025ರ ಅನುಷ್ಠಾನದಿಂದ ವರ್ಷಕ್ಕೆ 750 ಕೋಟಿ ರೂ. ಆದಾಯ ಬರುವ ಅಂಶವನ್ನು ಪಾಲಿಕೆ ಬಜೆಟ್ ನಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಬಹು ಮಹಡಿ ಕಟ್ಟಡ ಕಟ್ಟಲು ಅನುಕೂಲವಾಗುವಂತಹ ಪ್ರಿಮಿಯಮ್ ಫ್ಲೋರ್ ಏರಿಯಾ ರೇಶ್ಯು (FAR) ಯೋಜನೆ ಪ್ರಕಟಿಸಿ ಆ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಪಾಲಿಕೆ ಬಜೆಟ್ ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಇನ್ನು ಪಾಲಿಕೆಯಲ್ಲಿರುವ ಶಿಕ್ಷಣ, ಆರೋಗ್ಯ, ರಸ್ತೆ ಮತ್ತು ಮೂಲಭೂತ ಸೌಕರ್ಯ, ಬೃಹತ್ ನೀರುಗಾಲುವೆ, ಕಲ್ಯಾಣ ಇಲಾಖೆ, ಕಂದಾಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೈಗೊಂಡ ಕಾಮಗಾರಿಗಳು, ಕೆಲಸಗಳ ಬಗ್ಗೆ ಕಾರ್ಯಾನುಷ್ಠಾನದ ಕುರಿತು ಸಂಪೂರ್ಣ ಮಾಹಿತಿ ಒದಗಿಸುವ ಕಾರ್ಯನಿರ್ವಹಣಾ ವರದಿಯನ್ನು ಬಜೆಟ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ಬಿಬಿಎಂಪಿ ತಯಾರಿ ನಡೆಸುತ್ತಿದೆ.

ಕಳೆದ ಬಾರಿಯ ಬ್ರಾಂಡ್ ಬೆಂಗಳೂರು ಜಪ ಮುಂದುವರಿಕೆ :

ಈ ಬಾರಿಯ ಬಜೆಟ್ ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಹೊಸದಾಗಿ ವಿಶೇಷ ಉದ್ದೇಶಿತ ವಾಹಕ (Special Purpose Vehicle- SPV) ಸ್ಥಾಪನೆಯ ಬಗ್ಗೆ ಬಜೆಟ್ ನಲ್ಲಿ ಘೋಷಿಸುವ ನಿರೀಕ್ಷೆಯಿದೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರಿನ ಅಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸು ಬ್ರಾಂಡ್ ಬೆಂಗಳೂರು ಕನಸಿಗೆ ಈ ಬಜೆಟ್ ನಲ್ಲಿ ಹೆಚ್ಚು ಒತ್ತು ಸಿಗಲಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ 40,000 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಸುರಂಗ ಮಾರ್ಗದ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಲಾಗುತ್ತದೆ.
ಬಿಬಿಎಂಪಿಯು ನಗರದ ದೀರ್ಘಕಾಲಿಕ ನೀರು ನಿಲ್ಲುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಕೆರೆ ಪುನರುಜ್ಜೀವನ ಮತ್ತು ಪ್ರವಾಹ ನಿಯಂತ್ರಣ ಕ್ರಮಗಳಿಗೆ ಹಣವನ್ನು ಹಂಚಿಕೆ ಮಾಡುವ ನಿರೀಕ್ಷೆಯಿದೆ. ನಗರದಾದ್ಯಂತ ಕಲ್ಯಾಣ ಯೋಜನೆಗಳು ಮತ್ತು ರಸ್ತೆ ಕಾಮಗಾರಿ, ವಿವಿಧ ಯೋಜನೆಗಳ ನಿರ್ವಹಣಾ ಕಾರ್ಯಗಳಿಗೆ ಹಣ ಹಂಚಿಕೆಗಳ ಜೊತೆಗೆ ವಿಶ್ವಬ್ಯಾಂಕ್ ನೆರವಿನ ಮೂಲಸೌಕರ್ಯ ಯೋಜನೆಗಳಿಗೆ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಲ್ಯಾಣ ಮತ್ತು ಆರೋಗ್ಯ ವಿಭಾಗದಲ್ಲಿ ಹೊಸ ಕಾರ್ಯಕ್ರಮಗಳೇನು? :
ಸಮಾಜ ಕಲ್ಯಾಣ ಇಲಾಖೆಯಿಂದ ಸ್ವಂತ ಮನೆಯಿರುವ ಬಡವರಿಗೆ ಇದ್ದ ಒಂಟಿಮನೆ ಯೋಜನೆಯನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತಿತರ ಕಡೆ ಅಪಾರ್ಟ್ ಮೆಂಟ್ ಖರೀದಿಗೆ ಸಹಾಯಧನ ನೀಡುವ ಬಗ್ಗೆ ಬಿಬಿಎಂಪಿ ಬಜೆಟ್ 2025-26ರಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ಬ್ರಾಂಡ್ ಬೆಂಗಳೂರು ಯೋಜನೆಯಡಿ ನಗರದಲ್ಲಿನ ಪಾಲಿಕೆಯ 20 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು. ನಗರದ ಬಡ ಜನತೆಗೆ ಅನುಕೂಲವಾಗಲು ಪಾಲಿಕೆಯಲ್ಲಿ ತ್ವರಿತವಾಗಿ ರೋಗಪತ್ತೆಗಾಗಿ ಡಯಾಗ್ನಾಸ್ಟಿಕ್ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಬಜೆಟ್ ನಲ್ಲಿ ಮಂಡಿಸುವ ನಿರೀಕ್ಷೆಯಿದೆ. 2024-25ನೇ ಸಾಲಿನ ಬಜೆಟ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯ ಸಾಧಿಸಲು ಬೆಂಗಳೂರು ಆರೋಗ್ಯ ಆಯುಕ್ತರು ಎಂಬ ವ್ಯವಸ್ಥೆಗೆ ಜಾರಿಗೆ ಬರಲೇ ಇಲ್ಲ.
ಪಶುಪಾಲನಾ ಇಲಾಖೆಗೆ ಹೊಸದೇನು? :
ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಐದು ಸಂತಾನ ನಿಯಂತ್ರಣ (ಎಬಿಸಿ) ಕೇಂದ್ರಗಳಿದ್ದು ಹೊಸದಾಗಿ ಮತ್ತೆ ಎರಡು ಕೇಂದ್ರಗಳನ್ನು ತೆರೆಯಲು ಬಜೆಟ್ ನಲ್ಲಿ ಘೋಷಿಸಲಾಗುವ ನಿರೀಕ್ಷೆಯಿದೆ.
ಅರಣ್ಯ ಇಲಾಖೆ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಿಡಗಳ ನೆಡುವಿಕೆಗೆ 13.80 ಕೋಟಿ ರೂ., ಮರಗಣತಿ ಮತ್ತು ಮರಕ್ಕೆ ಸಂಖ್ಯೆ ಬರೆಯುವ ಯೋಜನೆಗೆ 3 ಕೋಟಿ ರೂ,, ಹಳೆಯ ಗಿಡಗಳ ನಿರ್ವಹಣೆಗೆ 8.58 ಕೋಟಿ ರೂ., ನಗರದಲ್ಲಿ ಮರದ ಟೊಂಗೆ ಹಾಗೂ ಹಾಳಾದ ಮರಗಳ ತೆರವುಗೊಳಿಸುವಿಕೆ ಮತ್ತು ನಿರ್ವಹಣೆಗೆ 15 ಕೋಟಿ ರೂ., ವನ್ಯಜೀವಿಗಳ ರಕ್ಷಣೆ ಮತ್ತು ನಿರ್ವಹಣೆ ಮಾಡುವ ಘಟಕಕ್ಕೆ 5 ಕೋಟಿ ರೂ. ನೀಡುವಂತೆ ಬಜೆಟ್ ಪ್ರಸ್ತಾವನೆಯಿಡಲಾಗಿದೆ. ಒಟ್ಟಾರೆ ಪಾಲಿಕೆ ಅರಣ್ಯ ವಿಭಾಗಕ್ಕೆ ಹೆಚ್ಚಿನ ಹೊಸ ಯೋಜನೆಗಳು ಪ್ರಕಟಿಸುವ ಸಾಧ್ಯತೆ ಕಡಿಮೆಯಿದೆ.
ಪರಿಸರ ಸಂರಕ್ಷಣೆಯ ಕೆರೆಗಳ ಬಗ್ಗೆ ಪಾಲಿಕೆಗೆ ಇದ್ಯಾ ಅಕ್ಕರೆ? :
ನಗರದಲ್ಲಿ 100 ಎಕರೆಗಿಂತ ಹೆಚ್ಚು ವಿಸ್ತೀರ್ಣದ 13 ಕೆರೆಗಳಿವೆ. ಇವು ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿರುವ 181 ಕೆರೆಗಳ ವಾರ್ಷಿಕ ನಿರ್ವಹಣೆಗಾಗಿ 50 ಕೋಟಿ ರೂ., ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕೆರೆಗಳಲ್ಲಿ ಏರಿಯೇಟರ್ಸ್, ತೇಲುವ ದ್ವೀಪಗಳು, ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆ ಅಳವಡಿಕೆ, ಅರಳಿಕಟ್ಟೆ ಯೋಜನೆ, ಸಿಸಿಟಿವಿ ಸೇರಿದಂತೆ ಮತ್ತಿತರ ಕಾರ್ಯಗಳಿಗಾಗಿ 250 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಅನುದಾನ ನೀಡುವಂತೆ ಕೆರೆ ವಿಭಾಗ ಪ್ರಸ್ತಾವನೆ ಸಲ್ಲಿಸಿದೆ. 181 ಕೆರೆಗಳ ನಿರ್ವಹಣೆಗೆ ಕೇವಲ 50 ಕೋಟಿ ರೂ. ಮೀಸಲಿಟ್ಟರೆ ಆ ಹಣ ಯಾವುದಕ್ಕೂ ಸಾಲದು. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗುತ್ತೆ. ಕೆರೆಗಳು ಸೂಕ್ತವಾಗಿ ನಿರ್ವಹಣೆಯಾಗದಿದ್ದರೆ ಹಂತ ಹಂತವಾಗಿ ವಿನಾಶವಾದರೆ ಅಷ್ಟರ ಮಟ್ಟಿಗೆ ಅಂತರ್ಜಲ ಕುಸಿತವಾದರೆ ಅದರ ನಷ್ಟ ಬೆಂಗಳೂರಿಗರು ಅನುಭವಿಸಬೇಕು.
ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಕೆರೆಗಳ ಹೂಳೆತ್ತುವಿಕೆ, ಅನಧಿಕೃತ ಒತ್ತುವರಿ ತೆರವು, ಕೊಳಚೆ ನೀರು ಕೆರೆಗಳಿಗೆ ಸೇರದಂತೆ ತಡೆಯುವ ಮಹತ್ವದ ಕೆಲಸಗಳನ್ನು ಸೇರುಸುವುದನ್ನು ಬಿಟ್ಟು ಅನಗತ್ಯ ಕಾರ್ಯಗಳಿಗೆ ಪಾಲಿಕೆ ಅಧಿಕಾರಿಗಳು ಈ ಬಾರಿಯೂ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ನಿಜಕ್ಕೂ ದುರದೃಷ್ಟಕರ. ಇನ್ನು ನೂತನ ಆಯವ್ಯಯದಲ್ಲಿ ಶಿಕ್ಷಣ ವಿಭಾಗಕ್ಕೆ 133.35 ಕೋಟಿ ರೂ. ಅನುದಾನ ಘೋಷಿಸುವ ಸಾಧ್ಯತೆಯಿದೆ.
2024-25 ನೇ ಸಾಲಿನ ಬಜೆಟ್ ಅನುಷ್ಠಾನ ಆಗಿದ್ದೇಷ್ಟು? :
ಬೆಂಗಳೂರಿನಲ್ಲಿ ಪ್ರವಾಸದ ಆಕರ್ಷಣೀಯ ಸ್ಥಳವಾಗಿ 350 ಕೋಟಿ ರೂ. ಅಂದಾಜು ವೆಚ್ಚದ ಸ್ಕೈ-ಡೆಕ್ ನಿರ್ಮಾಣ ಯೋಜನೆಗೆ 2024-25ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನ ಘೋಷಣೆಯಾಗಿದ್ದೇ ಬಂತು. ಈತನಕ ಸ್ಕೈ-ಡೆಕ್ ಯೋಜನೆಗೆ ಜಾರಿಗೆ ಬಂದಿಲ್ಲ. ರಾಜಧಾನಿಯ ಪ್ರಮುಖ ರಸ್ತೆ, ಮೇಲ್ಸೇತುವೆ, ಉದ್ಯಾನವನ ಮತ್ತಿತರ ಕಡೆ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಅಳವಡಿಕೆಯಾಗದೆ ಕೇವಲ ಪುಸ್ತಕದಲ್ಲಷ್ಟೇ ಉಳಿದಿದೆ. ಕಲ್ಯಾಣ ವಿಭಾಗದ ಕಾರ್ಯಕ್ರಮಗಳ ಪೈಕಿ ಬಹುತೇಕ ಯೋಜನೆಗಳಿಗೆ ಆರ್ಥಿಕ ವರ್ಷಾಂತ್ಯವಾದ ಈಗ ಗಡಿಬಿಡಿಯಲ್ಲಿ ಟೆಂಡರ್ ಕರೆಯುವ, ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಿದ್ಯುತ್ ವಾಹನ, ಸಹಾಯಧನ, ಇ-ವೆಂಡಿಂಗ್ ರಿಕ್ಷಾ ವಿತರಿಸುವ ಧಾವಂತದಲ್ಲಿದೆ ಪಾಲಿಕೆ.

ಕಳೆದ ಬಜೆಟ್ ನಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರುತ್ತೇವೆ ಎಂದು ಹೇಳಲಾಗಿತ್ತು. ಆದರೆ ಜಾಹೀರಾತು ನೀತಿ ಕಗ್ಗಂಟಾಗಿ ಕೋರ್ಟ್ ಮೆಟ್ಟಲೇರಿದ್ದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿನ 20 ಲಕ್ಷ ಆಸ್ತಿಗಳನ್ನು ಗಣಕೀರಣ ಮಾಡುತ್ತೇವೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಆದರೆ ಅಷ್ಟೂ ಜನರಿಗೆ ಇನ್ನೂ ಅಂತಿಮ ಇ-ಖಾತಾ ಲಭ್ಯವಾಗಿಲ್ಲ. ಕೇವಲ 2.71 ಲಕ್ಷ ಜನರಿಗೆ ಮಾತ್ರ ಅಂತಿಮ ಇ-ಖಾತಾ ಲಭ್ಯವಾಗಿದೆ. ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಿಸಲು ತೆರೆದ ಬಾವಿ ಹಾಗೂ ಕಲ್ಯಾಣಿಗಳ ಪುನರುಜ್ಜೀವನಗೊಳಿಸುತ್ತೇವೆ ಎಂದು ಹೇಳಿದ್ದೇ ಬಂತು. ಸೂಕ್ತ ರೀತಿ ಕಾರ್ಯರೂಪಕ್ಕೆ ಬರಲಿಲ್ಲ.
ನೆಟ್ಟ ಗಿಡದಲ್ಲಿ ಬದುಕ್ಕಿದ್ದೆಷ್ಟು? ಬಾಡಿ ಹೋದವೆಷ್ಟು?
ಎರಡು ಹೊಸ ಹೈಟೆಕ್ ಸಸ್ಯ ಕ್ಷೇತ್ರ ಬಜೆಟ್ ಭಾಷಣಕ್ಕಷ್ಟೇ ಸೀಮಿತವಾಯ್ತು :
ಪ್ರತಿವರ್ಷ ಬಿಬಿಎಂಪಿ ಅರಣ್ಯ ವಿಭಾಗ ಅಷ್ಟು ಲಕ್ಷ ಗಿಡ ನೆಡಲಾಗಿದೆ. ಇಷ್ಟು ಲಕ್ಷ ಗಿಡ ನೆಡಲಾಗಿದೆ ಎಂದು ಹೇಳುತ್ತಲೇ ಬಂದಿದೆ. ಆದರೆ ನೆಟ್ಟ ಎಷ್ಟು ಗಿಡಗಳು ಬೆಳೆದಿವೆ. ಎಷ್ಟು ಹಾಳಾಗಿವೆ ಎಂಬುದರ ಬಗ್ಗೆ ಪಾರದರ್ಶಕವಾಗಿ ಘೋಷಿಸುವುದೇ ಇಲ್ಲ. ನೆಪಮಾತ್ರಕ್ಕೆ ಗಿಡಗಳ ಕಳೆದ ಬಜೆಟ್ ನಲ್ಲಿ ಬೊಮ್ಮನಹಳ್ಳಿ, ಯಲಹಂಕ ಸ್ಥಳಗಳಲ್ಲಿ 2 ಹೊಸ ಹೈಟೆಕ್ ಸಸ್ಯ ಕ್ಷೇತ್ರ ಸ್ಥಾಪಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಹೇಳಲಾಗಿತ್ತು. ಆದರೆ ಇನ್ನೂ ಆ ಸಸ್ಯಕ್ಷೇತ್ರಗಳು ಪೂರ್ಣ ರೀತಿ ಅನುಷ್ಠಾನಕ್ಕೆ ಬಂದಿಲ್ಲ.
ಬಜೆಟ್ ಪುಸ್ತಕದಲ್ಲೇ ಕೂತಳು “ಶರಣೆ ಸತ್ಯಕ್ಕ”
ಟೆಂಡರ್ ಬಲೆಯಲ್ಲೇ ಸಿಲುಕಿದೆ ಶಿ-ಟಾಯ್ಲೆಟ್
ಇನ್ನು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಸ್ವಚ್ಛ ಬೆಂಗಳೂರಿನಡಿ ತ್ಯಾಜ್ಯ ಸಂಸ್ಕರಣೆ ಕೇಂದ್ರವನ್ನು ತಲಾ 50 ರಿಂದ 100 ಎಕರೆ ಜಾಗದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿತ್ತು. ಬೆಂಗಳೂರು ಉತ್ತರ ದಿಕ್ಕಿನಲ್ಲಿ ಟೆರ್ರಾಫಾರ್ಮದಲ್ಲಿ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಗೊಲ್ಲಹಳ್ಳಿಯಲ್ಲಿ ಸಮಗ್ರ ತ್ಯಾಜ್ಯನಿರ್ವಹಣಾ ಘಟಕ ನಿರ್ಮಾಣಕ್ಕೆ ಜಾಗ ಗುರ್ತಿಸಲಾಗಿದೆ. ಉಳಿದ ಎರಡು ಕೇಂದ್ರ ನಿರ್ಮಾಣಕ್ಕೆ ಜಾಗವನ್ನು ಗುರ್ತಿಸುವಲ್ಲಿ ಬೆಂಗಳೂರು ತ್ಯಾಜ್ಯ ನಿರ್ವಹಣಾ ಕಂಪನಿ ವಿಫಲವಾಗಿದೆ. ಮಹಿಳೆಯರಿಗಾಗಿ 100 “She Toilets” ನಿರ್ಮಿಸುವುದಾಗಿ ತಿಳಿಸಲಾಗಿತ್ತು. ಆದರೆ ಆ ಯೋಜನೆಯಿನ್ನು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ. ಸಂಪೂರ್ಣ ಅನುಷ್ಠಾನವಾಗಿಲ್ಲ. ಪಾಲಿಕೆಯ ಪ್ರತಿ ವಲಯದಲ್ಲಿ ತಲಾ ಒಬ್ಬರಂತೆ 8 ಮಂದಿ ಪೌರಕಾರ್ಮಿರನ್ನು ಗುರ್ತಿಸಿ ಕಾರ್ಮಿಕ ದಿನಾಚರಣೆಯಂದು ಶರಣೆ ಸತ್ಯಕ್ಕ ಪ್ರಶಸ್ತಿ ನೀಡುವ ಘೋಷಣೆ ಬಜೆಟ್ ಪುಸ್ತಕದಲ್ಲೇ ಕೂತಿದೆ.
ಸುಗಮವಾಗದ ಸಂಚಾರ :
ರಾಜಧಾನಿ ಬೆಂಗಳೂರಿನ ರಾಜಕಾಲುವೆ ಇಕ್ಕೆಲಗಳಲ್ಲಿ ಸಂಚಾರಯುಕ್ತ ರಸ್ತೆಗಳು ಯೋಜನೆಯಡಿಯಲ್ಲಿ 100 ಕೋಟಿ ರೂ.ಗಳ ಅನುದಾನ ನೀಡುತ್ತೇವೆ ಅಂತ ಹೇಳಲಾಗಿತ್ತು. ಆದರೆ ರಾಜಕಾಲುವೆ ಪಕ್ಕ ಓಡಾಡಿದ ನಾಗರೀಕರಿಗೆ ಕೊಳಚೆ ವಾಸನೆ ಲಭ್ಯವಾಯಿತೇ ವಿನಃ ಹೊಸ ರಸ್ತೆಗಳಲ್ಲಿ ಓಡಾಡುವ ಭಾಗ್ಯ ಸಿಗಲಿಲ್ಲ. ಬೆಂಗಳೂರಿನ ಸಮಗ್ರ ಸಂಚಾರ ಯೋಜನೆಯಡಿಯಲ್ಲಿ 2024-25ನೇ ಸಾಲಿನ ಬಜೆಟ್ ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಮೂಲ ನಿಧಿ ನೀಡಲಾಗಿತ್ತು. ಆ ಯೋಜನೆಯಿನ್ನೂ ಸಮಗ್ರ ಯೋಜನಾ ವರದಿಯೇ ಅಂತಿಮ ಹಂತಕ್ಕೆ ಬಂದಿಲ್ಲ.
ಶಿಕ್ಷಣ ಕ್ಷೇತ್ರದಲ್ಲೇನಾಯ್ತು ಕೆಲಸಗಳು? :
ಕಳೆದ 2024-25ನೇ ಸಾಲಿನ ಬಡೆಟ್ ನಲ್ಲಿ ಪಾಲಿಕೆಯ ಶಾಲಾ ಮತ್ತು ಕಾಲೇಜು ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಸೈನ್ಸ್ ಲ್ಯಾಬ್ ಇತ್ಯಾದಿಗಳಿಗೆ 10 ಕೋಟಿ ರೂ. ಒದಗಿಸಲಾಗಿತ್ತು. ಹೊಸ ಶಾಲಾ- ಕಾಲೇಜು ಕಟ್ಟಡ ಅಭಿವೃದ್ಧಿಗೆ 35 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು ಎಂದು ಬಜೆಟ್ ಭಾಷಣದಲ್ಲಿ ಹೇಳಲಾಗಿತ್ತು. ಆದರೆ ಒಟ್ಟಾರೆ ಬಿಬಿಎಂಪಿ ಶಿಕ್ಷಣ ವಿಭಾಗದಲ್ಲಿ ಶೇ.60ರಷ್ಟು ಬಜೆಟ್ ಅನುಷ್ಠಾನವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಬಜೆಟ್ ತಯಾರಿಯಲ್ಲಿ ಅನುಭವಿ ಸಿಬ್ಬಂದಿ ಕೊರತೆ :
ಈ ಹಿಂದೆ ಜನಪ್ರತಿನಿಧಿಗಳದ್ದ ಅವಧಿಯಲ್ಲಿ ಬೆಂಗಳೂರಿನ ಬಗ್ಗೆ ಸಾಕಷ್ಟು ಮಾಹಿತಿ, ತಿಳುವಳಿಕೆ ಹಾಗೂ ಜ್ಞಾನ ಹೊಂದಿದ ಕೆಳಹಂತದ ಅಧಿಕಾರಿಗಳು, ಅನುಭವಿ ಕಾರ್ಪೊರೇಟರ್ ಗಳು ಬಜೆಟ್ ಗೆ ತಳಮಟ್ಟದಿಂದಲೇ ಸಾಕಷ್ಟು ಸಲಹೆ ನೀಡುತ್ತಿದ್ದರು. ಅವುಗಳೆಲ್ಲವನ್ನೂ ಕ್ರೋಢೀಕರಿಸಿ, ದಶಕಗಳಿಂದ ಹಲವು ಪಾಲಿಕೆ ಬಜೆಟ್ ಗಳನ್ನು ಸಿದ್ಧಪಡಿಸುವ ತಂಡದಲ್ಲಿ ಸಾಕಷ್ಟು ಅಧಿಕಾರಿಗಳಿದ್ದರು. ಆದರೀಗ ಕೇವಲ ಬೆರಳೆಣಿಕೆಯಷ್ಟು ಅನುಭವಿ ಅಧಿಕಾರಿಗಳು ಬಜೆಟ್ ತಯಾರಿಸುವ ತಂಡದಲ್ಲಿದ್ದಾರೆ. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ವಾಸ್ತವಿಕ ಬಜೆಟ್ ಎಂದು ಬಾಯಲ್ಲಿ ಹೇಳುತಿದ್ದರೂ ಪರಿಣಾಮಕಾರಿ ಆಯವ್ಯಯ ತಯಾರಿಕೆ ಆಗುತ್ತಿಲ್ಲ ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ತಿಳಿಸಿದ್ದಾರೆ.
2024-25ನೇ ಸಾಲಿನ ಬಜೆಟ್, ಟೆಂಡರ್ ಬಜೆಟ್ ಎನ್ನಬಹುದು :
ಒಟ್ಟಾರೆ ಜನಪ್ರತಿನಿಧಿಗಳಿಲ್ಲದೆ ಸತತ ಐದನೇ ವರ್ಷ ಹಣಕಾಸು ವಿಶೇಷ ಆಯುಕ್ತರು ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್ ಮಂಡಿಸಲು ಅಂತಿಮ ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿಯ ಬಜೆಟ್ ವೆಚ್ಚದ ದೃಷ್ಟಿಯಿಂದ ನೋಡುವಾಗ ಶೇ.70ರಷ್ಟು ಹಣ ಪಾಲಿಕೆ ಹಣಕಾಸು ವಿಭಾಗದಿಂದ ಸಂಬಂಧಿಸಿದ ವಲಯ ಹಾಗೂ ವಿಭಾಗಗಳಿಗೆ ಹಂಚಿಕೆಯಾಗಿದೆ. ಆದರೆ ಬಹಳಷ್ಟು ಕಾಮಗಾರಿಗಳು, ಯೋಜನೆಗಳು ಟೆಂಡರ್ ಹಂತದಲ್ಲಿವೇ ಇಲ್ಲವೇ, ಹಲವು ಕಾಮಗಾರಿಗಳು ಆರಂಭವೇ ಆಗಿಲ್ಲ ಎಂಬ ಮಾಹಿತಿಗಳು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.