ಬೆಂಗಳೂರು, ಮಾ.20 www.bengaluruwire.com : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಂದಾಯ ಭವನದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ಡಿಸಿ ಕ್ಯಾಂಟಿನ್’ಗೆ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.
ನಗರ ಜಿಲ್ಲಾಧಿಕಾರಿ ಜಗದೀಶ ಅವರ ಆದೇಶದ ಮೇರೆಗೆ ಉತ್ತರ ತಾಲ್ಲೂಕು ತಹಶೀಲ್ದಾರ್ ವಿಜಯ್ ಕುಮಾರ್ ಮತ್ತು ಸಿಬ್ಬಂದಿ ಬುಧವಾರ ಬೆಳಗ್ಗೆ ಕ್ಯಾಂಟಿನ್ ಮುಚ್ಚಿಸಿ, ಹೋಟೆಲ್ ಗೆ ಬೀಗ ಹಾಕಿ ಮೊಹರು ಹಾಕಿದರು. ಪರಿಷ್ಕೃತ ಬಾಡಿಗೆ ನೀಡುವ ಬಗ್ಗೆ ಹೋಟೆಲ್ ನಡೆಸುತ್ತಿದ್ದ ಮಾಲೀಕರು ಮತ್ತು ಜಿಲ್ಲಾಡಳಿತದ ನಡುವೆ ಮಾತುಕತೆ ವಿಫಲವಾಗಿತ್ತು.

ಅಲ್ಲದೆ ಕ್ಯಾಂಟಿನ್ ಗುತ್ತಿಗೆ ಅವಧಿ ಮುಗಿದಿದ್ದರಿಂದ, ಗುತ್ತಿಗೆದಾರರು ನವೀಕರಣ ಕುರಿತು ನಗರದ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯ ಪರವಾಗಿ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲಾಡಳಿತ ಕ್ಯಾಂಟಿನ್ ಮಾಲೀಕರಿಗೆ ತೆರವುಗೊಳಿಸಲು ಸೂಚಿಸಿದ್ದರು.
‘ಡಿಸಿ ಕ್ಯಾಂಟೀನ್’ ಆಹಾರದ ಗುಣಮಟ್ಟದ ಬಗ್ಗೆಯೂ ಸಾರ್ವಜನಿಕರಿಂದ ಹಲವು ದೂರುಗಳಿದ್ದವು. ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಸಿಗರೇಟ್, ಗುಟುಕಾ ಸೇವನೆಯು ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಲಗಾಮು ಹಾಕುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದೆ.























