ಫ್ಲೋರಿಡಾ, ಮಾ.19 www.bengaluruwire.com : ಬಾಹ್ಯಾಕಾಶ ನೌಕೆಯ ತಾಂತ್ರಿಕ ದೋಷದ ಕಾರಣ ಆಕಾಶದಲ್ಲೇ ಕಳೆದ 9 ತಿಂಗಳು ಕಳೆದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಹಾಗೂ ಬುಚ್ ವಿಲ್ಮೋರ್ (Butch Wilmore) ಅವರು ಕೊನೆಗೂ ಭೂಮಿಗೆ ಮರಳಿದ್ದಾರೆ.
ನಾಸಾ (NASA) ಹಾಗೂ ಸ್ಪೇಸ್ ಎಕ್ಸ್ (SpaceX) ಜಂಟಿಯಾಗಿ ಈ ಗಗನಯಾತ್ರಿಗಳನ್ನು ಭೂಮಿಗೆ ಕರೆತಂದಿದೆ. ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ನೌಕೆ (SpaceX Crew Dragon capsule) ಮೂಲಕ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ವಾಪಸ್ ಆಗಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಇಂದು (ಮಾ.19) ಬೆಳಗಿನ ಜಾವ 3.27ರ ಸುಮಾರಿಗೆ ಫ್ಲೋರಿಡಾದ ಸಮುದ್ರದ ಮೇಲೆ ನೌಕೆ ಬಂದಿಳಿಯಿತು. ಬಳಿಕ ನಾಸಾ ವಿಜ್ಞಾನಿಗಳ ತಂಡ ಸಮುದ್ರದಿಂದ ಸುರಕ್ಷಿತವಾಗಿ ಆ ನೌಕೆಯನ್ನು ದಡಕ್ಕೆ ಕರೆತಂದರು.

ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಬೆಳಿಗ್ಗೆ 10:35ಕ್ಕೆ ಫ್ರೀಡಂ ಡ್ರಾಗನ್ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟಿತು. ನಿಕ್ ಹೇಗ್ (Nick Hague), ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ (Russian cosmonaut Alexander Gorbunov) ನೌಕೆಯಲ್ಲಿದ್ದರು. ಭಾರತೀಯ ಕಾಲಮಾನದ ಪ್ರಕಾರ ಸುಮಾರು 3.27ಕ್ಕೆ ಡ್ರಾಗನ್ ನೌಕೆಯು ಮೆಕ್ಸಿಕನ್ ಕೊಲ್ಲಿಯಲ್ಲಿ ಫ್ಲೋರಿಡಾದ ಕರಾವಳಿಗೆ ಸಮೀಪವಿರುವ ಸಮುದ್ರದಲ್ಲಿ ಲ್ಯಾಂಡ್ ಆಯಿತು.

ಆನಂತರ ನೌಕೆಯನ್ನು ನಾಸಾ ಸಿಬ್ಬಂದಿಗಳ ತಂಡ ಸಮುದ್ರದಿಂದ ಮೇಲೆತ್ತಿತು. ಸುನಿತಾ ಹಾಗೂ ಉತರ ಗಗನಯಾತ್ರಿಗಳು ನೌಕೆಯಿಂದ ಹೊರಬಂದರು. ಬಳಿಕ ಅವರೆಲ್ಲರ ವೈದ್ಯಕೀಯ ತಪಾಸಣೆ ನಡೆಯಿತು.

ಫಲಿಸಿದ ಲಕ್ಷಾಂತರ ಜನರ ಪ್ರಾರ್ಥನೆ :
ಕಳೆದ 9 ತಿಂಗಳಿನಿಂದ ಇವತ್ತಲ್ಲ, ನಾಳೆ ಎಂದು ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದ ಇಬ್ಬರು ಗಗನಯಾತ್ರಿಗಳ ಆಗಮನ ಅಮೆರಿಕ, ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಸಂಭ್ರಮಪಡುತ್ತಿದೆ. ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿ ಬರಲೆಂದು ಭಾರತದ ಹಲವು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಸಲ್ಲಿಸಲಾಗಿತ್ತು. ಹಲವರು ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲು ಪ್ರಾರ್ಥಿನೆ ಸಲ್ಲಿಸಿದ್ದರು. ಇದೀಗ ಲಕ್ಷಾಂತರ ಜನರ ಪ್ರಾರ್ಥನೆ ಫಲ ನೀಡಿದೆ. ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಬಂದಿದ್ದಾರೆ.

ಸಮುದ್ರದ ಮೇಲೆ ಬಂದಿಳಿದ ನೌಕೆಯ ಕಾರ್ಯಾಚರಣೆ ಹೇಗಿತ್ತು? :
ಸಮುದ್ರದಲ್ಲಿ ಇಳಿಯುತ್ತಿದ್ದಂತೆ ತ್ವರಿತ ಕಾರ್ಯಾಚರಣೆ ನಡೆಸಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಹೊತ್ತು ಬಂದ ನೌಕೆ ಫ್ಲೋರಿಡಾದಲ್ಲಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಇಳಿದಿತ್ತು. ನೌಕೆ ಸಮುದ್ರದಲ್ಲಿ ಇಳಿಯುತ್ತಿದ್ದಂತೆ ನಾಸಾ ಸಿಬ್ಬಂದಿಗಳು, ಸ್ಪೇಸ್ ಎಕ್ಸ್ ಸಿಬ್ಬಂದಿ, ವಿಶೇಷ ಹಡುಗು, ರಕ್ಷಣೆಗೆ ಧಾವಿಸಿತು.
ಮುಳುಗು ತಜ್ಞರು ಸೇರಿದಂತೆ ಹಲವು ಸಿಬ್ಬಂದಿ ಬಾಹ್ಯಾಕಾಶ ನೌಕೆಯನ್ನು ರಕ್ಷಣಾ ಹಡಗಿನ ಮೂಲಕ ರಕ್ಷಿಸಿದ್ದಾರೆ. ಬಳಿಕ ನೌಕೆಯ ಹ್ಯಾಚ್ ತೆಗೆದು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಹೊರತಂದರು. ಕಳೆದ 9 ತಿಂಗಳು ಗುರುತ್ವಾಕರ್ಷಣ ಬಲವಿಲ್ಲದೆ ಕಳೆದ ಗಗನಯಾತ್ರಿಗಳು ಭೂಮಿ ಮೇಲೆ ಗುರುತ್ವಾಕರ್ಷಣೆಗೆ ಸಿಲುಕಿಕೊಂಡಾಗ ಅವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಅದರ ಮೇಲೆ ವೈದ್ಯರು ಗಮನಹರಿಸಿದ್ದಾರೆ.
8 ದಿನದ ಕಾರ್ಯಾಚರಣೆ 9 ತಿಂಗಳಿಗೆ ವಿಸ್ತರಣೆಯಾಗಿತ್ತು :
ಬೋಯಿಂಗ್ ಸ್ಟಾರ್‌ಲೈನರ್ ನೌಕೆ (Boeing Starliner spacecraft) ಮೂಲಕ 8 ದಿನಗಳ ಅಧ್ಯಯನ ಮಿಷನ್‌ಗಾಗಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದರು. ಜೂನ್ 5 ರಂದು ನೌಕೆ ಉಡಾವಣೆಗೊಂಡಿತ್ತು. ನಾಸಾ ವೇಳಾಪಟ್ಟಿ ಪ್ರಕಾರ ಜೂನ್ 14 ರಂದು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಲಿಯಂ ಸೋರಿಕೆ (Helium leak) ಸರಿಪಡಿಸುವ ಪ್ರಯತ್ನಗಳು ನಡೆದಿತ್ತು. ಹೀಗಾಗಿ ಗಗನಯಾತ್ರಿಗಳು ಮರಳುವ ದಿನಾಂಕ ಹಂತ ಹಂತವಾಗಿ ಮುಂದಕ್ಕೆ ಹೋಗುತ್ತಲೇ ಇತ್ತು.
ಆಗಸ್ಟ್ 24ರಂದು ಸ್ಟಾರ್‌ಲೈನರ್ ಭೂಮಿಗೆ ಮರಳಿತ್ತು. ಆದರೆ ಗಗನಯಾತ್ರಿಗಳು ಪ್ರಯಾಣಿಸುವಂತಿರಲಿಲ್ಲ. ಹೀಗಾಗಿ ಆ ಗಗನಯಾನಿಗಳ ಮರಳುವಿಕೆ ಮತ್ತಷ್ಟು ವಿಳಂಬವಾಯಿತು. ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ ಎಕ್ಸ್ ಜೊತೆ ಸೇರಿ ನಾಸಾ ಮಾರ್ಚ್ ತಿಂಗಳಲ್ಲಿ ಗನನಯಾತ್ರಿಗಳ ಕರೆತರಲು ಯೋಜನೆ ರೂಪಿಸಿತು. ಆ ಪ್ರಕಾರ ಬಾಹ್ಯಾಕಾಶದಿಂದ ಈ ಇಬ್ಬರು ಗನನಯಾತ್ರಿಗಳು ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. (Photo & Video Credit : NASA & SpaceX)