ಬೆಂಗಳೂರು: ಮಾ.18 www.bengaluruwire.com : ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಕಟ್ಟಡಗಳು ಹಾಗೂ ಸರ್ಕಾರದ ಅಂಗ ಸಂಸ್ಥೆ (PSUs)ಗಳಿಗೆ ಇದೇ 31ನೇ ಮಾರ್ಚ್ ವರೆಗೆ ಒಂದು ಬಾರಿಯ ಪರಿಹಾರ ಯೋಜನೆ (One Time Settlement -ಓಟಿಎಸ್) ಅನ್ನು ಜಾರಿಗೆ ತರಲಾಗಿದೆ.
ಈ ಸಂಬಂಧ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಸರ್ಕಾರಿ ಅಂಗ ಸಂಸ್ಥೆಗಳು ಓಟಿಎಸ್ ಅಡಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಅನುಸಾರ ಹಣ ಪಾವತಿಸಬಹುದು ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
2019-20ನೇ ಸಾಲಿನಿಂದ ತೆರಿಗೆ ಬಾಕಿಯಿದ್ದಲ್ಲಿ ಶೂನ್ಯ ಬಡ್ಡಿ ಹಾಗೂ 100 ರೂ. ದಂಡ ಶುಲ್ಕ ಪಾವತಿಸುವುದರೊಂದಿಗೆ ಓಟಿಎಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಸರ್ಕಾರಿ ಅಂಗ ಸಂಸ್ಥೆಗಳು ಇದರ ಉಪಯೋಗ ಪಡೆದುಕೊಂಡು ಮಾರ್ಚ್ 31ರೊಳಗಾಗಿ ಬಾಕಿ ಆಸ್ತಿ ತೆರಿಗೆ ಪಾವತಿಸುವಂತೆ ಹೇಳಿದ್ದಾರೆ.
ಓಟಿಎಸ್ ಸೌಲಭ್ಯ ಪಡೆಯದವರು ಏಪ್ರಿಲ್ 2025 ರಿಂದ ಆಸ್ತಿ ತೆರಿಗೆಯ ದುಪ್ಪಟು ಪಾವತಿಸಬೇಕಾಗಿರುತ್ತದೆ ಎಂದು ಸರ್ಕಾರದ ಕಟ್ಟಡಗಳು ಹಾಗೂ ಸರ್ಕಾರದ ಅಂಗ ಸಂಸ್ಥೆಗಳಿಗೆ ಮನವರಿಕೆ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಉಲ್ಭಣವಾಗಿದ್ದ ಕಸದ ಸಮಸ್ಯೆಯನ್ನು ನಿವಾರಣೆ ಮಾಡಲಾಗಿದೆ. ನಗರದಲ್ಲಿ ಮಿಟ್ಟಗಾನಹಳ್ಳಿ ಹಾಗೂ ಕಣ್ಣೂರು ಭೂಭರ್ತಿ ಪ್ರದೇಶದದಲ್ಲಿ ಕಸ ವಿಲೇವಾರಿ ಮಾಡುವ ವಿಚಾರವಾಗಿ ಸ್ಥಳೀಯರಿಂದ ಆಗಿದ್ದ ಸಮಸ್ಯೆಯನ್ನು ಬಹುತೇಕ ಬಗೆಹರಿಸಲಾಗಿದ್ದು, ಎಂದಿನಂತೆ ತ್ಯಾಜ್ಯ ವಿಲೇವಾರಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿದಿನ ಸುಮಾರು 2500 ಟನ್ ಮಿಶ್ರ ತ್ಯಾಜ್ಯವನ್ನು ಭೂಭರ್ತಿ ಘಟಕ, 1000 ಟನ್ ಸಂಸ್ಕರಣೆಯಾಗುತ್ತಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆಗಾಗಿ ಹೊಸ ಯೋಜನೆಯಂತೆ ಟೆಂಡರ್ ಕರೆಯಲಾಗಿತ್ತು. ಆ ಟೆಂಡರ್ ನಲ್ಲಿ ಭಾಗವಹಿಸುವಿಕೆ ಸಂಖ್ಯೆ ಕಡಿಮೆಯಿದ್ದ ಪರಿಣಾಮ, ಟೆಂಡರ್ ನಲ್ಲಿ ಭಾಗವಹಿಸದಿರಲು ಕಾರಣಗಳೇನು ಎಂಬುದನ್ನು ಗುರುತಿಸಲಾಗಿದೆ. ಇದೀಗ ಎಲ್ಲಾ ಅಂಶಗಳನ್ನು ಸೇರ್ಪಡೆ ಮಾಡಿ ಪುನರ್ ಟೆಂಡರ್ ಕರೆಯಲಾಗುತ್ತಿದೆ. ಅಲ್ಲದೆ ಘನತ್ಯಾಜ್ಯ ಸಮಗ್ರ ವಿಲೇವಾರಿಗಾಗಿ ದೊಡ್ಡಬಳ್ಳಾಪುರದ ಟೆರ್ರಾಫಾರ್ಮ್ ಬಳಿ 100 ಎಕರೆ ಜಾಗವನ್ನು ಅಂತಿಮಗೊಳಿಸಲಾಗಿದೆ, ಇಲ್ಲಿ ಸರ್ಕಾರದ 50 ಎಕರೆ ಭೂಮಿಯಿದ್ದು, ಖಾಸಗಿಯವರಿಂದ 65 ಎಕರೆ ಖರೀದಿಲಾಗುತ್ತಿದೆ. ಇದಲ್ಲದೆ ನೈಸ್ ರಸ್ತೆಗೆ ಗೊಲ್ಲರಹಳ್ಳಿ ಬಳಿ ನೀಡಿರುವ ಭೂಮಿಯಲ್ಲಿ 100 ಎಕರೆ ಪಡೆದುಕೊಳ್ಳಲಾಗುತ್ತಿದೆ. ಈ ಎರಡು ಸ್ಥಳಗಳಲ್ಲಿ ಸಮಗ್ರ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ಆರಂಭವಾಗಲಿದೆ ಎಂದರು.
ಇದನ್ನೂ ಓದಿ : Video News | ಹಾಡಹಗಲೇ ಮನೆಯಿಂದ ಗ್ಯಾಸ್ ಸಿಲಿಂಡರ್ ಹೊತ್ತೊಯ್ದ ಕಳ್ಳ : ಸಿಸಿಟಿವಿಯಲ್ಲಿ ಕಳ್ಳತನ ದೃಶ್ಯ ದಾಖಲು
ಮಿಟ್ಟಗಾನಹಳ್ಳಿ, ಕಣ್ಣೂರಿನ ಬಳಿ ಸ್ಥಳೀಯರು ಹಾಗೂ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರ ನಡುವೆ ಕೆಲ ಭಿನ್ನಾಭಿಪ್ರಾಯಗಳಿಂದ ಕಸದ ಸಮಸ್ಯೆ ಉಂಟಾಗಿದ್ದು, ಬಹುತೇಕ ಸಮಸ್ಯೆಯನ್ನು ಬಗೆಹರಿಸಲಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಭಿವೃದ್ಧಿಗಾಗಿ ವ್ಯಯಿಸಬೇಕಿರುವ ಹಣದ ವಿಚಾರವಾಗಿ ಟೆಂಡರ್ ಮಾಡಿ ಕಾರ್ಯಾದೇಶ ನೀಡಿ ಶೀಘ್ರ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಮಿಟ್ಟಗಾನಹಳ್ಳಿ, ಕಣ್ಣೂರಿನ ಬಳಿ ರಾತ್ರಿ ವೇಳೆ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಹಗಲಿನಲ್ಲಿಯೂ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇರುವ ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಇರುವ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ಹೇಳಿದರು.
ತ್ಯಾಜ್ಯ ದ್ರವ ಸಂಸ್ಕರಣೆಗೆ ಕ್ರಮ:
ಮಿಟ್ಟಗಾನಹಳ್ಳಿ ಭೂಭರ್ತಿ ಘಟಕದಲ್ಲಿ 275 ಕೋಟಿ ಲೀಟರ್ ತ್ಯಾಜ್ಯ ದ್ರವ (ಲಿಚೆಟ್) ಸಂಗ್ರಹವಾಗಿದ್ದು, ಅದನ್ನು ಸಂಸ್ಕರಿಸಲು ಟೆಂಡರ್ ಕರೆದು 3 ರಿಂದ 4 ವರ್ಷಗಳಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ಸದ್ಯ 100 ಕೆ.ಎಲ್.ಡಿ ಹಾಗೂ 25 ಕೆ.ಎಲ್.ಡಿ ಸಂಸ್ಕರಣ ಘಟಕಗಳಿದ್ದು, ಹೊಸದಾಗಿ 2000 ಕೆ.ಎಲ್.ಡಿ ಘಟಕವನ್ನು ಸ್ಥಾಪಿಸಲಾಗುವುದು. ಅದರ ಮೂಲಕ ಲಿಚೆಟ್ ಅನ್ನು ಸಂಸ್ಕರಿಸಲಾಗುವುದು. ಲಿಚೆಟ್ ಸಂಸ್ಕರಣೆಗಾಗಿ ಸರಾಸರಿ 474 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ತಿಳಿಸಿದರು.
ಮಾ.27ರಂದು ಬಿಬಿಎಂಪಿ ಆಯವ್ಯಯ-2025-26 :
ಬಿಬಿಎಂಪಿ ಬಜೆಟ್ ಮಾ.27ರಂದು ಮಂಡನೆ ಮಾಡಲಾಗುತ್ತಿದೆ. ಈ ಸಂಬಂಧ ಆಡಳಿತಾಧಿಕಾರಿಯವರು ಬೆಂಗಳೂರಿನ ಎಲ್ಲಾ ಶಾಸಕರಿಗೆ ಆಹ್ವಾನ ನೀಡಿದ್ದು, 24ರಂದು ಸಭೆ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸುವಿಕೆಯು ಏ.1ರಿಂದ ಅನುಷ್ಠಾನಕ್ಕೆ ಬರಲಿದೆ. ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿವೆ. ಹೋಟೆಲ್, ತರಕಾರಿ ಅಂಗಡಿ, ದಿನಸಿ ಅಂಗಡಿ ಇವುಗಳಿಗೆ ಒಂದೇ ರೀತಿಯಲ್ಲಿ ಶುಲ್ಕ ವಿಧಿಸಲು ಸಾಧ್ಯವಿಲ್ಲ. ಈ ಕುರಿತು ಸೂಕ್ತ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















