ಬೆಂಗಳೂರು, ಮಾ.18 www.bengaluruwire.com : ಲೋಕೋಪಯೋಗಿ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ ವಿವಿಧ ರೀತಿಯ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಫೆಬ್ರವರಿ ತಿಂಗಳ ತನಕ ಬರೋಬ್ಬರಿ 9,738.49 ಕೋಟಿ ರೂ. ಬಿಲ್ ಮೊತ್ತ ಬಾಕಿ ಇಟ್ಟುಕೊಂಡಿದೆ.
ವಿಧಾನಸಭೆಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸದನದಲ್ಲಿ ಈ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ದಕ್ಷಿಣ ವಲಯ, ಉತ್ತರ ವಲಯ, ಈಶಾನ್ಯ ವಲಯ ಹಾಗೂ ಕೇಂದ್ರ ವಲಯಗಳಿದ್ದು ಆ ಪೈಕಿ ಅತಿ ಹೆಚ್ಚು ಕಾಮಗಾರಿ ಬಿಲ್ ಬಾಕಿ ಧಾರವಾಡದ ಉತ್ತರ ವಲಯದ್ದಾಗಿದ್ದು ಒಟ್ಟು 2,764.29 ಕೋಟಿ ರೂ. ನಷ್ಟು ಹಣವನ್ನು ಕಾಂಟ್ರಾಕ್ಟರ್ ಗಳಿಗೆ ಇಲಾಖೆಯು ಪಾವತಿಸಬೇಕಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿನ ದಕ್ಷಿಣ ವಲಯದಲ್ಲಿ 2,292.03 ಕೋಟಿ ರೂ., ಇತರೆ ವರ್ಗದಲ್ಲಿ 1,796.03 ಕೋಟಿ ರೂ., ಕೇಂದ್ರ ವಲಯವಿರುವ ಶಿವಮೊಗ್ಗ ವ್ಯಾಪ್ತಿಯಲ್ಲಿ 1,524.52 ಕೋಟಿ ರೂ., ಕಲ್ಬುರ್ಗಿಯ ಈಶಾನ್ಯ ವಲಯದಲ್ಲಿ 1,391.47 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ನಿರ್ವಹಿಸಿ ಗುತ್ತಿಗೆದಾರರು ಪಿಡಬ್ಲ್ಯುಡಿ ಇಲಾಖೆಗೆ ಹಣ ಪಾವತಿಸುವಂತೆ ಬಿಲ್ ಸಲ್ಲಿಕೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಡಿಸೆಂಬರ್ 2023ರ ಅಂತ್ಯದ ತನಕ ಬಹುತೇಕ ಬಿಲ್ ಗಳನ್ನು ಈಗಾಗಲೇ ಪಾವತಿಸಲಾಗುತ್ತಿದೆ. ನಂತರದ ಅವಧಿಯ ಬಿಲ್ಲುಗಳು ಮಾತ್ರ ಬಾಕಿಯಿರುತ್ತದೆ. 2023-24 ಹಾಗೂ 2024-25ನೇ ಸಾಲಿನಲ್ಲಿ ಪ್ರಮುಖ ಜಿಲ್ಲಾ ರಸ್ತೆ ಮತ್ತು ಸೇತುವೆಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ನ್ಯಾಯಾಲಯ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನುಮೋದನೆ ನೀಡಿರುವ 16,161 ಕೋಟಿ ರೂ. ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
